ಅತಿಕ್ರಮ ನಿವೇಶನ ತೆರವು ಕಾರ್ಯಾಚರಣೆ

KannadaprabhaNewsNetwork | Published : Jul 6, 2024 12:47 AM

ಸಾರಾಂಶ

ಕಡೂರು, ಪಟ್ಟಣದ ಕೆ.ಹೊಸಳ್ಳಿಯ ಎಮ್ಮೇದೊಡ್ಡಿ ರಸ್ತೆಯ ಪಕ್ಕದಲ್ಲಿರುವ ಅತಿಕ್ರಮಿಸಲಾಗಿದೆ ಎನ್ನಲಾದ ದೊಡ್ಡ ನಿವೇಶನವನ್ನು ಪುರಸಭೆ ಸಿಬ್ಬಂದಿ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸುವ ಮೂಲಕ ಪುರಸಭೆ ವಶಕ್ಕೆ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಕೆ.ಹೊಸಳ್ಳಿಯ ಎಮ್ಮೇದೊಡ್ಡಿ ರಸ್ತೆಯ ಪಕ್ಕದಲ್ಲಿರುವ ಅತಿಕ್ರಮಿಸಲಾಗಿದೆ ಎನ್ನಲಾದ ದೊಡ್ಡ ನಿವೇಶನವನ್ನು ಪುರಸಭೆ ಸಿಬ್ಬಂದಿ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸುವ ಮೂಲಕ ಪುರಸಭೆ ವಶಕ್ಕೆ ಪಡೆಯಲಾಯಿತು. ಸದರಿ ನಿವೇಶನವನ್ನು ಕೆ.ಹೊಸಳ್ಳಿಯ ಗಂಗಾಂಬಿಕಾ ಸಮುದಾಯ ಭವನದ ವಾಹನ ನಿಲುಗಡೆಗೆ ಈ ಜಾಗ ಬಳಕೆ ಯಾಗುತ್ತಿತ್ತು. ಶುಕ್ರವಾರ ಪುರಸಭೆ ಅಸೆಸ್ ಮೆಂಟ್ ನಂಬರ್ 816/787 ನಲ್ಲಿದ್ದ 100×160 ×130 ಅಳತೆ ನಿವೇಶನದ ಸುತ್ತ ನಿರ್ಮಿಸಲಾದ ಕಾಂಪೌಂಡನ್ನು ಜೆಸಿಬಿ ಮತ್ತು ಕ್ರೇನ್ ಗಳ ಸಹಾಯದಿಂದ ತೆರವುಗೊಳಿಸಲಾಯಿತು. ಮುಂಜಾಗ್ರತೆ ಹಿನ್ನೆಲೆಯಲ್ಲಿ ಮೀಸಲು ಪಡೆ ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಗಂಗಾಂಬಿಕಾ ಸಮುದಾಯ ಭವನದ ಆಡಳಿತ ಮಂಡಳಿ ಸದಸ್ಯರು ಹಾಗೂ ಕೆ.ಹೊಸಹಳ್ಳಿ ಗ್ರಾಮಸ್ಥರು ತೆರವು ಕಾರ್ಯಾ ಚರಣೆ ಮಾಡದಂತೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪುರಸಭೆಯವರು ಅದಕ್ಕೆ ಗಮನ ಕೊಡದೆ ತೆರವು ಕಾರ್ಯಾಚರಣೆ ಮುಂದುವರೆಸಿದರು.

ಪ್ರಸ್ತುತ ಈ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಹೆಚ್ಚಿನ ನಷ್ಟವಾಗದಂತೆ ಕಾಂಪೌಂಡ್ ಸ್ಲಾಬ್ ಗಳನ್ನು ತೆಗೆದು ಸಂಬಂಧಿಸಿದವರಿಗೆ ನೀಡಲಾಯಿತು. ಪೊಲೀಸ್ ವೃತ್ತ ನಿರೀಕ್ಷಕ ದುರುಗಪ್ಪ, ಪಿಎಸೈಗಳಾದ ಪವನ್ ಕುಮಾರ್, ನವೀನ್ ಮತ್ತು ಪುರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಕಾರ್ಯಾ ಚರಣೆಯಲ್ಲಿದ್ದರು.

ಕಡೂರು ಪುರಸಭೆಯವರು ಇತ್ತೀಚೆಗೆ ಪುರಸಭೆ ಕಚೇರಿ ಪಕ್ಕದಲ್ಲಿದ್ದ ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಇದೀಗ ಎರಡನೇ ಕಾರ್ಯಾಚರಣೆಯಲ್ಲಿ ಕೋಟ್ಯಂತರ ಮೌಲ್ಯದ ಪುರಸಭೆ ಎರಡನೇ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ.

-- ಬಾಕ್ಸ್--

ಪುರಸಭೆ ಸ್ವಾಧೀನಕ್ಕೆ ಪಡೆದಿರುವ ಈ ಜಾಗದಲ್ಲಿ ಅಮೃತ್- 2.0 ಯೋಜನೆಯಡಿ 15 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್, 1.5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಸಂಪು ಮತ್ತು 8×6 ಮೀಟರ್ ವಿಸ್ತೀರ್ಣದ ಪಂಪ್ ಹೌಸ್ ನಿರ್ಮಾಣ ಮಾಡಲು ಈ ಜಾಗ ಬಳಸಿಕೊಳ್ಳಲು ಅನುಮೋದನೆ ದೊರೆತಿದೆ. ಈ ಆಸ್ತಿಯ ಮೌಲ್ಯ ಸುಮಾರು ಐದು ಕೋಟಿ

-- ಕೆ.ಎಸ್. ಮಂಜುನಾಥ್,

ಮುಖ್ಯಾಧಿಕಾರಿ, ಪುರಸಭೆ. 5ಕೆಕೆಡಿಯು2.ಕಡೂರು ಪಟ್ಟಣದ ಕೆ. ಹೊಸಳ್ಳಿಯಲ್ಲಿ ಅತಿಕ್ರಮಿತ ಎನ್ನಲಾದ ಜಾಗವನ್ನು ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಲಾಯಿತು.

Share this article