ವಿಶೇಷ ವರದಿ ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾನಗರ ಪಾಲಿಕೆ ಅವಧಿ ಸೋಮವಾರಕ್ಕೆ ಮುಗಿದಿದ್ದು, ಶೀಘ್ರ ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗದಂತಹ ಮೂರನೇ ಸ್ತರದ ನಗರಗಳ ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ನಿರ್ಣಾಯಕ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರು ತಮ್ಮ ಸುದೀರ್ಘ ಐದು ವರ್ಷಗಳ ಹಾದಿಯನ್ನು ಪುನರ್ ಅವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.ಸಧ್ಯಕ್ಕೆ 35 ಸದಸ್ಯರು ಪಾಲಿಕೆ ಆಡಳಿತ ದೃಷ್ಟಿಯಿಂದ ನಿರುದ್ಯೋಗಿಗಳಾಗಲಿದ್ದಾರೆ. ಮತ್ತೆ ಎದುರಾಗಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯಲ್ಲಿದ್ದಾರೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆ ಬಳಿಕವಷ್ಟೇ ಪಾಲಿಕೆಯ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಅಂದರೆ, ಸುಮಾರು 6 ತಿಂಗಳ ಕಾಲ ಪಾಲಿಕೆ ಆಡಳಿತ ಅಧಿಕಾರಿಗಳ ತೆಕ್ಕೆಗೆ ಹೋಗಲಿದೆ.
ಆತ್ಮಾವಲೋಕನ ಕಾಲ:35 ಸದಸ್ಯರೂ ತಮ್ಮ ಅವಧಿ ತೃಪ್ತಿದಾಯಕವಾಗಿತ್ತು ಎಂಬ ಮಾತನ್ನು ಆಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಕೂಡ ಪಾಲಿಕೆಯ ಐದು ವರ್ಷದ ಆಡಳಿತದ ಚಿಂತನ ಮಂಥನ ನಡೆಯುತ್ತಿದೆ. ಒಳಿತು ಕೆಡಕುಗಳ ಕುರಿತು ಸಿಂಹಾವಲೋಕನ ಆರಂಭಗೊಂಡಿದೆ. ಹೆಗ್ಗುರುತು ಮೂಡಿಸುವಂತಹ ಯಾವುದೇ ಯೋಜನೆ ಅಥವಾ ಕಾಮಗಾರಿ ನಿರ್ಗಮಿತ ಪಾಲಿಕೆ ಆಡಳಿತದಿಂದ ಬಂದಿಲ್ಲ ಎಂಬುದು ಸಾರ್ವಜನಿಕ ಅಭಿಪ್ರಾಯವಾಗುತ್ತಿದೆ.
ನಿರೀಕ್ಷೆ ಸಂಪೂರ್ಣ ಈಡೇರಿಲ್ಲ:ನಗರಸಭೆಯಿಂದ ಬಡ್ತಿ ಪಡೆದು ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಅದಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆ ಬದಲಾಗಲಿಲ್ಲ ಎಂಬ ಕೊರಗು ಎಲ್ಲರಲ್ಲಿಯೂ ಕಾಡುತ್ತಿದೆ. ಪಾಲಿಕೆಯ ಮಾಸಿಕ ಸಭೆ ಎಂದರೆ ಗದ್ದಲ, ಕೂಗಾಟ, ಕಿರುಚಾಟ ಎಂಬ ಮಾತು ಜನಜನಿತ. ಬದಲಾಗಿ ಅತ್ಯುತ್ತಮ ರೀತಿಯ ಚರ್ಚೆ, ವ್ಯಕ್ತಿ ಕೇಂದ್ರಿತದ ಬದಲಿಗೆ ವಿಷಯ ಕೇಂದ್ರಿತವಾದ ಚರ್ಚೆಗಳು ನಡೆಯಬೇಕೆಂಬ ಜನರ ನಿರೀಕ್ಷೆ ಸಂಪೂರ್ಣ ಈಡೇರಿಲ್ಲ ಎಂಬ ಮಾತು ಸಹ ಬಹುತೇಕ ನಿಜವಾಗಿದೆ. ಅಧ್ಯಯನ ಶೀಲ, ಇನ್ನಷ್ಟು ಅಭಿವೃದ್ಧಿಪರ ಚರ್ಚೆಗಳು ನಡೆಯಬೇಕು ಎಂಬ ನಾಗರೀಕರ ಆಸೆ ಈಡೇರಿಲ್ಲ ಎಂಬದೂ ನಿಜ. ಎಲ್ಲಿ ತಪ್ಪಾಗುತ್ತಿದೆ ಎಂಬುದರ ಕುರಿತು ಮಾಜಿ ಜನಪ್ರತಿನಿಧಿಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಭವಿಷ್ಯದಲ್ಲಿ ಉತ್ತಮ ನಗರ ಪಾಲಿಕೆಯೊಂದು ಸೃಷ್ಟಿಯಾಗಬೇಕಿದೆ. ಹಾಗೆಂದು ಉತ್ತಮ ರೀತಿಯ ಚರ್ಚೆಗಳು ನಡೆದೇ ಇಲ್ಲ ಎಂದಲ್ಲ. ಸಭೆಯ ಗುಣಮಟ್ಟ ಮತ್ತು ಫಲಿತಾಂಶ ಇನ್ನಷ್ಟು ಉತ್ತಮವಾಗಿ ಇರಬೇಕೆಂಬ ಆಶಯ ನಾಗರಿಕರದ್ದಾಗಿದೆ. ಕೆಲವು ಸದಸ್ಯರ ಬದ್ಧತೆ ಕಾರ್ಯವೈಖರಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಅವರಿಗೆ ಸಭೆಯಲ್ಲಿ ಸಿಗಬೇಕಾದಷ್ಟು ಆದ್ಯತೆ ಸಿಕ್ಕಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಪಾಲಿಕೆ ಆಡಳಿತ ವ್ಯವಸ್ಥೆ ಸುಧಾರಿಸಿಲ್ಲ ಎನ್ನುವುದು ಜನರ ಬೇಸರದ ನುಡಿ.ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಆಡಳಿತ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಆಗಬಹುದೆಂಬ ನಿರೀಕ್ಷೆ ಹುಸಿ ಆಗಿರುವುದು ಜನರ ಬೇಸರಕ್ಕೆ ಕಾರಣ. ಸಾಮಾನ್ಯ ನಾಗರಿಕರೊಬ್ಬರು ತಮ್ಮ ಕೆಲಸವನ್ನು ಯಾವುದೇ ವಿಳಂಬ ಇಲ್ಲದೇ, ಅತ್ಯಂತ ಸುಲಭ ಮತ್ತು ಸರಳವಾಗಿ ಪಾಲಿಕೆಯಲ್ಲಿ ಯಾವ ಮಧ್ಯವರ್ತಿಗಳ ಅಗತ್ಯವೂ ಇಲ್ಲದೇ ತಮ್ಮ ಕೆಲಸ ಮುಗಿಸಿಕೊಳ್ಳಬಹುದಾದ ವಾತಾವರಣ ನಿರ್ಮಾಣ ಆಗಬೇಕೆಂದು ಬಯಸಿದ್ದರು. ಆದರೆ ಅದಾಗಿಲ್ಲ ಎನ್ನುವುದು ಕಟುಸತ್ಯ.
ಈ ಬಾರಿಯ ದಸರಾ ವ್ಯವಸ್ಥೆ ಮತ್ತು ಅದು ಜನರನ್ನು ತಲುಪದೇ ಇರುವುದು ಪಾಲಿಕೆಯ ಒಟ್ಟಾರೆ ವ್ಯವಸ್ಥೆಯ ಚಿತ್ರಣಕ್ಕೆ ಒಂದು ತಾಜಾ ಉದಾಹರಣೆ. ದಸರಾ ಜನರನ್ನು ತಲುಪಬೇಕು, ಅದು ಜನರ ಹಬ್ಬವಾಗಬೇಕೆಂಬ ಇರಾದೆ ಯಾವ ಜನಪ್ರತಿನಿಧಿಯಲ್ಲಿಯೂ ಕಾಣಲಿಲ್ಲ ಎಂಬುದು ಜಗಜ್ಜಾಹೀರಾಯಿತು. ಇಡೀ ಪಾಲಿಕೆಯ ಒಟ್ಟಾರೆ ಕಾರ್ಯವೈಖರಿ ಕೇವಲ ಆಡಳಿತ ಪಕ್ಷದ ಮೇಲೆ ಮಾತ್ರ ನಿಂತಿರುವುದಿಲ್ಲ. ವಿಪಕ್ಷ ಸದಸ್ಯರು, ಪಾಲಿಕೆಯ ಪ್ರಮುಖ ಅಧಿಕಾರಿಗಳು ಕೂಡ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದನ್ನು ಎಲ್ಲ ಸದಸ್ಯರು ಗಮನಹರಿಸಬೇಕು.ಮಹಾನಗರ ಪಾಲಿಕೆಯಾಗಿ ಬಡ್ತಿ ಹೊಂದಿದ ಬಳಿಕ ಮೊದಲ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ಅಧಿಕಾರ ಪಡೆಯಿತು. ಮೊದಲ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಲತಾ ಗಣೇಶ್ ಮೇಯರ್ ಆಗಿಯೂ, ಈಗಿನ ಶಾಸಕ ಚನ್ನಬಸಪ್ಪ ಅವರು ಉಪ ಮೇಯರ್ ಆಗಿಯೂ ಆಯ್ಕೆಗೊಂಡಿದ್ದರು. ಎರಡನೇ ಅವಧಿಯಲ್ಲಿ ಸುವರ್ಣಾ ಶಂಕರ್ ಮೇಯರ್ ಆಗಿಯೂ, ಸುರೇಖಾ ಮುರುಳೀಧರ್ ಉಪ ಮೇಯರ್ ಆಗಿದ್ದರೆ, ಮೂರನೇ ಅವಧಿಯಲ್ಲಿ ಸುನೀತಾ ಅಣ್ಣಪ್ಪ ಮೇಯರ್, ಶಂಕರ್ ಗನ್ನಿ ಉಪ ಮೇಯರ್ ಆಗಿದ್ದರು. ನಾಲ್ಕನೇ ಮತ್ತು ಕೊನೆಯ ಅವಧಿಯಲ್ಲಿ ಶಿವಕುಮಾರ್ ಮೇಯರ್, ಲಕ್ಷ್ಮೀ ಶಂಕರ್ ನಾಯ್ಕ್ ಉಪ ಮೇಯರ್ ಆಗಿ ಪಾಲಿಕೆ ಆಡಳಿತ ನಡೆಸಿದ್ದು ದಾಖಲಾಗಿದೆ.
- - - -ಫೋಟೋ:ಶಿವಮೊಗ್ಗ ಪಾಲಿಕೆ ಕೊನೆ ಸಭೆ ಬಳಿಕ ಸದಸ್ಯರು ಪೋಟೋಗೆ ಪೋಸು ನೀಡಿದ್ದು ಹೀಗೆ.