ಉಳ್ಳಾಲದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ: ಯು.ಟಿ.ಖಾದರ್‌

KannadaprabhaNewsNetwork |  
Published : Jul 23, 2025, 02:05 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಯು.ಟಿ. ಖಾದರ್‌. | Kannada Prabha

ಸಾರಾಂಶ

ಮಂಗಳೂರು ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ದ್ವಿಭಾಷಾ ಕಲಿಕೆ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಕುರಿತ ಅನುಮತಿ ಆದೇಶ ಶೀಘ್ರ ಹೊರಬರಲಿದೆ ಎಂದು ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ದ್ವಿಭಾಷಾ (ಕನ್ನಡ, ಇಂಗ್ಲಿಷ್‌) ಕಲಿಕೆ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಕುರಿತ ಅನುಮತಿ ಆದೇಶ ಶೀಘ್ರ ಹೊರಬರಲಿದೆ ಎಂದು ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಕೆಲವು ಶಾಲೆಗಳಲ್ಲಿ ಈಗಾಗಲೇ ದ್ವಿಭಾಷಾ ಕಲಿಕೆಗೆ ಅನುಮತಿ ನೀಡಲಾಗಿದೆ. ಇದನ್ನು ಪ್ರತಿ ಶಾಲೆಗೂ ವಿಸ್ತರಿಸಲಾಗುವುದು. ಒಂದನೇ ತರಗತಿಯಲ್ಲಿ ಕನ್ನಡ ಮಾಧ್ಯಮದ ಜತೆ ಇಂಗ್ಲಿಷ್‌ ಕಲಿಕೆ ಹಾಗೂ ಎಲ್‌ಕೆಜಿ, ಯುಕೆಜಿ ಆರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಬರಲಿದೆ ಎಂದು ಹೇಳಿದರು.ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ ಆರಂಭಿಸಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಎಲ್ಲ ಶಾಲೆಗಳಿಗೆ ಇಂಗ್ಲಿಷ್‌ ಕಲಿಕೆ ವಿಸ್ತರಿಸುವುದರಿಂದ ಕ್ಷೇತ್ರದ ಎಲ್ಲ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.ಎರಡು ಮಹಿಳಾ ಕಾಲೇಜು:ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ಉಳ್ಳಾಲದ ಗ್ರಾಮಾಂತರ ಭಾಗಕ್ಕೆ ವಸತಿ ಸಹಿತ ಮಹಿಳಾ ಶಿಕ್ಷಣ ಸಂಸ್ಥೆಗೆ ಇತ್ತೀಚೆಗಷ್ಟೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಇದರ ಜತೆಗೆ ವಕ್ಫ್‌ ಮಂಡಳಿಯಿಂದ ಉಳ್ಳಾಲ ನಗರ ವ್ಯಾಪ್ತಿಯ ಮೇಲಂಗಡಿಯಲ್ಲಿ ಮಹಿಳಾ ಪಿಯು ಕಾಲೇಜು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

17 ಕೋಟಿ ರು. ವೆಚ್ಚದ ವಸತಿಯುತ ಶಾಲೆಯನ್ನು ಪ್ರಾಥಮಿಕ ಮಟ್ಟದಿಂದ ಪದವಿವರೆಗೆ ವಿಸ್ತರಿಸುವ ಯೋಜನೆಯಿದೆ. ಕೊಣಾಜೆ- ಪಜೀರು ಪರಿಸರದಲ್ಲಿ ಇದಕ್ಕಾಗಿ ಜಾಗ ಗುರುತಿಸಲಾಗುವುದು. ಎಲ್ಲ ವಸತಿಶಾಲೆಗಳಿಗಿಂತ ಭಿನ್ನವಾಗಿ ಸ್ಥಳೀಯರಿಗೆ ವಸತಿ ಅಥವಾ ಡೇ ಸ್ಕಾಲರ್‌ ಅಥವಾ ಎರಡಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದರು.ಎರಡು ಸೇತುವೆ ಕಾಮಗಾರಿ:

ಉಳ್ಳಾಲಕ್ಕೆ ತೆರಳುವ ದಾರಿ ನಡುವಿನ ರೈಲ್ವೆ ಸೇತುವೆ ಹಾಗೂ ಸೋಮೇಶ್ವರ ದಾರಿಯಲ್ಲಿರುವ ಪಿಡಬ್ಲ್ಯೂಡಿ ಸೇತುವೆ ನಿರ್ಮಾಣಕ್ಕೆ ತಲಾ 4 ಕೋಟಿ ರು. ಮಂಜೂರಾಗಿದೆ. ಫಾಲ್ಗಾಟ್‌ ರೈಲ್ವೆಯವರು ಈಗಿನ ಸೇತುವೆಯ ವಿನ್ಯಾಸವನ್ನು ಬದಲಿಸಲು ಹೇಳಿದ್ದು, ಅದು ಕಾರ್ಯಗತವಾದ ಕೂಡಲೆ ಎರಡೂ ಸೇತುವೆ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸಲಾಗುವುದು ಎಂದು ಖಾದರ್‌ ತಿಳಿಸಿದರು.

ಅತಿಕ್ರಮಣ ಪತ್ತೆಗೆ ಡ್ರೋಣ್ ಸರ್ವೇ: ಉಳ್ಳಾಲದಲ್ಲಿ ರಾಜಾಕಾಲುವೆ ಅತಿಕ್ರಮಣ ಗುರುತಿಸಲು ಉಳ್ಳಾಲ ನಗರಸಭೆ ವತಿಯಿಂದ ಡ್ರೋಣ್ ಸರ್ವೇ ನಡೆಸಲು ಸೂಚನೆ ನೀಡಲಾಗಿದೆ. ಆರಂಭದಲ್ಲೇ ಅತಿಕ್ರಮಣ ಗುರುತಿಸುವುದು ಮತ್ತು ಹೆಚ್ಚಿನ ಅತಿಕ್ರಮಣ ತಡೆಯುವುದು ಈ ಸರ್ವೇ ಉದ್ದೇಶ ಎಂದರು.

ಜಿಲ್ಲೆಯ ಹೆಸರಿಗಿಂತ ಸೌಹಾರ್ದತೆ ಮುಖ್ಯದ.ಕ. ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಿಸುವಂತೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ಹೆಸರೇ ಬೇಕು ಎಂದಾದರೆ ಎಲ್ಲ ಕ್ಷೇತ್ರಗಳ ತಜ್ಞರು, ವಿಚಾರವಂತರ ಅಭಿಪ್ರಾಯ ಪಡೆದು ಚರ್ಚಿಸಿ ಪೂರಕ ತೀರ್ಮಾನ ಆಗಲಿ ಎಂದು ಹೇಳಿದ ಖಾದರ್‌, ಜಿಲ್ಲೆಯ ಅಭಿವೃದ್ಧಿಗೆ ಹೆಸರಿಗಿಂತಲೂ ಮುಖ್ಯವಾಗಿ ದ್ವೇಷ ರಹಿತ ಸೌಹಾರ್ದತೆಯ ವಾತಾವರಣ ಅಗತ್ಯ. ಅದಕ್ಕಾಗಿ ಎಲ್ಲರೂ ಪ್ರಯತ್ನಪಡಬೇಕು ಎಂದು ಅಭಿಪ್ರಾಯಪಟ್ಟರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ