ಇಂಗ್ಲಿಷ್‌ ತಿಮಿಂಗಿಲ ಸಣ್ಣಪುಟ್ಟ ಭಾಷೆಗಳ ನುಂಗಿ ಹಾಕುತ್ತಿದೆ- ಡಾ. ಗೌಡರ

KannadaprabhaNewsNetwork | Published : Jan 12, 2025 1:19 AM

ಸಾರಾಂಶ

ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆಯುತ್ತಿರುವ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿವಿಧ ಗೋಷ್ಠಿಗಳು, ಸಂವಾದಗಳು, ವಿಷಯ ಮಂಡನೆ, ವಿಶೇಷ ಉಪನ್ಯಾಸಗಳು ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರಿಗೆ ಮುದ ನೀಡಿದವು.

ಹಿರೇಕೆರೂರು: ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆಯುತ್ತಿರುವ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿವಿಧ ಗೋಷ್ಠಿಗಳು, ಸಂವಾದಗಳು, ವಿಷಯ ಮಂಡನೆ, ವಿಶೇಷ ಉಪನ್ಯಾಸಗಳು ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರಿಗೆ ಮುದ ನೀಡಿದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಮಹಿಳೆಯರು ಆಸಕ್ತಿಯಿಂದ ಆಲಿಸಿ ಕನ್ನಡ ಹಬ್ಬದ ಕಂಪನ್ನು ಸವಿದರು.ನಾಡು ನುಡಿ ನಾಡವರ್ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎಸ್.ಪಿ. ಗೌಡರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಂದು ಭಾಷೆಗೂ ಬದುಕುವ ಹಕ್ಕಿದೆ. ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಭಾಷೆ ಎಂಬ ತಿಮಿಂಗಲವು ಜಗತ್ತಿನ ಇತರೆ ಸಣ್ಣಪುಟ್ಟ ಭಾಷೆಗಳನ್ನು ನುಂಗಿ ಹಾಕುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರದ ತ್ರಿಭಾಷಾ ಸೂತ್ರದ ಪ್ರಕಾರ ಇಂಗ್ಲಿಷ್, ಹಿಂದಿ ಭಾಷೆಗಳು ಉಳಿದ ಪ್ರಾದೇಶಿಕ ಭಾಷೆಗಳನ್ನು ಅಪ್ರಸ್ತುತಗೊಳಿಸುತ್ತಿವೆ ಎಂದರು. ನುಡಿಯನ್ನು ಆಧಾರವಾಗಿಟ್ಟುಕೊಂಡೇ ಕರ್ನಾಟಕ ರೂಪಗೊಂಡಿದ್ದು ನುಡಿ ಉಳಿದರೆ ನಾವು ಉಳಿಯುತ್ತೇವೆ, ನಮ್ಮ ಬದುಕು ಉಳಿಯುತ್ತದೆ ಎಂದರು.ಡಾ.ಕಾಂತೇಶ ಅಂಬಿಗೇರ, ಡಾ ವೈ.ಎಂ.ತೋಡ್ಕರ್ ವಿಷಯ ಮಂಡನೆ ಮಾಡಿದರು.ಸಮ್ಮೇಳನದಲ್ಲಿ ನಡೆದ ವೈವಿಧ್ಯ ವಿಷಯ ಕುರಿತು ನಡೆದ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಲಿಂಗರಾಜ ಕಮ್ಮಾರ ವಹಿಸಿದ್ದರು. ಕೆ.ಆರ್.ಕೋಣ್ತೆ ಆಶಯ ನುಡಿ ನುಡಿದರು. ಲಿಂಗರಾಜ ಸೊಟ್ಟಪ್ಪನವರ, ಶೇಖರ ಭಜಂತ್ರಿ, ಪೊ. ಎಚ್.ಜೆ. ಕೃಷ್ಣಪ್ಪ, ಪ್ರಮೋದ ನೆಲವಾಗಿಲ ವಿಷಯ ಮಂಡನೆ ಮಾಡಿದರು.ಮನನಿ ಮನದಾಳ ಕುರಿತು ನಡೆದ ಗೋ಼ಷ್ಠಿಯಲ್ಲಿ ಕೆ.ಆರ್.ಸಂಧ್ಯಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ತಿರ್ಲಾಪೂರ, ನಾಗರಾಜ ದ್ಯಾಮನಕೊಪ್ಪ, ಪುಷ್ಪವತಿ ಶೆಲವಾಡಿಮಠ ಆಶಯ ವ್ಯಕ್ತಪಡಿಸಿದರು.ನಾಡು ನುಡಿಗೆ ಜಿಲ್ಲೆಯ ಕೊಡುಗೆ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಡಾ ಎಸ್.ಪಿ. ಚನ್ನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವಾಯ್.ಬಿ. ಆಲದಕಟ್ಟಿ ಆಶಯ ನುಡಿ ನುಡಿದರು. ಜಗನ್ನಾಥ ಗೇನಣ್ಣನವರ, ಡಾ. ಹೊನ್ನಪ್ಪ ಹೊನ್ನಪ್ಪನವರ, ಮಲ್ಲಪ್ಪ ಕರಿಯಣ್ಣನವರ ವಿಷಯ ಮಂಡಿಸಿದರು.ನಂತರ ದಮನಿತರ ಧ್ವನಿ ಹಾಗೂ ಹಿರೇಕೆರೂರ-ರಟ್ಟೀಹಳ್ಳಿ ತಾಲೂಕು ವೈಶಿಷ್ಟಗಳ ಕುರಿತು ವಿಶೇಷ ಉಪನ್ಯಾಸಗಳು ನಡೆದವು.ಸಮ್ಮೇಳನದ ಎರಡೂ ದಿನವೂ ಸಾಹಿತ್ಯ ಪ್ರೇಮಿಗಳಿಗೆ ಪಟ್ಟಣದ ಸಿಇಎಸ್ ಸಂಸ್ಥೆಯ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೋದಿ ಪಾಯಸ, ಕಡಲೆಕಾಳು, ಮುಳಗಾಯಿ ಪಲ್ಲೆ ಹಾಗೂ ಅನ್ನ ಸಾಂಬಾರ ಸವಿದರು.ಸಾಹಿತ್ಯ ಸಮ್ಮೇಳನದಲ್ಲಿ ತೆರೆದ ಪುಸ್ತಕ ಮಳಿಗೆ ಹಾಗೂ ಮಾರಾಟ ಮಳಿಗೆಗಳಲ್ಲಿ ಬಂದ ಸಾಹಿತ್ಯಾಸಕ್ತರು, ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡುಬಂದವು.

Share this article