ಕನ್ನಡಪ್ರಭ ವಾರ್ತೆ ಹರಿಹರ
ಮುಂಬರುವ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹರಿಹರ ತಾಲೂಕಿನ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಗಮನಹರಿಸಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ವಾಟರ್ ವರ್ಕ್ಸ್ ನಲ್ಲಿರುವ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದ್ದಾಗ ಬೇಸಿಗೆ ಆರಂಭವಾಗುತ್ತಿದ್ದು ಕುಡಿಯುವ ನೀರು ಶುದ್ಧೀಕರಣಗೊಳಿಸಿ ಪೂರೈಸಬೇಕು. ನೀರು ಮಿತವಾಗಿ ಹಾಗೂ ನಿರಂತರ ನೀರು ಪೂರೈಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಭದ್ರಾ ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿಯೇ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದ್ದು ಸದ್ಯ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಕಟ್ಟಡ ಪರಿಶೀಲನೆ: ನಗರಸಭೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು ₹೪ ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಜೊತೆಗೆ ನಿಗದಿತ ಕಾಲಾವಧಿಯಲ್ಲಿ ಕಟ್ಟಡ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿ. ಅಂಗವಿಕಲರು ಹಾಗೂ ಅಂಧರಿಗೆ ರೋಪ್ ವೇ ನಿರ್ಮಿಸಲು ಸೂಚನೆ ನೀಡಿದರು.ಈ ವೇಳೆ ಕಾಂಗ್ರೆಸ್ ಮುಖಂಡ ದಾದಾಪೀರ್ ಭಾನುವಳ್ಳಿ ಮಾತನಾಡಿ, ನಗರ ಸಭೆಯಲ್ಲಿ ಕೆಲಸಗಳಾಗದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸ್ವಚ್ಛತೆ ಮರಿಚೀಕೆಯಾಗಿದೆ ತಾವು ಆಡಳಿತ ಅಧಿಕಾರಿಯಾಗಿದ್ದೀರಿ ಇದನ್ನು ಗಮನಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ಸಭೆ ಕರೆದು ಸಮಸ್ಯೆ ನಿವಾರಿಸುವಂತೆ ಸ್ಥಳದಲ್ಲಿದ್ದ ಪೌರಾಯುಕ್ತ ಬಸವರಾಜ್ ಐಗೂರವರಿಗೆ ತಿಳಿಸಿದರು. ಈ ವೇಳೆ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ತಹಸೀಲ್ದಾರ್ ಗುರು ಬಸವರಾಜ್, ನಗರಸಭಾ ಸದಸ್ಯ ಅಲಿಂ ಸೇರಿ ಇತರರಿದ್ದರು.