ಹಿಂದೆ ಸರಿದವರ ನಡುವೆ ಮುಂದೆ ಬರುವವರಿಂದ ಮೂಡಿದ ಉತ್ಸಾಹ!

KannadaprabhaNewsNetwork |  
Published : Apr 06, 2024, 12:52 AM IST
ಬಿಜೆಪಿ | Kannada Prabha

ಸಾರಾಂಶ

ಕುಮಟಾದಲ್ಲಿ ಸೂರಜ ನಾಯ್ಕ ಸೋನಿ ಹಾಗೂ ಹಳಿಯಾಳದಲ್ಲಿ ಎಸ್.ಎಲ್. ಘೋಟ್ನೇಕರ್ ಬಿಜೆಪಿಗೆ ಬೆಂಬಲಕ್ಕೆ ನಿಂತಿರುವುದು ಬಿಜೆಪಿಗರಲ್ಲಿ ಹುಮ್ಮಸ್ಸು ಬಂದಂತಾಗಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಮೌನಕ್ಕೆ ಜಾರಿದ ಸಂಸದ ಅನಂತಕುಮಾರ ಹೆಗಡೆ ಹಾಗೂ ಕಾಂಗ್ರೆಸ್‌ನತ್ತ ವಾಲಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆ ಅನುಭವಿಸುವ ಊಹಾಪೋಹದ ನಡುವೆ ಹಳಿಯಾಳ ಹಾಗೂ ಕುಮಟಾದಲ್ಲಿ ಹಾವು ಮುಂಗುಸಿಯಂತೆ ಇದ್ದವರೂ ಒಂದಾಗಿ ಕಾಗೇರಿ ಬೆಂಬಲಕ್ಕೆ ನಿಂತಿರುವುದು ಬಿಜೆಪಿಗೆ ದೊಡ್ಡ ಬಲ ಬಂದಂತಾಗಿದೆ.

ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಬ್ಬರಿಸುತ್ತಿದ್ದ ಅನಂತಕುಮಾರ ಹೆಗಡೆ ಟಿಕೆಟ್ ಕೈತಪ್ಪುತ್ತಿದ್ದಂತೆ ಮೌನಕ್ಕೆ ಜಾರಿದ್ದಾರೆ. ಅವರ ಮುಂದಿನ ನಡೆ ಇನ್ನೂ ಕುತೂಹಲವನ್ನು ಉಳಿಸಿಕೊಂಡಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ತಾಂತ್ರಿಕವಾಗಿ ಅಷ್ಟೇ ಬಿಜೆಪಿಯಲ್ಲಿ ಇದ್ದಾರೆ. ಅವರ ಬೆಂಬಲ ಬಿಜೆಪಿಗೆ ಸಿಗದಿರುವುದು ಪಕ್ಕಾ ಆಗಿದೆ. ಈ ಸಂದರ್ಭದಲ್ಲಿ ಕುಮಟಾದಲ್ಲಿ ಸೂರಜ ನಾಯ್ಕ ಸೋನಿ ಹಾಗೂ ಹಳಿಯಾಳದಲ್ಲಿ ಎಸ್.ಎಲ್. ಘೋಟ್ನೇಕರ್ ಬಿಜೆಪಿಗೆ ಬೆಂಬಲಕ್ಕೆ ನಿಂತಿರುವುದು ಬಿಜೆಪಿಗರಲ್ಲಿ ಹುಮ್ಮಸ್ಸು ಬಂದಂತಾಗಿದೆ.

ಹಳಿಯಾಳದಲ್ಲಿ ಕೈ ಕೈ ಮಿಲಾಯಿಸುವಂತಿದ್ದ ಬಿಜೆಪಿಯ ಸುನೀಲ ಹೆಗಡೆ ಹಾಗೂ ಜೆಡಿಎಸ್‌ನ ಎಸ್.ಎಲ್. ಘೋಟ್ನೇಕರ ಇಬ್ಬರೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಎದುರು ಹಸ್ತಲಾಘವ ಮಾಡಿದರು. ಕುಮಟಾದಲ್ಲಿ ಜಿದ್ದಾಜಿದ್ದಿ ಎದುರಾಳಿಗಳಾಗಿದ್ದ ಶಾಸಕ ಬಿಜೆಪಿಯ ದಿನಕರ ಶೆಟ್ಟಿ ಹಾಗೂ ಜೆಡಿಎಸ್‌ನ ಸೂರಜ ನಾಯ್ಕ ಸೋನಿ ಇಬ್ಬರೂ ಒಂದೇ ವೇದಿಕೆಗೆ ಬಂದು ಕೈಜೋಡಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದ್ದರೂ ಉತ್ತರ ಕನ್ನಡದಲ್ಲಿ ಈ ಮೈತ್ರಿಯ ಪರಿಣಾಮ ಏನಾಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು. ಸ್ನೇಹ, ತಾಳ್ಮೆ, ಹೊಂದಾಣಿಕೆಯ ಮನೋಭಾವದ ಕಾಗೇರಿ ಜಿಲ್ಲೆಯಲ್ಲೂ ಉಭಯ ಪಕ್ಷಗಳ ಮುಖಂಡರು ಜಿಲ್ಲೆಯಲ್ಲೂ ಒಂದುಗೂಡುವಂತೆ ಮಾಡಿದ್ದಾರೆ. ಇದು ಮತವಾಗಿ ಪರಿವರ್ತನೆಯಾದರೆ ಕಾಗೇರಿಗೆ ಬಲುದೊಡ್ಡ ಬೆಂಬಲ ಸಿಕ್ಕಂತಾಗಲಿದೆ.

ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡದಲ್ಲಿ ಜೆಡಿಎಸ್ ನ ಅಸ್ತಿತ್ವ ಇಟ್ಟವರೇ ಕುಮಟಾದ ಸೂರಜ ನಾಯ್ಕ ಸೋನಿ ಹಾಗೂ ಹಳಿಯಾಳದಲ್ಲಿ ಎಸ್.ಎಲ್. ಘೋಟ್ನೇಕರ್. ಸೂರಜ ನಾಯ್ಕ ಕೇವಲ 600 ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು. ಘೋಟ್ನೇಕರ್ ಕೂಡ ಗಮನ ಸೆಳೆದಿದ್ದರು. ಶಿರಸಿಯಲ್ಲಿ ಜೆಡಿಎಸ್‌ನ ಉಪೇಂದ್ರ ಪೈ ಅವರನ್ನೂ ಭೇಟಿಯಾಗಿ ಕಾಗೇರಿ ಅವರ ಬೆಂಬಲ ಪಡೆಯುವಲ್ಲಿ ಸಫಲರಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗೇರಿ ಪಾಳೆಯದಿಂದ ದೂರ ಇದ್ದ ಸಿದ್ಧಾಪುರದ ಕೆ.ಜಿ. ನಾಯ್ಕ ಕೂಡ ಕಾಗೇರಿ ಎದುರು ಪ್ರತ್ಯಕ್ಷರಾಗಿದ್ದಾರೆ. ಮಾಜಿ ಸಚಿವ ಶಿವಾನಂದ ನಾಯ್ಕ ಅವರೂ ಬಿಜೆಪಿ ವೇದಿಕೆ ಏರಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಬಿಜೆಪಿಯಿಂದ ದೂರ ಇದ್ದವರು ಒಂದೆಡೆಯಾದರೆ, ಇನ್ನೊಂದೆಡೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೆಂದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದು ಪರಸ್ಪರ ವಿರೋಧಿಗಳೂ ಕೈಜೋಡಿಸುತ್ತಿದ್ದಾರೆ. ಇದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಲಬಂದಂತಾಗಿದೆ.

ಭಾರಿ ಬೆಂಬಲ: ಪ್ರಚಾರ ಕಾರ್ಯದಲ್ಲಿ ಎಲ್ಲರೂ ತೊಡಗಿಕೊಂಡಿರುವುದು ಸಂತಸ ತಂದಿದೆ. ಪಕ್ಷಕ್ಕೆ ಹಾಗೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಕ್ಕೆ ಕ್ಷೇತ್ರದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌