ವಿಜಯನಗರ ಶೈಕ್ಷಣಿಕ ಸೇವಾ ಟ್ರಸ್ಟ್‌ನಿಂದ ಪರಿಸರ ಜಾಗೃತಿ ಸಸಿ ವಿತರಣೆ

KannadaprabhaNewsNetwork | Published : Jun 11, 2024 1:31 AM

ಸಾರಾಂಶ

ಪರಿಸರವು ಮಾನವನ ಅಸ್ತಿತ್ವದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯಿದೆ.

ಕುರುಗೋಡು: ಇಲ್ಲಿನ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಳ್ಳಾರಿಯ ವಿಜಯನಗರ ಶೈಕ್ಷಣಿಕ ಮತ್ತು ಸೇವಾ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮ ಜರುಗಿತು.

ಸಮಾರಂಭಕ್ಕೆ ಚಾಲನೆ ನೀಡಿ ಸಾನ್ನಿಧ್ಯ ವಹಿಸಿದ್ದ ಎಮ್ಮಿಗನೂರು ಹಂಪಿ ಸಾವಿರದೇವರ ಮಠದ

ಶ್ರೀ ವಾಮದೇವ ಮಹಾಂತ ಶಿವಾಚಾರ್ಯರು, ಪರಿಸರದ ಮಹತ್ವ ತಿಳಿಸಿದರು. ಬಿಸಿಲೂರು ಬಳ್ಳಾರಿ ಜಿಲ್ಲೆಯಲ್ಲಿ ಮರ-ಗಿಡಗಳನ್ನು ಬೆಳೆಸುವುದರಿಂದಾಗುವ ಅನುಕೂಲಗಳ ಕುರಿತು ತಿಳಿಸಿದರು.

ಪರಿಸರವು ಮಾನವನ ಅಸ್ತಿತ್ವದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯಿದೆ. ಮಾನವ ನಿರ್ಮಿತ ಕೆಲವು ಕಾರಣಗಳಿಂದ ವಾತಾವರಣ ಕಲುಷಿತಗೊಂಡಿದೆ. ಭೂಮಿಯ ತಾಪಮಾನ ಹೆಚ್ಚುತ್ತಿದ್ದು, ಜಾಗತಿಕ ತಾಪಮಾನದ ಸಮಸ್ಯೆ ಉದ್ಭವಿಸುತ್ತಿದೆ. ಇದು ಮಾನವನ ಆರೋಗ್ಯಕ್ಕೆ ತುಂಬ ಅಪಾಯಕಾರಿಯಾಗಿದೆ. ಪರಿಸರ ರಕ್ಷಣೆಯ ಕಾರ್ಯ ಪ್ರತಿಯೊಬ್ಬರಿಂದಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶೈಕ್ಷಣಿಕ ಮತ್ತು ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಉದ್ಯಮಿ ಗಣಪಾಲ್ ಐನಾಥ್‌ರೆಡ್ಡಿ, ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಅಗತ್ಯವಿದೆ. ಕುರುಗೋಡು ಭಾಗದಲ್ಲಿ ಗುಡ್ಡಗಾಡು ಪ್ರದೇಶ ಹೆಚ್ಚಾಗಿದೆ. ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಸಬೇಕು. ಟ್ರಸ್ಟ್‌ ವತಿಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ. 35 ಗ್ರಾಮಗಳ ಶಾಲೆಗಳಿಗೆ ಸಸಿ ನೀಡಲಾಗುವುದು. ವಾಹನದ ಮೂಲಕ ಸಸಿಗಳನ್ನು ಕಳಿಸಿಕೊಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ವಲಯ ಅರಣ್ಯ ಅಧಿಕಾರಿ ತೋಷನ್‌ಕುಮಾರ್, ವೃತ್ತ ಪೊಲೀಸ್ ನಿರೀಕ್ಷಕ ವಿಶ್ವನಾಥ ಹಿರೇಗೌಡರ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ, ವೀರಶೈವ ಸಮಾಜದ ಮುಖಂಡರಾದ ಸದಾಶಿವಗೌಡ, ಪರಿಕರ ಮರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಶೇಖರ್, ಕಂಪ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೋಬಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಯುವರಾಜ್, ಅಗ್ರಿ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಚೌಹಾಣ್ ಇದ್ದರು. ಎಂ.ವಿನೋದಕುಮಾರ್, ಎನ್.ಟಿ. ಶ್ರೀನಿವಾಸ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

Share this article