ಕನ್ನಡಪ್ರಭ ವಾರ್ತೆ ಮಂಡ್ಯಪ್ರಸ್ತುತ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಪರಿಸರ ಪ್ರಜ್ಞೆಯೇ ಇಲ್ಲ. ನೈಸರ್ಗಿಕವಾಗಿ ಆಗುತ್ತಿರುವ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಜಾಗೃತರಾಗದೆ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಆ ಭ್ರಮೆಯಿಂದ ಎಲ್ಲರೂ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ, ಪದ್ಮವಿಭೂಷಣ ಎಸ್.ಎಂ.ಕೃಷ್ಣ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಡಾ.ಬಿ.ಶಿವಲಿಂಗಯ್ಯ ಅಭಿನಂದನಾ ಸಮಿತಿಯಿಂದ ಆಯೋಜಿಸಿದ್ದ ಹೃದಯಿ ಶಿವ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಪ್ರಸ್ತುತ ದಿನಗಳಲ್ಲಿ ಒಂದು ಅನಿವಾರ್ಯ. ಪರಿಸರ ಬೆಳವಣಿಗೆ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಲ್ಲ. ಪರಿಸರ ಪ್ರಜ್ಞೆ ಇಲ್ಲದಿರುವುದರಿಂದ ಮಾಲಿನ್ಯ ಹೆಚ್ಚಾಗಿ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಪ್ರಕೃತಿಯ ಮೇಲೆ ಒತ್ತಡಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ನೈಸರ್ಗಿಕವಾಗಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತಿವೆ. ಚಂಡಮಾರುತ, ಅಕಾಲಿಕ ಮಳೆ, ಪ್ರವಾಹ ಸೇರಿದಂತೆ ಬೇರೆ ಬೇರೆ ರಾಜ್ಯಗಳು, ರಾಷ್ಟ್ರಗಳಲ್ಲಿ ವಿವಿಧ ರೀತಿಯಲ್ಲಿ ನೈಸರ್ಗಿಕ ಬದಲಾವಣೆಗಳಾಗುತ್ತಿರುವುದನ್ನು ನೋಡಿದ್ದೇವೆ. ಹಾಗಾಗಿ ಪ್ರಕೃತಿಯನ್ನು ನಿರ್ಲಕ್ಷ್ಯದಿಂದ ಕಾಣದೆ ಮಾಲಿನ್ಯ ನಿಯಂತ್ರಣಕ್ಕೆ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಅದುವೇ ನಾವು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದಾದ ಬಹುದೊಡ್ಡ ಗೌರವ ಎಂದರು.
ಪರಿಸರವನ್ನು ಕಾಪಾಡುವ ಸಲುವಾಗಿ ನಮ್ಮ ಜೀವನದಲ್ಲಿ ಕೊಂಚ ಬದಲಾವಣೆಯನ್ನು ತರುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ದೊಡ್ಡ ಅನಾಹುತವೇ ಕಾದಿದೆ. ಪರಿಸರ ಅಸಮತೋಲದಿಂದ ಉಂಟಾಗುತ್ತಿರುವ ನೈಸರ್ಗಿಕ ಬದಲಾವಣೆಗಳು ಮುಂದೆ ಸಂಭವಿಸಬಹುದಾದ ಅನಾಹುತದ ಬಗ್ಗೆ ಎಚ್ಚರಿಕೆ ಗಂಟೆಯನ್ನು ಮೊಳಗಿಸುತ್ತಿವೆ. ಈಗಲಾದರೂ ಪರಿಸರದ ಬಗ್ಗೆ ಶ್ರದ್ಧೆ, ಕಾಳಜಿ, ಭಕ್ತಿಯನ್ನು ಬೆಳೆಸಿಕೊಂಡು ಪ್ರಾಕೃತಿಕ ಸಮತೋಲನ ಕಾಪಾಡುವುದಕ್ಕೆ ಹೆಚ್ಚಿನ ಗಮನಹರಿಸುವಂತೆ ಒತ್ತಾಯಪೂರ್ವಕವಾಗಿ ನಿವೇದನೆ ಮಾಡಿಕೊಂಡರು.ಡಾ.ಬಿ.ಶಿವಲಿಂಗಯ್ಯನವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವುದಕ್ಕೂ ಮೊದಲು ಆ ಮಂಡಳಿಯ ಬಗ್ಗೆ ಹೆಚ್ಚಿನ ಜನರಿಗೆ ಅರಿವೇ ಇರಲಿಲ್ಲ. ಮಂಡಳಿ ಕೆಲವು ಬಾರಿ ಹೆಸರನ್ನು ಮಾಡಿರುವಂತೆ ಅಪವಾದಕ್ಕೂ ಗುರಿಯಾಗಿದೆ. ಡಾ.ಬಿ.ಶಿವಲಿಂಗಯ್ಯನವರು ಅಧ್ಯಕ್ಷರಾಗಿ ಗ್ರಾಮೀಣ ಭಾಗದ ಜನರ ಗಮನಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂ ದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಗೌರವ ಗ್ರಂಥ ಕುರಿತು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ಮಾಜಿ ಸಚಿವರಾದ ಎಂ.ಎಸ್.ಆತ್ಮಾನಂದ, ಸಿ.ಎಸ್.ಪುಟ್ಟರಾಜು, ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಇತರರು ಭಾಗವಹಿಸಿದ್ದರು.ಮಂಡ್ಯ ಜನರ ಋಣ ನನ್ನ ಮೇಲಿದೆ: ಎಸ್.ಎಂ.ಕೃಷ್ಣನನ್ನ ರಾಜಕೀಯ ಬೆಳವಣಿಗೆ, ರಾಜಕೀಯವಾಗಿ ನಾನೇನು ಹುದ್ದೆಗಳನ್ನು ಅಲಂಕರಿಸಿದ್ದೆನೋ ಅದೆಲ್ಲವನ್ನು ಮಂಡ್ಯ ಜಿಲ್ಲೆಯ ಜನರ ಪಾದಕಮಲಗಳಿಗೆ ಅರ್ಪಿಸುತ್ತೇನೆ. ಜಿಲ್ಲೆಯ ಜನರ ಋಣ ನನ್ನ ಮೇಲಿದೆ ಎಂದು ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಎಸ್.ಎಂ.ಕೃಷ್ಣ ಹೇಳಿದರು.
ನನಗೆ ಪದ್ಮವಿಭೂಷಣ ಘೋಷಣೆಯಾದ ಮರುದಿನವೇ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರು ತವರು ಜಿಲ್ಲೆಯಲ್ಲಿ ಅಭಿನಂದನಾ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದರು. ಅದೇ ಸಮಯಕ್ಕೆ ಚುನಾವಣೆ ಎದುರಾಗಿತ್ತು. ಚುನಾವಣೆ ಮುಗಿದ ನಂತರ ಪ್ರಸ್ತಾಪ ಮಾಡೋಣ ಎಂದಿದ್ದಾಗಿ ತಿಳಿಸಿದರು.ಚುನಾವಣೆ ನಂತರ ಹೊಸ ಬೆಳವಣಿಗೆಗಳು ನಡೆದವು. ಅದು ಅಲ್ಲಿಗೇ ನಿಂತುಹೋಯಿತು. ಆದರೂ ಜಿಲ್ಲೆಯ ಜನರು ನನಗೆ ತೋರಿದ ಪ್ರೀತಿ, ವಿಶ್ವಾಸ, ಔದಾರ್ಯಗಳನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಕೃತಜ್ಞತೆಯಿಂದ ಹೇಳಿದರು.