ಚಿತ್ರದುರ್ಗ: ಹನ್ನೆರಡನೆಯ ಶತಮಾನದಲ್ಲಿ ಸರ್ವ ಸಮಾನತೆಯ ಅನುಭವ ಮಂಟಪ ಸ್ಥಾಪನೆ ಮಾಡದೆ ಹೋಗಿದ್ದರೆ ಅನೇಕ ಹಿಂದುಳಿದ ಶೋಷಿತ ಸಮುದಾಯಗಳಿಂದ ಬಂದವರು ಅಂದು ಎಲ್ಲಿ, ಹೇಗೆ ಯಾವ ರೀತಿ ಇದ್ದರು ಎಂಬುದನ್ನು ಇಂದಿನ 21ನೇ ಶತಮಾನದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬಸವಣ್ಣನವರು ತುಂಬಾ ಮುಂದಾಲೋಚನೆ ಮತ್ತು ದೂರದೃಷ್ಟಿಯಿಂದ ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ಸ್ಥಾಪನೆ ಮಾಡಿದ ಅನುಭವ ಮಂಟಪಕ್ಕೆ ಮಾದಾರ ಚನ್ನಯ್ಯನಂತಹ ಶರಣರು ಅಲ್ಲಿಗೆ ಹೋಗಲು ಸದಾವಕಾಶವಾಯಿತು. ಹೀಗೆ ದೇಶದ ನಾನಾ ಭಾಗಗಳಿಂದ ಶರಣರ ಪರಿವಾರವೇ ಅಲ್ಲಿ ಸೇರಿತು ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಮಹಾಸ್ವಾಮೀಜಿ ಇತಿಹಾಸ ಮೆಲುಕು ಹಾಕಿದರು.
ಚಿತ್ರದುರ್ಗ: ಹನ್ನೆರಡನೆಯ ಶತಮಾನದಲ್ಲಿ ಸರ್ವ ಸಮಾನತೆಯ ಅನುಭವ ಮಂಟಪ ಸ್ಥಾಪನೆ ಮಾಡದೆ ಹೋಗಿದ್ದರೆ ಅನೇಕ ಹಿಂದುಳಿದ ಶೋಷಿತ ಸಮುದಾಯಗಳಿಂದ ಬಂದವರು ಅಂದು ಎಲ್ಲಿ, ಹೇಗೆ ಯಾವ ರೀತಿ ಇದ್ದರು ಎಂಬುದನ್ನು ಇಂದಿನ 21ನೇ ಶತಮಾನದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬಸವಣ್ಣನವರು ತುಂಬಾ ಮುಂದಾಲೋಚನೆ ಮತ್ತು ದೂರದೃಷ್ಟಿಯಿಂದ ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ಸ್ಥಾಪನೆ ಮಾಡಿದ ಅನುಭವ ಮಂಟಪಕ್ಕೆ ಮಾದಾರ ಚನ್ನಯ್ಯನಂತಹ ಶರಣರು ಅಲ್ಲಿಗೆ ಹೋಗಲು ಸದಾವಕಾಶವಾಯಿತು. ಹೀಗೆ ದೇಶದ ನಾನಾ ಭಾಗಗಳಿಂದ ಶರಣರ ಪರಿವಾರವೇ ಅಲ್ಲಿ ಸೇರಿತು ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಮಹಾಸ್ವಾಮೀಜಿ ಇತಿಹಾಸ ಮೆಲುಕು ಹಾಕಿದರು.ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ಏರ್ಪಡಿಸಿದ್ದ ಮಾದರ ಚೆನ್ನಯ್ಯನವರ ಜಯಂತಿಯ ಸಮ್ಮುಖ ವಹಿಸಿ ಮಾತನಾಡಿದರು.
ಬಸವಣ್ಣನವರಿಗೆ ಅನುಭವ ಮಂಟಪ ನಿರ್ಮಿಸಲು ಒಂದು ಸದುದ್ದೇಶವಿತ್ತು. ತಮಿಳುನಾಡಿನ ಕಂಚಿಯ ಕರಿಕಾಲ ಚೋಳನ ಮಹಾ ಸಂಸ್ಥಾನದಲ್ಲಿ ಕುದುರೆ ಸಾಕುವ ಕಾಯಕ ಮಾಡಿಕೊಂಡಿದ್ದ ಚೆನ್ನಯ್ಯನವರು ಗುಪ್ತ ಭಕ್ತಿಗೆ ಹೆಸರಾದವರು. ಈ ಭಕ್ತಿ ಒಮ್ಮೆ ಪರಾಮರ್ಶೆಗೊಂಡು ಅವರು ಕರಿಕಾಲ ಚೋಳರ ದೃಷ್ಟಿಗೆ ಬಿದ್ದು ಮಹಾನ್ ವ್ಯಕ್ತಿಗಳಂತೆ ಗೋಚರಿಸುತ್ತಾರೆ. ಸಾಮಾನ್ಯ ವ್ಯಕ್ತಿ ಅಸಾಮಾನ್ಯರ ಜೊತೆ ಇರುವುದು ಬೇಡ ಎಂಬ ನಿರ್ಣಯ ಮಾಡಿ ಬಸವಕಲ್ಯಾಣದತ್ತ ಮುಖ ಮಾಡಿ ಅನುಭವ ಮಂಟಪ ಸೇರುತ್ತಾರೆ. ಅಂತಹ ಚರಿತ್ರೆ ಇರುವ ಅನುಭವ ಮಂಟಪ ಅಂದು ಎಲ್ಲರಿಗೂ ಮುಕ್ತ ಅವಕಾಶ ನೀಡಿದಂತೆ ಇಂದಿನ 21ನೇ ಶತಮಾನದಲ್ಲಿ ಚಿತ್ರದುರ್ಗದ ಐತಿಹಾಸಿಕ ಮುರುಘರಾಜೇಂದ್ರ ಬೃಹನ್ಮಠವೂ ಶೋಷಿತ ಸಮುದಾಯಗಳಿಗೆ ಆದ್ಯತೆ ನೀಡಿ ಅವಕಾಶ ಕಲ್ಪಿಸಿರುವುದು ಅಪರೂಪದ ಅವಿಸ್ಮರಣೀಯ ಇತಿಹಾಸ ಎಂದು ಶ್ಲಾಘಿಸಿದರು.ದಾವಣಗೆರೆ ವಿರಕ್ತ ಮಠದ ಡಾ.ಬಸವ ಪ್ರಭುಸ್ವಾಮೀಜಿ ಮಾತನಾಡಿ, ಬಸವಣ್ಣನವರು ಒಂದು ಹೂ ಇದ್ದಂಗೆ. ಆ ಹೂವಿನ ಮಕರಂದವನ್ನು ಸವಿಯಲು ಶರಣರು ಬಂದರು. ಆ ಜೇನಿನ ಮುಖಾಂತರ ಸಮಾನತೆ, ಕಾಯಕ ಮತ್ತು ದಾಸೋಹ ಎನ್ನುವ ಸಿಹಿ ಸಿಕ್ಕಿತು. ಅಂತಹ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರ ಬದುಕು ಸಾರ್ಥಕ ಎನ್ನುವಂತಾಗಿದೆ. ಇಂತಹ ಪರಂಪರೆಯ ಬಳಿವಿಡಿದು ಬಂದಿರುವ ಚಿತ್ರದುರ್ಗದ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠವೂ ಸಮ ಸಮಾಜ ನಿರ್ಮಾಣಕ್ಕಾಗಿ ಸರ್ವ ಜನಾಂಗದವರಿಗೆ ದೀಕ್ಷೆ ನೀಡಿದ್ದು ಉಲ್ಲೇಖನೀಯ ಎಂದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು.
ವಿವಿಧ ಸಮಾಜಗಳ ಮುಖಂಡರಾದ ಶ್ರೀನಿವಾಸ್, ಸ್ವಾಮಿ, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ ವಕೀಲರಾದ ಉಮೇಶ್, ಬಸವರಾಜಕಟ್ಟಿ, ನಿವೃತ್ತ ಪ್ರಾಚಾರ್ಯ ಎಸ್.ಎಂ.ಕೊಟ್ರೇಶಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.