ಕನ್ನಡಪ್ರಭ ವಾರ್ತೆ ಅಮೀನಗಡ
ಪಟ್ಟಣದ ವೀರಭದ್ರೇಶ್ವರ 18ನೇ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ 11 ದಿನಗಳ ವೀರಭದ್ರೇಶ್ವರ ಪುರಾಣ ಪ್ರವಚನ ಮಹಾಮಂಗಲ, ಅನ್ನ ಸಂತರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿ ಸೇವಾಭಾವ, ಸಂಸ್ಕಾರ ಕಲಿಸ ಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಹಿರಿಯರು ಸ್ವಚ್ಛತೆ, ಆರೋಗ್ಯಕ್ಕಾಗಿ ಪೂಜೆಗಳ ಮೊರೆ ಹೋಗುತ್ತಿದ್ದರು. ಮೊದಲು ಆಚಾರ ನಂತರ ವಿಚಾರ, ಹಿಂದೆ ಹಿರಿಯರು ಮನೆಯ ಬಾಗಿಲಿನಲ್ಲೇ ತೊಟ್ಟಿಯಲ್ಲಿ ಕಾಲು ತೊಳೆದು ಒಳಗೆ ಬರಬೇಕು, ಕೈಯನ್ನು ಸ್ವಚ್ಛವಾಗಿ ತೊಳೆದು ಊಟ ಮಾಡುವುದು ಪದ್ಧತಿ, ಸಂಸ್ಕಾರ ಹೇಳಿಕೊಟ್ಟಿದ್ದಾರೆ. ಆಧುನಿಕ ಭರಾಟೆ, ಪಾಶ್ಚಿಮಾತ್ಯ ಸಂಸ್ಕೃತಿಯ ಗೀಳಿನಿಂದ ಇಂದಿನ ಯುವ ಜನತೆ ಹಾಸಿಗೆಯಲ್ಲೇ ಚಹಾ ಕುಡಿಯುವುದು, ಮನೆಯಲ್ಲಿ ಎಲ್ಲೆಂದರಲ್ಲಿ ಚಪ್ಪಲಿ, ಶೂ ಹಾಕಿಕೊಂಡು ಓಡಾಡುವುದು, ಅಹೋರಾತ್ರಿ ಮಲಗುವುದು, ಮಧ್ಯಾಹ್ನ ಏಳುವುದು, ಇಂತಹ ನಡವಳಿಕೆಗಳಿಂದ ಕೊರೊನಾ ಇನ್ನಿತರ ಕಾಯಿಲೆಗಳು ಅಪ್ಪಳಿಸುತ್ತಿವೆ. ನಮ್ಮ ಸಂಸ್ಕಾರ, ಸಂಸ್ಕೃತಿ ಮರೆಯಬಾರದು. ಜಾತ್ರಾ ಮಹೋತ್ಸವಗಳು ಭಾವೈಕ್ಯತೆ ಸಾರುವ ಮೂಲಕ, ಮಾನವೀಯ ಮೌಲ್ಯ, ಸಮಾನತೆಯನ್ನು ಸಾರುತ್ತವೆ ಎಂದು ಹೇಳಿದರು.
ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ರಕ್ಕಸಗಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಿದ್ದಪ್ಪ ಕನ್ನೂರ, ಎಚ್.ಜಿ. ರಾಜೂರ, ಶಂಕ್ರಪ್ಪ ಬೇವೂರ ಇತರರು ಇದ್ದರು. ಶರಣಕುಮಾರ ಶಾಸ್ತ್ರಿ, ಸಾವಿತ್ರಿ ಅಮ್ಮನವರಿಂದ ವೀರಭಧ್ರೇಶ್ವರ ಪುರಾಣ ಮಂಗಲ ಜರುಗಿತು. ಜಿ.ಎನ್. ಸಾಂತಗೇರಿ, ಮಲ್ಲಿಕಾರ್ಜುನ ಯರಗೇರಿ, ಶಂಕ್ರಪ್ಪ ಬಡದಾನಿ, ಈಶಪ್ಪ ಕಂದಗಲ್, ಮಲ್ಲಪ್ಪ ಬಡಿಗೇರ, ಶಿವಾನಂದ ಶಿರೋಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪುರವಂತರಿಂದ ವೀರಭಧ್ರೇಶ್ವರ ಒಡಪುಗಳು ನಡೆದವು. ನಿವೃತ್ತ ಉಪನ್ಯಾಸಕ ಅಶೋಕ ಚಿಕ್ಕಗಡೆ ನಿರೂಪಿಸಿದರು. ಸಿದ್ದಪ್ಪ ರಾಂಪೂರ ವಂದಿಸಿದರು.