ಹಾವೇರಿ: ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಸಾಧ್ಯವಿಲ್ಲ. ಹೀಗಾಗಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದು ಕಲಬುರಗಿ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಕಿರಣ್ ಗಾಜನೂರು ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಆಯೋಜಿಸಿರುವ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರೈತ, ಕಾರ್ಮಿಕ, ದಲಿತ, ಕೂಲಿಕಾರ ಎಲ್ಲ ಮನಸ್ಸುಗಳು ಸೇರಿ ಹಾಸ್ಟೆಲ್ ವಿದ್ಯಾರ್ಥಿಗಳ ಈ ಸಮಾವೇಶಕ್ಕೆ ಜತೆಯಾಗಿದ್ದು, ಐಕ್ಯ ಹೋರಾಟದ ಸೂಚಕವಾಗಿದೆ. ಇದು ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ, ಆದರೆ ಪ್ರಜಾಪ್ರಭುತ್ವ ಇನ್ನೂ ಜಾರಿಯಾಗದಿರುವುದು ಆತಂಕದ ಸಂಗತಿ. ಶೇ. 63ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ದೇಶ, ರಾಜ್ಯದ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು.ಖಾಸಗೀಕರಣ ಉದ್ಯೋಗ ಸೃಷ್ಟಿಸುತ್ತಿದೆ ಎಂದೂ ಎಲ್ಲರೂ ಹೇಳುತ್ತಾರೆ. ಆದರೆ ಅದು ಯಾವ ರೀತಿ ಗುಣಮಟ್ಟ ಸೃಷ್ಟಿಸುತ್ತದೆ ಎಂದು ಯೋಚಿಸುತ್ತಿಲ್ಲ. ಇದಕ್ಕೆ ಗಿಗ್ ವರ್ಕರ್ ಕೆಲಸದ ವಿಧಾನವನ್ನು ನೀವು ಅಧ್ಯಯನ ಮಾಡಿದರೆ ಉತ್ತರ ಸಿಗುತ್ತದೆ. ಯಾವ ಉದ್ಯೋಗಕ್ಕೂ ಭದ್ರತೆ ಇಲ್ಲ. ಇದನ್ನು ಹೋಗಲಾಡಿಸಬೇಕಾದರೆ ಗುಣಮಟ್ಟದ ಶಿಕ್ಷಣ ಸಿಗಬೇಕು, ಅದು ಸಾರ್ವತ್ರೀಕರಣಗೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಕಾಲೇಜುಗಳಷ್ಟೆ ಪಾತ್ರವನ್ನು ಹಾಸ್ಟೆಲ್ ನಿರ್ಮಿಸುತ್ತಿವೆ. ಹಾಸ್ಟೆಲ್ ಇಲ್ಲದೆ ಇದ್ದಿದ್ದರೆ ತಳ ಸಮುದಾಯದವರು ಶಿಕ್ಷಣದಿಂದ ಮತ್ತಷ್ಟು ವಂಚಿತರಾಗುತ್ತಿದ್ದರು. ವಂಚಿತ ಸಮುದಾಯಗಳ ಆಶಾಕಿರಣವಾಗಿರುವ ಹಾಸ್ಟೆಲ್‌ಗಳನ್ನು ಬಲಪಡಿಸಬೇಕಿದೆ ಎಂದರು.ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷ ಆದರ್ಶ ಸಾಜಿ ಮಾತನಾಡಿ, ರಾಜ್ಯದ ಹಾಸ್ಟೆಲ್‌ಗಳನ್ನು ಸುಧಾರಿಸಲು ಸರ್ಕಾರ ಮುಂದಾಗಬೇಕು. ಮಾಸಿಕವಾಗಿ ₹4500, ಆಹಾರ ಭತ್ಯೆ ನೀಡಬೇಕು ಹಾಗೂ ಹಾಸ್ಟೆಲ್‌ಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ಸಮಾಜ ಅಧ್ಯಯನ ಮಾಡಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ಈ ಸಮಾವೇಶ ಹಾಸ್ಟೆಲ್ ಬಲಪಡಿಸಲು ದಾರಿಯಾಗಲಿ ಎಂದರು.ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲೀಕಲ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಫ್‌ಐ ಕೇಂದ್ರ ಸಮಿತಿ ಸದಸ್ಯರಾದ ಸುಜಾತಾ ವೈ., ದೊಡ್ಡ ಬಸವರಾಜ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ಸಾಹಿತಿ ಸತೀಶ್ ಕುಲಕರ್ಣಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಪರಿಮಳ ಜೈನ್, ವಿಜಯ ಕುಮಾರ್ ಮುದುಕಣ್ಣವರ್, ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಹಾವೇರಿ, ಉಡುಚಪ್ಪ ಮಾಳಗಿ, ನಾರಾಯಣ ಕಾಳೆ, ರೇಣುಕಾ ಕಹಾರ, ಗಣೇಶ್ ರಾಠೋಡ್ ಸೇರಿದಂತೆ ಅನೇಕರಿದ್ದರು.
ರಾಜ್ಯ ಕಾರ್ಯದರ್ಶಿ ವಿಜಯ್ ಪ್ರಾಸ್ತಾವಿಕ ಮಾತನಾಡಿದರು. ಎಸ್. ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.