ಜಪ, ಹೋಮ, ದಾನಗಳಿಂದ ರೋಗ ನಾಶ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Aug 25, 2024, 01:45 AM IST
ಇಸಳೂರು ಸೀಮೆಯ ಶಿಷ್ಯರ ಸೇವೆಯನ್ನು ಶ್ರೀಗಳು ಸ್ವೀಕರಿಸಿದರು. | Kannada Prabha

ಸಾರಾಂಶ

ಜಗತ್ತಿನಲ್ಲಿ ಗೋಚರಿಸದೆ ಇರುವ ಸೂಕ್ಷ್ಮ ಕಾರಣಗಳೇ ಹೆಚ್ಚಿಗೆ ಕೆಲಸ ಮಾಡುತ್ತವೆ. ಕಾರಣ ಗೊತ್ತಾಗದೇ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದರು.

ಶಿರಸಿ: ರೋಗಗಳನ್ನು ಉಂಟುಮಾಡುವ ವಾಸನೆಗಳನ್ನು ಜಪ, ಹೋಮ, ದಾನಗಳ ಮೂಲಕ ಮೊದಲೇ ನಾಶ ಮಾಡಬಹುದು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ಕಿರಿಯ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯದಲ್ಲಿ ಇಸಳೂರು ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.ನಮ್ಮ ಅನೇಕ ಸಮಸ್ಯೆಗಳಿಗೆ ಸೂಕ್ಷ್ಮ ಕಾರಣಗಳು ಇರುತ್ತವೆ. ನಮಗೆ ಕಲ್ಪನೆಗೂ ಬಾರದ ರೀತಿಯಲ್ಲಿ ಆರೋಗ್ಯದ ಬದಲಾವಣೆ ಆಗುತ್ತದೆ. ಮೇಲ್ನೋಟಕ್ಕೆ ಏನೂ ಕಾರಣಗಳು ಕಾಣುವುದಿಲ್ಲ. ಇದೇ ರೀತಿ ನಮಗೆ ಗೊತ್ತಿಲ್ಲದ ಸೂಕ್ಷ್ಮ ಕಾರಣಗಳು ಇನ್ನೂ ಹಲವು ಇರುತ್ತವೆ. ಜಗತ್ತಿನಲ್ಲಿ ಗೋಚರಿಸದೆ ಇರುವ ಸೂಕ್ಷ್ಮ ಕಾರಣಗಳೇ ಹೆಚ್ಚಿಗೆ ಕೆಲಸ ಮಾಡುತ್ತವೆ. ಕಾರಣ ಗೊತ್ತಾಗದೇ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ.

ಸ್ಥೂಲ ಶರೀರದ ವ್ಯಾಧಿಗಳಿಗೆ ಸೂಕ್ಷ್ಮ ಶರೀರವೇ ಕಾರಣ. ಸ್ವಪ್ನ ಅವಸ್ಥೆಯಲ್ಲಿ ಗೋಚರವಾಗುವ ಶರೀರಗಳೇ ಸೂಕ್ಷ್ಮ ಶರೀರ. ಸೂಕ್ಷ್ಮ ಶರೀರದಲ್ಲಿ ಮನಸ್ಸು ಒಂದು ಮುಖ್ಯವಾದ ಭಾಗ. ಸೂಕ್ಷ್ಮ ಶರೀರವು ಅನೇಕ ಜನ್ಮಗಳಿಂದ ನಮ್ಮ ಜತೆ ಬರುತ್ತವೆ. ಸ್ಥೂಲ ಶರೀರ ಹಾಗಲ್ಲ. ಈ ಜನ್ಮದಲ್ಲೇ ನಾಶವಾಗಿ ಹೋಗುತ್ತದೆ. ಸೂಕ್ಷ್ಮ ಶರೀರದಲ್ಲಿ ಹಿಂದಿನ ಜನ್ಮಗಳ ವಾಸನೆಗಳು ಇರುತ್ತವೆ. ನಮಗೆ ಒಳ್ಳೆಯದನ್ನು ಮಾಡುವ ಕೆಲವು ವಾಸನೆಗಳೂ ಇರುತ್ತವೆ. ಅವುಗಳನ್ನು ಪುಣ್ಯ ಎಂದು ಕರೆಯುತ್ತೇವೆ. ಅನೇಕ ವಾಸನೆಗಳು ರೋಗಕ್ಕೆ ಕಾರಣವಾಗುತ್ತವೆ. ಅವುಗಳನ್ನು ಪಾಪಗಳು ಎಂದು ಕರೆಯುತ್ತೇವೆ ಎಂದರು.ನಮ್ಮ ಶರೀರ ಹೇಗೆ ಇದೆಯೋ ಅದೇ ರೀತಿ ನಮ್ಮನ್ನು ಎಲ್ಲ ಒಟ್ಟುಗೂಡಿಸುವ ಒಂದು ಸಮಷ್ಟಿ ಜೀವ ಇದೆ. ಇಡೀ ಬ್ರಹ್ಮಾಂಡವೇ ಅವನ ಶರೀರ. ಭೂಮಿ, ಆಕಾಶ, ವಾಯು ಮೊದಲಾದವುಗಳೇ ಅವನ ಅವಯವಗಳು. ಅವನ ಈ ಶರೀರದ ಅವಯವಗಳಿಗೆ ರೋಗ ಉಂಟಾಗುತ್ತದೆ. ಪ್ರಕೃತಿವಿಕೋಪಗಳು ಅವನ ರೋಗಗಳು. ಪ್ರಕೃತಿಯಲ್ಲಿ ಆಗುವ ಅನಾಹುತಗಳು ಮತ್ತು ಸಮೃದ್ಧಿಗಳಿಗೆ ಬ್ರಹ್ಮಾಂಡದ ಒಳಗಿರುವ ವಾಸನೆಗಳೇ ಕಾರಣ. ನಾವು ಮಾಡುವ ಧರ್ಮಚರ್ಣೆಗಳಿಂದಲೇ ಇಂತಹ ಅನಾಹುತಗಳನ್ನು ತಡೆಯಲು ಸಾಧ್ಯ ಎಂದರು.ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರಾದ ಸತ್ಯನಾರಾಯಣ ಭಟ್, ಶ್ರೀಪಾದ ಭಟ್ಟ, ಪ್ರಸನ್ನ ಭಟ್ಟ ಇತರರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ