ಎಸ್ಸೆಸ್ಸೆಲ್ಸಿ ವಿಜ್ಞಾನ ಪ್ರಶ್ನೆ ಪತ್ರಿಕೆ ವಿನ್ಯಾಸ ಬದಲಾಗಲಿ

KannadaprabhaNewsNetwork | Published : Oct 13, 2024 1:11 AM

ಸಾರಾಂಶ

ಇತ್ತೀಚಿನ ಅರ್ಧವಾರ್ಷಿಕ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯು ೧೦ ನೇ ತರಗತಿ ಮಕ್ಕಳಿಗೆ ಕಬ್ಬಿಣಕ್ಕಿಂತಲೂ ಕಠಿಣವಾದ ಕಡಲೆಯಾಗಿತ್ತು. ಮಕ್ಕಳ ಮನೋಸ್ಥೈರ್ಯವನ್ನು ತಗ್ಗಿಸುವಂತಿತ್ತು. ಕೆಲವು ಪ್ರಶ್ನೆಗಳು ಮಕ್ಕಳಿಗೆ ಅರ್ಥವೇ ಆಗಲಿಲ್ಲ. ಇದು ಮಕ್ಕಳು ಮುಂದಿನ ದಿನಗಳಲ್ಲಿ ವಿಜ್ಞಾನ ಓದುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಪ್ರಸ್ತುತ ೨೦೨೪-೨೫ ನೇ ಸಾಲಿನಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಬದಲಾವಣೆ ತರುವ ಮೂಲಕ ಮಕ್ಕಳ ಮನೋಸ್ಥೈರ್ಯ ಕುಗ್ಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲಾ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯು ಡಿಡಿಪಿಐ ಮೂಲಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು, ಶಿಕ್ಷಣ ವಿದ್ಯಾರ್ಥಿ ಕೇಂದ್ರಿತವಾಗಿರುವಂತೆ ಮಕ್ಕಳಿಗೆ ನೀಡುವ ಪ್ರಶ್ನೆಪತ್ರಿಕೆಗಳು ಸಹಾ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು ಎಂಬುದನ್ನು ಮನಗಂಡು ಪ್ರಶ್ನೆಪತ್ರಿಕೆ ತಯಾರಿಸಲು ಆಗ್ರಹಿಸಿದರು.ಭಯ ಹುಟ್ಟಿಸುವ ಪ್ರಶ್ನೆಪತ್ರಿಕೆ

ಇತ್ತೀಚಿನ ಅರ್ಧವಾರ್ಷಿಕ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯು ೧೦ ನೇ ತರಗತಿ ಮಕ್ಕಳಿಗೆ ಕಬ್ಬಿಣಕ್ಕಿಂತಲೂ ಕಠಿಣವಾದ ಕಡಲೆಯಾಗಿತ್ತು. ಮಕ್ಕಳ ಮನೋಸ್ಥೈರ್ಯವನ್ನು ತಗ್ಗಿಸುವಂತಿತ್ತು. ಕೆಲವು ಪ್ರಶ್ನೆಗಳು ಮಕ್ಕಳಿಗೆ ಅರ್ಥವೇ ಆಗಲಿಲ್ಲ. ಇದು ಮಕ್ಕಳು ಮುಂದಿನ ದಿನಗಳಲ್ಲಿ ವಿಜ್ಞಾನ ಓದುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಜ್ಞಾನ ಪ್ರಶ್ನೆಪತ್ರಿಕೆ ನೀಡಿಕೆಯಲ್ಲಿನ ಲೋಪದಿಂದಾಗಿ ಪಿ.ಯು ಕಾಲೇಜ್‌ಗಳಲ್ಲಿ ವಿಜ್ಞಾನ ಓದುವವರ ಸಂಖ್ಯೆ ದಿನ ದಿನಕ್ಕೆ ಕ್ಷೀಣಿಸುತ್ತಿದೆ, ಮಕ್ಕಳಲ್ಲಿ ವಿಜ್ಞಾನವೆಂದರೆ ಭಯ ಆತಂಕ ಮೂಡಿಸುವಂತೆ ಪ್ರಶ್ನೆಪತ್ರಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಸಮತೋನಲನ ಕಾಪಾಡಿ

೨೦೨೪-೨೫ ನೇ ಸಾಲಿನ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಲಾಗಿ ಶೇ.೩೦ರಷ್ಟು ಅಂದರೆ ೨೪ ಅಂಕಗಳು ಇರಬೇಕಾದ ಸುಲಭ ಪ್ರಶ್ನೆಗಳು ೧೪ ಅಂಕಗಳು ಮಾತ್ರ ಇವೆ. ಅನ್ವಯಿಕ ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಸಮತೋಲನವಿಲ್ಲದ ಪ್ರಶ್ನೆ ಪತ್ರಿಕೆ ತಯಾರಿಸಿದಾಗ ನಿಧಾನಗತಿಯ ಕಲಿಕೆಯ ಮತ್ತು ಸರಾಸರಿ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪ್ರಮಾಣ ಬೀರುತ್ತದೆ ಎಂದರು.ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಂಕ ಮತ್ತು ಆಸಕ್ತಿ ಗಳಿಸಲು ಅನುವಾಗುವಂತೆ ಮುಂಬರುವ ದಿನಗಳಲ್ಲಿ ಹತ್ತನೇ ತರಗತಿಯ ವಿಜ್ಙಾನ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ತರಲು ಆಗ್ರಹಿಸಿದ ಅವರು, ಎಸ್ಸೆಸ್ಸೆಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಸಹ ಪಿ.ಯು.ಸಿ. ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿ ಪರಿಷ್ಕಸಲು ಮನವಿ ಮಾಡಿದರು.ಪಠ್ಯದದಲ್ಲಿನ ಪ್ರಶ್ನೆ ಕೇಳಿ

ಪ್ರಶ್ನೆಪತ್ರಿಕೆಯಲ್ಲಿ ಶೇ.೫೦ ರಷ್ಟು ಸುಲಭವಾದ ಪ್ರಶ್ನೆಗಳು ಇದ್ದರೆ ಸುಲಭವಾಗಿ ೧೦ನೇ ತರಗತಿ ತೇರ್ಗಡೆಯಾಗುವವರಿಗೆ ಅನಾವಶ್ಯಕ ಹೊರೆಯಾಗುದಿಲ್ಲ. ಪಠ್ಯ ಪುಸ್ತಕದ ಅಭ್ಯಾಸ ಕ್ರಮದಲ್ಲಿರುವ ಪ್ರಶ್ನೆಗಳನ್ನೇ ಶೇ.೫೦ ರಷ್ಟು ಕೇಳಲಿ. ಇಲ್ಲದೇ ಹೋದರೆ ಅಭ್ಯಾಸ ಕ್ರಮಕ್ಕೆ ಬೆಲೆ ಇರುವುದಿಲ್ಲ. ಪ್ರತಿ ವರ್ಷ ನೀಲ ನಕಾಶೆಯನ್ನು ಪ್ರತಿ ವರ್ಷ ಅಕ್ಟೋಬರ್ ಒಳಗೆ ನೀಡುವಂತೆ ಕ್ರಮ ವಹಿಸಲು ಕೋರಿದ ವಿಜ್ಞಾನ ಶಿಕ್ಷಕರ ವೇದಿಕೆ ಪದಾಧಿಕಾರಿಗಳು, ಪ್ರಶ್ನೆ /ಉತ್ತರ ಪತ್ರಿಕೆ ಎರಡೂ ಒಂದರಲ್ಲೇ ಬಂದರೆ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಕಡಿಮೆ ಆಗಲಿದೆ. ಬೇರೆಲ್ಲಾ ವಿಷಯಗಳಂತೆ ವಿಜ್ಞಾನ ವಿಷಯದಲ್ಲೂ ಪ್ರಶ್ನೆ ಪತ್ರಿಕೆ ವಿನ್ಯಾಸವಿರಬೇಕು ಎಂದು ಮನವಿ ಮಾಡಿದರು.

ಡಿಡಿಪಿಐಗೆ ಸಮಸ್ಯೆಗಳ ಮನವರಿಕೆ

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ನಾರಾಯಣ ರೆಡ್ಡಿ, ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಡಿಡಿಪಿಐ ಅವರಿಗೆ ವಿಜ್ಞಾನ ಶಿಕ್ಷಕರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಜಿಲ್ಲಾಧ್ಯಕ್ಷ ಮುರಳಿ ಮೋಹನ್, ವಿಜ್ಞಾನ ಶಿಕ್ಷಕರ ವೇದಿಕೆಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಶಿಕ್ಷಕರಾದ ರಾಜಶೇಖರ್, ಗೋಪಾಲ್ ರಾವ್, ರಮೇಶ್, ಪುಷ್ಪ, ಜಯಸುಧ, ಲೇಖ, ಎಂ.ಬಿ.ಶ್ವೇತಾ, ಸುಲೋಚನ, ರೇಣುಕಾ, ಪವಿತ್ರ ಜಿಲ್ಲೆಯ ಇನ್ನೂ ಹಲವಾರು ವಿಜ್ಞಾನ ಶಿಕ್ಷಕರು ಹಾಜರಿದ್ದರು.

Share this article