ಮೊಬೈಲ್‌ ಗೀಳು ತಪ್ಪಿಸಲು ಸುಸಜ್ಜಿತ ಗ್ರಂಥಾಲಯ ಸ್ಥಾಪನೆ

KannadaprabhaNewsNetwork |  
Published : Jul 09, 2025, 12:20 AM IST
8ಎಚ್‌ ಆರ್‌ ಪಿ 1 ಹರಪನಹಳ್ಳಿ ಪಟ್ಟಣದ  ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ಸಮುದಾಯದ ಸಹಬಾಗಿತ್ವದಲ್ಲಿ  ಸ್ಥಾಪನೆಯಾಗಿರುವ ಸುಸಜ್ಜಿತ ಗ್ರಂಥಾಲಯದಲ್ಲಿ ಮಕ್ಕಳು ವಿವಿಧ ಪುಸ್ತಕಗಳನ್ನು ಓದುತ್ತಿರುವುದು.  | Kannada Prabha

ಸಾರಾಂಶ

ಮೊಬೈಲ್ ಬಿಡಿಸಿ ಓದುವ ಹವ್ಯಾಸ ರೂಢಿಸಲು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ಶಾಲೆಯು ಮುಂದಾಗಿದೆ.

ಸರ್ಕಾರಿ ಆದರ್ಶ ಶಾಲೆಯಲ್ಲಿ ಮಾದರಿ ಕಾರ್ಯ

ಓದುವ ಹವ್ಯಾಸ ಬೆಳೆಸಲು ಹೊಸ ಪ್ರಯತ್ನಬಿ.ರಾಮಪ್ರಸಾದ್ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಈಚೆಗೆ ಮಕ್ಕಳಲ್ಲಿ, ಯುವ ಜನತೆಯಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಹೃದಯಾಘಾತ ಸಹ ಹೆಚ್ಚಾಗುತ್ತಿವೆ ಎಂಬ ಮಾತುಗಳು ದಿನ ನಿತ್ಯ ಕೇಳಿ ಬರತೊಡಗಿವೆ. ಆದ್ದರಿಂದ ಮೊಬೈಲ್ ಬಿಡಿಸಿ ಓದುವ ಹವ್ಯಾಸ ರೂಢಿಸಲು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ಶಾಲೆಯು ಮುಂದಾಗಿದೆ.

ಪಟ್ಟಣದ ಹೊರವಲಯದ ಅನಂತನಹಳ್ಳಿ ಬಳಿ ಇರುವ ಸರ್ಕಾರಿ ಆದರ್ಶ ಶಾಲೆಯಲ್ಲಿ 6ರಿಂದ 10ನೇ ತರಗತಿ ವರೆಗೆ ಇದ್ದು, ಒಟ್ಟು 444 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಪಿಯು ಆರಂಭವಾಗಿದ್ದು ಇನ್ನೂ ದಾಖಲಾತಿ ಆಗಬೇಕಿದೆ.

ಮೊದಲು ಇಲ್ಲಿ ಗ್ರಂಥಾಲಯ ಇರಲಿಲ್ಲ. ಈ ಶಾಲೆಗೆ 3 ವರ್ಷಗಳ ಹಿಂದೆ ಬಂದ ಎಚ್.ಕೆ. ಚಂದ್ರಪ್ಪ ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿ ತೆಗೆದುಕೊಂಡರು. ಆ ಸಮಯದಲ್ಲಿ ಮಕ್ಕಳ ಮೊಬೈಲ್ ಬಳಕೆ ಬಗ್ಗೆ ಎಲ್ಲಾ ಕಡೆ ಮಾತುಗಳು ಕೇಳಿಬರತೊಡಗಿದವು. ಆಗ ಮೊಬೈಲ್ ಬಳಕೆ ತಪ್ಪಿಸಲು ಓದುವ ಹವ್ಯಾಸ ರೂಢಿಸಬೇಕು ಎಂದು ಯೋಚಿಸಿ ಹಾಗಾದರೆ ಹೇಗೆ ಗ್ರಂಥಾಲಯ ಸ್ಥಾಪನೆ ಮಾಡಬೇಕು ಅದಕ್ಕೆ ಸಂಪನ್ಮೂಲ ಎಲ್ಲಿಂದ ಎಂಬ ಪ್ರಶ್ನೆ ಉದ್ಬವವಾದವು.

ಆಗ ಮುಖ್ಯೋಪಾಧ್ಯಾಯರು ದೇಣಿಗೆ ಬಗ್ಗೆ ಗಮನಹರಿಸಿದಾಗ ಸೀಡ್ಸ ಕಂಪನಿಯ ಶಿವಣ್ಣನವರು 3 ಗಾಡ್ರೇಜ್, 3 ರ್‍ಯಾಕ್, 3 ರೀಡಿಂಗ್ ಸ್ಟ್ಯಾಂಡ್‌ ಹಾಗೂ ಹಗರಿಬೊಮ್ಮಹಳ್ಳಿಯ ಸೀಡ್ಸ ಕಂಪನಿಯ ನಿಂಗಪ್ಪ 2 ಉದ್ದನೆಯ ಟೇಬಲ್ ಗಳು, 60 ಖುರ್ಚಿ ದೇಣಿಗೆ ನೀಡಿದರು.

ಎಲ್ಲಾ ಶಿಕ್ಷಕರು ಸ್ವತಃ ಹಣ ಹಾಕಿ ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್, ಸರ್ವಜ್ಞ ಸೇರಿದಂತೆ ವಿವಿಧ 180 ಮಹನೀಯರ ಭಾವಚಿತ್ರ ಸಂಗ್ರಹಿಸಿ ತೂಗು ಹಾಕಿದರು.

ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಾಗ ಎಂ.ಪಿ. ಲತಾ ₹3 ಲಕ್ಷ ಅನುದಾನ ನೀಡಿ ವಿವಿಧ ಪುಸ್ತಕ ಕೊಡಿಸಿದರು. ಈಗ ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಂಗ್ಲಿಷ್ ಗ್ರಾಮರ್, ಎಸ್ಸೆಸ್ಸೆಲ್ಸಿ ಮಕ್ಕಳ ಎಲ್ಲಾ ವಿಷಯಕ್ಕೆ ಸಂಬಂಧ ಪಟ್ಟ ಪುಸ್ತಕಗಳು, ರಾಮಾಯಣ, ಮಹಾಭಾರತ ಹಾಗೂ ವಿಜ್ಞಾನಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಸೇರಿ ಒಟ್ಟು 3500 ಪುಸ್ತಕಗಳು ರಾರಾಜಿಸುತ್ತಿವೆ.

ಸುಸಜ್ಜಿತ ಗ್ರಂಥಾಲಯವೇನೊ ಸಿದ್ಧವಾಯಿತು, ಮಕ್ಕಳನ್ನು ಓದುವ ಕಡೆ ಸೆಳೆಯಲು ತರಗತಿಗಳ ಪ್ರತಿ ವಿಭಾಗಕ್ಕೂ ವಾರದಲ್ಲಿ 2 ದಿನ ಗ್ರಂಥಾಲಯ ತರಗತಿಗಳನ್ನು ನಿಗದಿಗೊಳಿಸಿ ಮಕ್ಕಳನ್ನು ಓದಲು ಸಜ್ಜುಗೊಳಿಸಿದರು.

ಇನ್ನೂ ಹೆಚ್ಚಿನ ಪುಸ್ತಕ ಸಂಗ್ರಹಿಸಲು ಮಕ್ಕಳ ಹುಟ್ಟು ಹಬ್ಬದ ದಿನ ಆ ಮಗುವಿನ ಪೋಷಕರು ಒಂದು ಪುಸ್ತಕ, ಒಂದು ಸಸಿ ದೇಣಿಗೆ ನೀಡಲು ಮುಂದಾದರು ಇದರಿಂದ ಪುಸ್ತಕಗಳ ಹರಿವು ಹೆಚ್ಚಾಯಿತು.

ಡಿಎಂಎಫ್‌ ಅನುದಾನದಲ್ಲಿ 20 ಕಂಪ್ಯೂಟರ್‌ಗಳು ಸಹ ಬಂದವು. ಆದರೆ ಬೇಸಿಕ್ ಕಂಪ್ಯೂಟರ್‌ ಕಲಿಸಲು ಶಿಕ್ಷಕರು ಇರಲಿಲ್ಲ. ಒಬ್ಬ ಕಂಪ್ಯೂಟರ್‌ ಶಿಕ್ಷಕರನ್ನು ಹೊರಗಡೆಯಿಂದ ಕರೆಸಿ ಅವರಿಗೆ ಪೋಷಕರ ದೇಣಿಗೆ ಹಣವನ್ನು ಶಾಲಾಭಿವೃದ್ಧಿ ಸಮಿತಿ ಖಾತೆಗೆ ಹಾಕಿಸಿ ಅಲ್ಲಿಂದ ಅವರಿಗೆ ವೇತನ ನೀಡುವ ಯೋಜನೆ ಹಾಕಿಕೊಳ್ಳಲಾಯಿತು.

ಗ್ರಂಥಾಲಯ ನಿರ್ವಹಣೆಯನ್ನು ಚಿತ್ರಕಲಾ ಶಿಕ್ಷಕ ಸಲಾಂ ಸಾಹೇಬ್, ದೈಹಿಕ ಶಿಕ್ಷಕ ಸಂತೋಷ ಮಾಡುತ್ತಿದ್ದು, ರಾತ್ರಿ ಕಾವಲುಗಾರ ಹನುಮಂತಪ್ಪನ ಶ್ರಮ ಸಹ ಇದೆ.

ಒಟ್ಟಿನಲ್ಲಿ ಈ ಸರ್ಕಾರಿ ಆದರ್ಶ ಶಾಲೆ ಯಾವ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತಾಗಿದ್ದು, ಗ್ರಂಥಾಲಯದ ಒಳಗೆ ಹೋದರೆ ಸಂತಸವಾಗುತ್ತದೆ. ಮಕ್ಕಳನ್ನು ಓದುವ ಗೀಳಿಗೆ ಹಚ್ಚಲು ಮುಖ್ಯೋಪಾಧ್ಯಾಯ ಎಚ್.ಕೆ. ಚಂದ್ರಪ್ಪ ನೇತೃತ್ವದಲ್ಲಿ ಶಿಕ್ಷಕರ ಬಳಗ ಮಾಡಿರುವ ಪ್ರಯತ್ನ ಇತರ ಶಾಲೆಗಳಿಗೆ ಮಾದರಿಯಾಗಿದೆ.

PREV