ಕೊಪ್ಪಳ:
ಕೊಪ್ಪಳ ಬಳಿ ಬಿಎಸ್‌ಪಿಎಲ್ ಬೃಹತ್ ಕಾರ್ಖಾನೆಗೆ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದು ಪರಿಸರವಾದಿ ನಾಗೇಶ ಹೆಗಡೆ ಹೇಳಿದರು.ಒಂದು ವೇಳೆ ಜಿಲ್ಲೆಯಲ್ಲಿ ಕಾರ್ಖಾನೆಗಳ ಸ್ಥಾಪನೆಯಾದರೆ ಕೊಪ್ಪಳಕ್ಕೆ ಅಪಾಯ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಮ್ಮಿಕೊಂಡಿದ್ದ ಕಾರ್ಖಾನೆಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕುರಿತು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಅವರು, ಕಾರ್ಖಾನೆ ಹಾಗೂ ಅಣುಸ್ಥಾವರ ಸ್ಥಾಪಿಸುವ ಕುರಿತು ಸರ್ವೇ ನಡೆಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.ಈಗ ಕೊಪ್ಪಳಕ್ಕೆ ದೊಡ್ಡ ಅಪಾಯ ಎದುರಾಗಿದೆ. ಈಗಗಾಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳಕ್ಕೆ ಏನೇನು ಲಾಭವಾಗಿದೆ, ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ 28ನೇ ಸ್ಥಾನದಲ್ಲಿದೆ. ಇನ್ನು ಅಸಮಾನತೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕಾರ್ಖಾನೆಗಳು ಬಂದಿದ್ದರಿಂದ ಇಲ್ಲಿಯ ಜನರ ಆರ್ಥಿಕ ಕಲ್ಯಾಣವೂ ಆಗಿಲ್ಲ. ಉದ್ಯೋಗವೂ ದೊರೆತಿಲ್ಲ. ವಾಸ್ತವ ಹೀಗಿರುವಾಗ ಈಗ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಬೃಹತ್ ಕಾರ್ಖಾನೆ ತಲೆ ಎತ್ತುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ವಿರುದ್ಧ ಕೊಪ್ಪಳ ಚರಿತ್ರೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಪಕ್ಷಾತೀತ, ಜ್ಯಾತ್ಯತೀತ ಹಾಗೂ ಧರ್ಮಾತೀತವಾಗಿ ಹೋರಾಟ ಮಾಡಲು ಒಗ್ಗೂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಜನಶಕ್ತಿ ಮುಂದೆ ಯಾವ ಶಕ್ತಿಯೂ ನಿಲ್ಲಲು ಸಾಧ್ಯವಿಲ್ಲ. ಇದರ ಜತೆಗೆ ಗವಿಸಿದ್ಧೇಶ್ವರ ಶ್ರೀಗಳು ಬೆಂಬಲ ನೀಡಿ, ಹೋರಾಟಕ್ಕೆ ಬಂದಿರುವುದು ದೊಡ್ಡ ಶಕ್ತಿ ದೊರೆತಿದೆ ಎಂದರು.
ಎಂಎಸ್‌ಪಿಎಲ್ ₹ 54 ಸಾವಿರ ಕೋಟಿ ವೆಚ್ಚದಲ್ಲಿ ಬಿಎಸ್‌ಪಿಎಲ್ ಬೃಹತ್ ಕಾರ್ಖಾನೆ ಹಾಕಲು ಮುಂದಾಗಿರುವುದು, ರಾಜ್ಯ ಸರ್ಕಾರ ಅದಕ್ಕೆ ಅನುಮೋದನೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಇದೀಗ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕಿದ್ದು ಆ ವೇಳೆ ವಿರೋಧಿಸಬೇಕೆಂದು ಹೇಳಿದ ಅವರು, ಈ ಕಾರ್ಖಾನೆಗಳಿಂದ ಕೊಪ್ಪಳದ ನೆಲ, ಜಲ ಮತ್ತು ಗಾಳಿ ವಿಷವಾಗಿದೆಯೇ ಹೊರತು ಪ್ರಯೋಜನವಾಗಿಲ್ಲ. ಇದರ ಜತೆಗೆ ಅಣುವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಸರ್ವೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ನಿಖರತೆ ಇಲ್ಲ. ಹಾಗೊಂದು ವೇಳೆ ಅಣುಸ್ಥಾವರ ಸ್ಥಾಪಿಸಿದರೆ ಕೊಪ್ಪಳ ಮಾತ್ರವಲ್ಲದೆ ರಾಯಚೂರು, ವಿಜಯನಗರ, ಬಳ್ಳಾರಿ, ಗದಗ ಜಿಲ್ಲೆಯ ಜನರಿಗೂ ಅಪಾಯ ಕಾದಿದೆ. ಜತೆಗೆ ರಾಜ್ಯದ ಜನರಿಗೂ ಅಪಾಯವೊಡ್ಡುತ್ತದೆ. ಹೀಗಾಗಿ ನಾವು ಅದನ್ನು ವಿರೋಧಿಸಬೇಕು. ಜರ್ಮನ್, ಜಪಾನ್‌ನಲ್ಲಿ ಅಣುವಿದ್ಯುತ್ ಸ್ಥಾವರ ಬೇಡವೇ ಬೇಡ ಎಂದಿದ್ದಾರೆ. ಹೀಗಿರುವಾಗ ಕೊಪ್ಪಳ ಬಳಿ ಸ್ಥಾಪಿಸಿದರೇ ಮುಂದಿನ ಪೀಳಿಗೆಗೆ ದೊಡ್ಡ ಕುತ್ತು ಕಾದಿದೆ ಎಂದು ನಾಗೇಶ ಹೆಗಡೆ ಎಚ್ಚರಿಸಿದರು.ಕೃಷಿ ತಜ್ಞ ಹೇಮಂತ ರಾಮವಾಡಗಿ ಮಾತನಾಡಿ, ಕಾರ್ಖಾನೆಗಳಿಂದ ಆಗುವ ದುಷ್ಪರಿಣಾಮ ಕುರಿತು ಮುಚ್ಚಿಡುತ್ತಾರೆ. ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಹಣ ಕೊಡುವ ಬಂಡವಾಳಶಾಹಿಗಳು ಅವರನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಧೂಳಿನಿಂದಾಗಿ ಬೆಳೆ ಬರಡಾಗುತ್ತಿದೆ. ಕೊಪ್ಪಳ ಬಳಿ ಕಾರ್ಖಾನೆ ಆರಂಭಿಸುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದ್ದು, ಇದನ್ನು ವಿರೋಧಿ ನಡೆಸುತ್ತಿರುವ ಹೋರಾಟ ನಿರಂತರವಾಗಿರಬೇಕು. ಕಾರ್ಖಾನೆಗೆ ಪರವಾನಗಿ ನೀಡಿದ ಅಧಿಕಾರಿಗಳಿಗೆ ಜ್ಞಾನವಿಲ್ಲವೇ ಎಂದು ಪ್ರಶ್ನಿಸಿದರು.ರಮೇಶಗೌಡ ಬಗನಾಳ ಮಾತನಾಡಿ, ಈ ಧೂಳಿನಿಂದ ನಮ್ಮ ಜೀವನವೇ ಹಾಳಾಗಿದೆ. ಇತ್ತೀಚಿಗೆ ನಮ್ಮ ಸಹೋದರ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ. ರಕ್ತ ಕೊಟ್ಟೇವು. ಕಾರ್ಖಾನೆಗೆ ಭೂಮಿ ನೀಡುವುದಿಲ್ಲ. ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ತುಂಗಭದ್ರಾ ನದಿ ಹಸಿರಾಗಲು ಕಾರ್ಖಾನೆಗಳು ಕಾರಣ ಎನ್ನುವುದು ಗೊತ್ತಾಗಿದೆ ಎಂದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಾರ್ಖಾನೆಯಿಂದ ಬಾಧಿತರ ಆರೋಗ್ಯ ಕುರಿತು ನಂಬಿಕಾರ್ಹ ಸಂಸ್ಥೆಯಿಂದ ಸಮೀಕ್ಷೆಯಾಗಬೇಕು. ಅಣುಸ್ಥಾವರ ಬೇಡ. ಎಂಎಸ್‌ಪಿಎಲ್ ಕಾರ್ಖಾನೆ ಬೇಡ ಎಂದರು.ಕಾರ್ಖಾನೆಯ ಬಾಧಿತ ಪ್ರದೇಶದ ರೈತರಾದ ಪರಪ್ಪ ಕುಂಬಾರ ಹಾಗೂ ರಮೇಶಗೌಡ ಅವರಿಂದ ವಿಚಾರ ಸಂಕಿರಣ ಉದ್ಘಾಟಿಸಲಾಯಿತು. ಬಸವರಾಜ ಶೀಲವಂತರ ಸ್ವಾಗತಿಸಿದರು. ಡಿ.ಎಚ್. ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ಟಿ. ರತ್ನಕರ, ಜ್ಯೋತಿ ಗೊಂಡಬಾಳ, ಕಾಶಪ್ಪ ಚಲವಾದಿ, ಕಾಸಿಂ ಸರದಾರ, ಮಂಗಳೇಸ, ರವಿಕುಮಾರ, ಸೋಮರಡ್ಡಿ ಅಳವಂಡಿ. ಶರಣಪ್ಪ ಸಜ್ಜನ, ಕೆ.ಬಿ. ಗೋನಾಳ, ನಜೀರ ಮೂಲಿಮನಿ, ಡಿ.ಎಂ. ಬಡಿಗೇರ ಇದ್ದರು.