ಹಾವೇರಿ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಮಟ್ಟದದಲ್ಲಿ ಕೂಡಲೇ ಡೆಂಘೀ ವಾರ್ ರೂಂ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡೆಂಘೀ ನಿಯಂತ್ರಣಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಸದ್ಯ ಕಚೇರಿ ಸಮಯದಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸಲಿದ್ದು, ಅಗತ್ಯಬಿದ್ದರೆ ೨೪*೭ ಕಾರ್ಯನಿರ್ವಹಣೆ ಮಾಡಲಾಗುವುದು. ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲಾಗಿದೆ, ಹಾಟ್ ಸ್ಪಾಟ್‌ಗಳನ್ನು ಗುರುತಿಸಿ ಫೀವರ್ ಕ್ಲಿನಿಕ್ ಆರಂಭಿಸಲಾಗುವುದು. ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಸೊಳ್ಳೆನಿರೋಧಕ ಬೇವಿನ ಎಣ್ಣೆ ಇತರೆ ಸೊಳ್ಳೆ ನಿರೋಧಕ ವಸ್ತುಗಳ ವಿತರಣೆಗೆ ಕ್ರಮವಹಿಸಲಾಗುವುದು. ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ, ಆದರೆ ಮನೆ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ಸಂಗ್ರಹಣೆ ಸಲಕರಣೆಗಳನ್ನು ವಾರಕ್ಕೊಂದು ಬಾರಿ ಸ್ವಚ್ಛಗೊಳಿಸಿ ಹೊಸ ನೀರು ತುಂಬಿಸಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೀ ಪ್ರಕರಣಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಸಿಬ್ಬಂದಿ ಕೊರತೆ ಕಾರಣ ಸ್ವಯಂ ಸೇವಕರ ಸೇವೆ ಪಡೆಯಲು ಕ್ರಮವಹಿಸಲಾಗಿದೆ. ಡೆಂಘೀ ನಿರ್ಮೂಲನೆಗೆ ಇಲಾಖೆಗಳೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.ಜನವರಿಯಿಂದ ೫೧೩ ಖಚಿತ ಡೆಂಘೀ ಪ್ರಕರಣಗಳು ಕಂಡುಬಂದಿದ್ದು, ಹಾವೇರಿ-೬೩, ರಾಣಿಬೆನ್ನೂರು-೨೩, ಬ್ಯಾಡಗಿ-೯೧, ಹಾನಗಲ್-೧೯೫, ಶಿಗ್ಗಾಂವ-೨೭, ಸವಣೂರು-೦೮, ಹಿರೇಕೆರೂರು-೮೨. ರಟ್ಟಿಹಳ್ಳಿ-೨೪ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ೫೦೬ ಜನರು ಗುಣಮುಖರಾಗಿದ್ದಾರೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಜನರು ಹಾಗೂ ಮಣಿಪಾಲ ಮತ್ತು ಹುಬ್ಬಳ್ಳಿ ಕಿಮ್ಸ್‌ನಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ ಒಂದು ಮರಣ ಸಂಭವಿಸಿದೆ ಎಂದು ತಿಳಿಸಿದರು.ಹೆಚ್ಚುವರಿ ವಾರ್ಡ್: ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಎರಡು ಪ್ರತ್ಯೇಕ ವಾರ್ಡುಗಳನ್ನು ತೆರೆದು ಹೆಚ್ಚುವರಿ ೨೩ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಜ್ವರ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಗೆ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಜಿಲ್ಲೆಯ ೩.೫೦ ಲಕ್ಷ ಮನೆಗಳ ಪೈಕಿ ೩.೧೩ ಲಕ್ಷ ಮನೆಗಳಿಗೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಇಲಾಖೆಯ ಕ್ಷೇತ್ರ ಮಟ್ಟದ ಸಿಬ್ಬಂದಿ ತಂಡ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕರಪತ್ರ ನೀಡಿ ಸಹಿ ಸಂಗ್ರ ಮಾಡಲಾಗಿದೆ. ಲಾರ್ವಾ ಕಂಡು ಬಂದಿರುವ ನೀರಿನ ಮೂಲಗಳಿಗೆ ಅಬೇಟ್ ದ್ರಾವಣ ಸಿಂಪಡಿಸಿ ಲಾರ್ವಾ ನಿರ್ಮೂಲನಾ ಕ್ರಮ ಕೈಗೊಳ್ಳಲಾಗಿದೆ ಎಂದರು.ಶುಕ್ರವಾರ ಡ್ರೈ ಡೇ:ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತಿ ಶುಕ್ರವಾರ ಮನೆಗಳು, ಕಚೇರಿಗಳು ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೀರು ತುಂಬುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್ ಇತ್ಯಾದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಡ್ರೈ ಡೇ ಎಂದು ಆಚರಿಸಲಾಗುತ್ತಿದೆ. ಬಯಲು ಮತ್ತು ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು, ಒಡೆದ ಪಿಂಗಾಣಿ, ಮಡಿಕೆ, ಗಾಜಿನ ವಸ್ತುಗಳು ಹಳೆಯ ಟೈರ್‌ಗಳು, ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದರ ಜೊತೆಗೆ ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಬಗ್ಗೆ ಮೇಲ್ವೀಚಾರಣೆ ಮಾಡಲಾಗುತ್ತಿದೆ ಎಂದರು.ಗ್ರಾಮ ಪಂಚಾಯಿತಿ, ನಗರ ಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಮುಖಾಂತರ ಪರಿಸರ ಸ್ವಚ್ಛತೆ ಹಾಗೂ ಫಾಗಿಂಗ್ ಕಾರ್ಯ ಕೈಕೊಳ್ಳಲಾಗುತ್ತಿದೆ. ಲಾರ್ವಾಹಾರಿ ಮೀನುಗಳಾದ ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನುಗಳನ್ನು ಕೆರೆಕಟ್ಟೆಗಳಲ್ಲಿ ಹಾಗೂ ಆಯ್ದ ನೀರಿನ ಮೂಲಗಳಲ್ಲಿ ಬಿಡಲು ಕ್ರಮವಹಿಸಲಾಗಿದೆ ಎಂದರು.ಶೇ.೯೦ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಶೇ.೯೦ರಷ್ಟು ಬಿತ್ತನೆಯಾಗಿದ್ದು, ಬರುವ ದಿನಗಲ್ಲಿ ಶೇ.೧೦೦ರಷ್ಟು ಬಿತ್ತೆಯಾಗುವ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ, ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದರು. ಜಿಲ್ಲೆಯಲ್ಲಿ ೨೦೫೮ ಕೆರೆಗಳಿದ್ದು, ೧೮೫ ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ, ೧೩೧ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ೮೭ ಕೆರೆಗಳ ಒತ್ತುವರಿ ತೆರವು ಬಾಕಿ ಇದ್ದು, ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಹಾವೇರಿ ನಗರ ಕುಡಿಯುವ ನೀರಿನ ಯೋಜನೆ ರು.೩೦ ಕೋಟಿ ವೆಚ್ಚದ ಕಾಮಗಾರಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಸಭೆಯಲ್ಲಿ ಡಿಯುಡಿಸಿ ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣ ಕೋಲ್ಕತ್ತ ಹೈಕೋರ್ಟನಿಂದ ಬೆಂಗಳೂರು ಹೈಕೋರ್ಟ್‌ಗೆ ವರ್ಗಾವಣೆಯಾಗಿದೆ. ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಡೆಂಘೀ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.