20 ವರ್ಷ ಕಳೆದರೂ ಬಾಲರಾಜು ವನವಾಸಕ್ಕೆ ಅಂತ್ಯ ಇಲ್ಲ

KannadaprabhaNewsNetwork | Published : Jun 8, 2024 12:35 AM

ಸಾರಾಂಶ

ಹಲವು ರಾಜಕಾರಣಿಗಳಿಗೆ ಗೆಲುವು ಎಂಬುದು ನಿರಂತರವಾಗಿ ಕೈ ಹಿಡಿದರೆ, ಕೆಲವು ರಾಜಕಾರಣಿಗಳಿಗೆ ನಾನಾ ಕಾರಣಗಳಿಗಾಗಿ ಸೋಲು ಎಂಬುದು ನಾನಾ ಕಾರಣಗಳಿಗಾಗಿ ಬೆಂಬಿಡದೆ ಹಿಂಬಾಲಿಸುತ್ತಲೇ ಇದೆ. ಇದಕ್ಕೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜು ಅವರು ತಾಜಾ ನಿದರ್ಶನವಾಗಿದ್ದಾರೆ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಹಲವು ರಾಜಕಾರಣಿಗಳಿಗೆ ಗೆಲುವು ಎಂಬುದು ನಿರಂತರವಾಗಿ ಕೈ ಹಿಡಿದರೆ, ಕೆಲವು ರಾಜಕಾರಣಿಗಳಿಗೆ ನಾನಾ ಕಾರಣಗಳಿಗಾಗಿ ಸೋಲು ಎಂಬುದು ನಾನಾ ಕಾರಣಗಳಿಗಾಗಿ ಬೆಂಬಿಡದೆ ಹಿಂಬಾಲಿಸುತ್ತಲೇ ಇದೆ. ಇದಕ್ಕೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜು ಅವರು ತಾಜಾ ನಿದರ್ಶನವಾಗಿದ್ದಾರೆ.

ಎಸ್. ಬಾಲರಾಜು ಅವರು 2004ರಲ್ಲಿ ಮೀಸಲು ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳೇ ಬೆರಗಾಗುವಂತಹ ರೀತಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಮೀಸಲು ಕ್ಷೇತ್ರದಲ್ಲಿ ಗೆದ್ದ ಪಕ್ಷೇತರ ಶಾಸಕ ಎಂಬ ಐತಿಹಾಸಿಕ ಸಾಧನೆ ಮಾಡಿದ್ದು ಸುಳ್ಳಲ್ಲ, ಆದರೆ ನಂತರದ ಬಹುತೇಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಇಲ್ಲ ಎಂಬುದು ಕಠೋರ ಸತ್ಯ. ಎಸ್.ಬಾಲರಾಜು ಅವರು ರಾಜಕೀಯ ಜೀವನ ಆರಂಭಿಸಿದ್ದು ಕಾಂಗ್ರೆಸ್ ನಿಂದಲೇ ಆದರೂ ಮೊದಲು ಕೊಳ್ಳೇಗಾಲ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಬಿಜೆಪಿಯಿಂದಲೇ. ಮೊದಲ ಚುನಾವಣೆಯಲ್ಲಿಯೇ ಸೋಲುಂಡರು. ನಂತರ ಸಂಘಟನಾ ಚತುರತೆ ಮೂಲಕ ಯುವಕರ ಆಶಾಕಿರಣ ರಾಜಕಾರಣಿ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದರು.

ಬಿಜೆಪಿ 2004ರಲ್ಲಿ ಜೆಡಿಯುಗೆ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆ ಬಿಜೆಪಿ ಟಿಕೆಟ್ ವಂಚಿತರಾಗಿ ಜನರ, ಅಭಿಮಾನಿಗಳ ಒತ್ತಾಯದ ಮೇರೆಗೆ ಪಕ್ಷೇತರವಾಗಿ ಸ್ಪರ್ಧಿಸಿ ಅಲ್ಪ ಹಣದಲ್ಲೆ ಗೆದ್ದು ಬೀಗಿದ ಐತಿಹಾಸಿಕ ರಾಜಕೀಯ ನೇತಾರರಾಗಿ ಅಂದು ಬಾಲರಾಜು ಹೊರಹೊಮ್ಮಿದ್ದರು.

2004ರ ಬಳಿಕ ಅದೃಷ್ಟ ಕೈ ಹಿಡಿಯಲಿಲ್ಲ:

ಬಾಲರಾಜು ಅವರು, 2004ರಲ್ಲಿ ಮೂರೂವರೆ ವರ್ಷಗಳ ಕಾಲ ಶಾಸಕರಾಗಿದ್ದರು. ಪುನಃ 2008ರಲ್ಲಿನ ಚುನಾವಣೆಯಲ್ಲಿ ಯಾವ ಪಕ್ಷ ಸೇರಬೇಕೆಂಬ ಗೊಂದಲಗೊಂಡು ಕೊನೆಗೆ ಪುನಃ ಪಕ್ಷೇತರವಾಗಿ ಸ್ಪರ್ಧಿಸಿದರು. ಆದರೆ ಅಂದು ಮೊದಲ ಗೆಲುವಿನಷ್ಟು ಜನಾಭಿಪ್ರಾಯ ಸಿಗದ ಕಾರಣ ಕೇವಲ 11,805 ಮತಗಳಿಸಲಷ್ಟೆ ಸಾಧ್ಯವಾಗಿ ಅಂದು ಐದನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು. 2009ರ ಲೋಕಸಭೆ ಚುನಾವಣೆಯಲ್ಲಿ ಆರ್. ಧ್ರುವನಾರಾಯಣ್ ಸ್ಪರ್ಧಿಸಿ ಗೆದ್ದ ಹಿನ್ನೆಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಹಿನ್ನೆಲೆ 2009ರ ಉಪಚುನಾವಣೆಯಲ್ಲಿಯೂ ಬಾಲರಾಜು ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆಗಲೂ ಅವರು ಗೆಲ್ಲಲಾಗಲಿಲ್ಲ, ಬದಲಿಗೆ 16,572 ಮತವಷ್ಟೆ ದೊರೆಯಿತು.

ಪುನಃ ಕೆಜೆಪಿಯಿಂದ ಸ್ಪರ್ಧೆ, ಸೋಲು: 2013ರಲ್ಲಿ ಬಾಲರಾಜು ಯಡಿಯೂರಪ್ಪ ಅವರು ಅಂದು ಸ್ಥಾಪಿಸಿದ್ದ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ 32,929 ಮತಗಳಿಸಿ ಮೂರನೇ ಸ್ಥಾನಕ್ಕೆ ತಲುಪುವಷ್ಟು ಹೆಚ್ಚಿನ ಮತಗಳಿಸಿದ್ದರು. ನಂತರದ ರಾಜಕೀಯ ಕಾರಣಗಳಿಗಾಗಿ 2018ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, 2023ರ ವಿಧಾನಸಭಾ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆ ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿದ ಹಿನ್ನೆಲೆ ಸರಾಗವಾಗಿ 2024ರ ಲೋಕಸಭೆ ಟಿಕೆಟ್ ದಕ್ಕಿತು. ಆದರೆ ಈ ಚುನಾಣೆಯಲ್ಲೂ ಸಹ ಬಾಲರಾಜು ಅವರು ಅಂತಹ ಸಾಧನೆ ಮಾಡಲಾಗದೆ ಸೋಲುಂಡರು. ಒಟ್ಟಾರೆ 2004ರ ನಂತರ ಬಾಲರಾಜು ಅವರು ಶಾಸಕರಾಗಲು ಸ್ಪರ್ಧಿಸಿದರೂ ಶಾಸಕರಾಗಿ ಆಯ್ಕೆಯಾಗಲು ನಾನಾ ಕಾರಣಗಳಿಗಾಗಿ ತಿರಸ್ಕಾರಗೊಂಡರು. ಅದೇ ರೀತಿ ಮೊದಲ ಬಾರಿಗೆ ಬಿಜೆಪಿಯಿಂದ ಲೋಕಸಭೆಯಲ್ಲಿ ಅತೀವ ವಿಶ್ವಾಸದಿಂದ ಟಿಕೆಟ್ ಗಿಟ್ಟಿಸಿದರೂ ಗೆಲುವು ಕಾಣಗಲಾಗದೆ ಸೋಲುಂಡರು. ಒಟ್ಟಾರೆ 2004ರಲ್ಲಿ ಗೆದ್ದು ಜನಪ್ರತಿನಿಧಿ ಅನಿಸಿಕೊಂಡಿದ್ದ ಎಸ್. ಬಾಲರಾಜು ಅವರು ಪುನಃ ಕ್ರಮವಾಗಿ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಜಿತರಾಗುವ ಮೂಲಕ ತಿರಸ್ಕಾರಗೊಂಡಿದ್ದಾರೆ. ಹಾಗಾಗಿಯೇ ಲೋಕಸಭೆ ಚುನಾವಣೆಯಲ್ಲಿ 1.86 ಲಕ್ಷಗಳ ಅಂತರದ ಸೋಲುಂಟಾಯಿತು ಎನ್ನಲಾಗುತ್ತಿದೆ. ಧ್ರುವ ಇದ್ದಿದ್ದರೆ ಬಾಲರಾಜುಗೆ ಅದೃಷ್ಟ?:

ಎಸ್.ಬಾಲರಾಜು ಹಾಗೂ ಸಂಸದರೂ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಆರ್ ಧ್ರುವನಾರಾಯಣ ಆತ್ಮೀಯ ಗೆಳೆಯರಾಗಿದ್ದರು. ಒಂದು ವೇಳೆ 2023ರ ಚುನಾವಣೆ ವೇಳೆ ವಿಧಾನಸಭೆಗೆ ಖಂಡಿತ ಟಿಕೆಟ್ ಸಿಗುತ್ತಿತ್ತು, ಅವರು ಕಾಂಗ್ರೆಸ್ ಪಕ್ಷದ ಶಾಸಕರಾಗುತ್ತಿದ್ದರು. ಅವರು ನಿಧನರಾದ ಹಿನ್ನೆಲೆ ಬಾಲರಾಜು ಅಂದು ಅವಕಾಶ ಕಳೆದುಕೊಳ್ಳುವಂತಾಯಿತು ಎನ್ನುತ್ತಾರೆ ಬಾಲರಾಜು ಬೆಂಬಲಿಗರು.

Share this article