57 ವರ್ಷ ಕಳೆದರೂ ಕೆಜಿಪಿಯಾಗದ ಜಮೀನು

KannadaprabhaNewsNetwork | Published : Dec 26, 2023 1:31 AM

ಸಾರಾಂಶ

500 ರೈತರು ತಲಾ ₹ 1000 ಹಾಕಿ ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ ನೀಡಿದರೂ ಈ ವರೆಗೂ ಪರಿಹಾರ ದೊರೆತ್ತಿಲ್ಲ. ಹೀಗಾಗಿ ಕಂದಾಯ ಸಚಿವರ ಮೊರೆ ಹೋಗಿದ್ದು ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿಸಲು ಪತ್ರ ಬಂದಿದೆ.

ಸಂತೋಷ ದೈವಜ್ಞ

ಮುಂಡಗೋಡ:

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಮೀನು ನೀಡಿ 57 ವರ್ಷ ಕಳೆದರೂ ಸರ್ಕಾರ ಕೆಜಿಪಿ ಮಾಡಿ ನಕ್ಷೆ ತಯಾರಿಸಿಲ್ಲ. ಹೀಗಾಗಿ ತಾಲೂಕಿನ ಕೋಡಂಬಿ ರೈತರು ಯಾವುದೇ ಸೌಲಭ್ಯ ಪಡೆದುಕೊಳ್ಳಲು ಆಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

೧೯೬೬ರಲ್ಲಿ ಕೋಡಂಬಿ ಗ್ರಾಮದ ೧೮೦೦ ಎಕರೆ ಭೂಮಿಯನ್ನು ಸ್ಥಳೀಯ ಶ್ರೀ ಮಾರಿಕಾಂಬಾ ಸಹಕಾರಿ ಸಂಘದ ಹೆಸರಿನಲ್ಲಿ ಡಿಫಾರೆಸ್ಟ್ (ನಿರ್ವನೀಕರಣ) ಮಾಡಲಾಗಿತ್ತು. ಇದರಲ್ಲಿ ೭೦೦ ಎಕರೆ ಜಮೀನು ಸರ್ಕಾರಿ ಪಡವಾಗಿ ಬಿಟ್ಟರೆ ೧೧೦೦ ಎಕರೆ ಭೂಮಿಯನ್ನು ಸಂಘದ ಸದಸ್ಯರಿಗೆ ೨ ಹಂತದಲ್ಲಿ ಮಂಜೂರಿ ಮಾಡಿ ಪಟ್ಟಾ ಹಂಚಿ ರೈತರ ಹೆಸರಿನಲ್ಲಿ ಪಹಣಿ ಪತ್ರ ಕೂಡಾ ನೀಡಲಾಯಿತು. ಆ ಬಳಿಕ ಸರ್ವೇ ಸ್ಕೆಚ್ ಮಾಡಿ ನಕ್ಷೆ ತಯಾರಿಸಲು ಚಾಲನೆ ನೀಡಲಾಯಿತಾದರೂ ನಕ್ಷೆ ಮಾತ್ರ ಬರಲೇ ಇಲ್ಲ.

ನಕ್ಷೆಗೆ ₹ 5 ಲಕ್ಷ:

೨೦೧೦ರ ವರೆಗೆ ಎಲ್ಲ ಸರಿಯಾಗಿಯೇ ಇತ್ತು. ಆ ನಂತರ ಜಮೀನಿನ ವಿಷಯಕ್ಕೆ ಸಂಬಂಧಿಸಿದ ವ್ಯವಹಾರ ಪ್ರಕ್ರಿಯೆಗೆ ನಕಾಶೆ ಅತ್ಯವಶ್ಯ ಎಂಬ ಸರ್ಕಾರದ ಆದೇಶದಂತೆ ೧೧ಇ ನಕಾಶೆ ಕೇಳಲಾಗುತ್ತಿದೆ. ಈ ಭೂಮಿಯ ನಕಾಶೆ ಅನುಮೋದನೆ ಮಾಡದ ಕಾರಣ ೫೦೦ ರೈತರು ಸೇರಿ ತಲಾ ₹ ೧ ಸಾವಿರ ಒಟ್ಟುಗೂಡಿಸಿ ಆ ಹಣವನ್ನು ಅಂದಿನ ಭೂಮಾಪನಾ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಈ ವರೆಗೆ ನಮ್ಮ ಭೂಮಿಯ ನಕ್ಷೆ ಅನುಮೋದಿಸಿಲ್ಲ ಎನ್ನುತ್ತಾರೆ ರೈತರು.

ರೈತರಿಗೆ ಪಟ್ಟಾ ವಿತರಿಸಿ, ಸ್ವಾಧೀನತೆ ನೀಡಿ ೧ರಿಂದ ೪೨ರ ವರೆಗೆ ಹಳೆಯ ಸರ್ವೇ ನಂ. ಸೃಷ್ಟಿಸಿ ಜಮೀನು ನೀಡಲಾಗಿದೆ. ನಕಾಶೆ ಪೂರೈಸದೆ ಇರುವುದರಿಂದ ವರ್ಗಾವಣೆ, ನೋಂದಣಿ, ಪೋತಿ ವಾರಸುದಾರರ ಹೆಸರಿಗೆ ಜಮೀನನ್ನು ವರ್ಗಾಯಿಸಲಾಗುತ್ತಿಲ್ಲ. ಕೃಷಿ ಇಲಾಖೆಯಿಂದ ಬೆಳೆ ಸಮಿಕ್ಷೆ ಮಾಡಲು ಸೆಟ್‌ಲೈಟ್ ನಕಾಶೆ ಇಲ್ಲದೆ ರೈತರಿಗೆ ಸರ್ಕಾರಿ ಸವಲತ್ತು ಸಿಗುತ್ತಿಲ್ಲ. ಇದರಿಂದ ಗ್ರಾಮದ ೫೦೦ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಇದು ಹಳೆಯ ಸಮಸ್ಯೆ ಎಂದು ಜಾರಿಗೊಳುತ್ತಿದ್ದಾರೆಂದು ರೈತರು ಹೇಳುತ್ತಿದ್ದಾರೆ.

ಕಂದಾಯ ಸಚಿವರ ಮೊರೆ

ಕೋಡಂಬಿ ಗ್ರಾಮಾಭಿವೃದ್ಧಿ ಸಮಿತಿ ಸಂಚಾಲಕ ಪರಶುರಾಮ ಕಟ್ಟಿಮನಿ ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿರುವ ಸಚಿವರು ತಮ್ಮ ಆಪ್ತ ಕಾರ್ಯದರ್ಶಿಗಳ ಮೂಲಕ ಕೆಜಿಪಿ ಮಾಡಿ ನಕಾಶೆ ತಯಾರಿಸಿ ಗ್ರಾಮದ ಆಸ್ತಿ ರಕ್ಷಣೆ ಹಾಗೂ ಸರ್ಕಾರಿ ಸೌಲಭ್ಯ ಪಡೆಯಲು ರೈತರಿಗೆ ಅನುಕೂಲ ಮಾಡಿಕೊಡುವ ಕ್ರಮಕೈಗೊಳ್ಳಲು ಉತ್ತರಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಮುಂದೆ ಈ ಪ್ರಕರಣದ ಬಗ್ಗೆ ಅದೆಷ್ಟು ಕಾರ್ಯಪ್ರವರ್ತರಾಗಿ ಕೆಲಸ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಇಂದಿಗೂ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ತಕ್ಷಣ ಜಿಲ್ಲಾಧಿಕಾರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ನಕಾಶೆ ತಯಾರಿಸಿ ಕೆಜಿಪಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋಡಂಬಿ ಗ್ರಾಮಾಭಿವೃದ್ಧಿ ಸಮಿತಿ ಸಂಚಾಲಕ ಪರಶುರಾಮ ಕಟ್ಟಿಮನಿ ಹೇಳಿದ್ದಾರೆ.

ಜಮೀನು ರೈತರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಡಿಸ್ ಫಾರೆಸ್ಟ್ ಆಗಿರುವ ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರ ಆಗಿರುವ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಶೀಘ್ರವಾಗಿ ಇದನ್ನು ಪರಿಶೀಲಿಸಿ ಕೆಜಿಪಿ ಪ್ರಕರಣ ತಯಾರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಶಂಕರ ಗೌಡಿ ತಿಳಿಸಿದ್ದಾರೆ.

Share this article