99 ವರ್ಷ ಕಳೆದರೂ 580 ಎಕರೆ ಕೃಷಿ ಭೂಮಿಗೆ ಸಿಕ್ಕಿಲ್ಲ ಪಟ್ಟಾ

KannadaprabhaNewsNetwork | Published : Mar 14, 2024 2:03 AM

ಸಾರಾಂಶ

ಸವಣೂರು ತಾಲೂಕಿನ ಅಲ್ಲಿಪುರ ಹಾಗೂ ಮಾರುತಿಪುರ ಗ್ರಾಮದ ವಡ್ಡರ ಹಾಗೂ ಇತರ ಜನಾಂಗಕ್ಕೆ ಗುಡ್ಡಗಾಡು ಪ್ರದೇಶವನ್ನು ಸಾಮೂಹಿಕ ಉಳುಮೆಗಾಗಿ ನೀಡಿ 99 ವರ್ಷಗಳು ಗತಿಸಿದರೂ ಇದುವರೆಗೂ ಪಟ್ಟಾ ನೀಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಸವಣೂರು: ತಾಲೂಕಿನ ಅಲ್ಲಿಪುರ ಹಾಗೂ ಮಾರುತಿಪುರ ಗ್ರಾಮದ ವಡ್ಡರ ಹಾಗೂ ಇತರ ಜನಾಂಗಕ್ಕೆ ಗುಡ್ಡಗಾಡು ಪ್ರದೇಶವನ್ನು ಸಾಮೂಹಿಕ ಉಳುಮೆಗಾಗಿ ನೀಡಿ 99 ವರ್ಷಗಳು ಗತಿಸಿದರೂ ಇದುವರೆಗೂ ಪಟ್ಟಾ ನೀಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಬಳಿಕ ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್‌ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಲ್ಲಿಪುರ ಗ್ರಾಮದ 118 ಕುಟುಂಬ, ಮಾರುತಿಪುರ ಗ್ರಾಮದ 152 ಕುಟುಂಬಗಳು ಸುಮಾರು 99 ವರ್ಷಗಳ ಹಿಂದಿನಿಂದ ಉಳುಮೆ ಮಾಡಿಕೊಂಡು ಜೀವನೋಪಾಯ ನಡೆಸಿಕೊಂಡು ಬಂದಿವೆ. 1925ರಲ್ಲಿ ಆಗಿನ ಬ್ರಿಟಿಷ್‌ ಆಡಳಿತ, ಬಾಂಬೆ ಸರ್ಕಾರದ ಅವಧಿಯಲ್ಲಿ ಮಾರುತಿಪುರ ಗ್ರಾಮಕ್ಕೆ 304 ಎಕರೆ, 1938ರಲ್ಲಿ ಅಲ್ಲಿಪುರ ಗ್ರಾಮಕ್ಕೆ 275.13 ಎಕರೆ ಗುಡ್ಡುಗಾಡು ಪ್ರದೇಶವನ್ನು ಸಾಮೂಹಿಕ ಉಳುಮೆ ಮಾಡಲು ನೀಡಿತ್ತು.

ರಾಜ್ಯ ಸರ್ಕಾರದ ಗಂಗಾಕಲ್ಯಾಣ ಯೋಜನೆಯಲ್ಲಿ 60 ಬೋರ್‌ವೆಲ್‌ ಕೊರೆಸಿ ರೈತರಿಗೆ ಅನುಕೂಲ ಕಲ್ಪಿಸಿದ್ದರಿಂದ ನೀರಾವರಿ ಮೂಲಕ ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.ತಾಲೂಕಿನ ಅಲ್ಲಿಪುರ ಗ್ರಾಮ ವ್ಯಾಪ್ತಿಯಲ್ಲಿ 1938ರಲ್ಲಿ ಬಾಂಬೆ ಸರ್ಕಾರದ ಮುಂಬೈ ಕೋಆಪರೇಟಿವ್‌ ಕಾಯ್ದೆ ಪ್ರಕಾರ ಅಲ್ಲಿಪುರ ವಡ್ಡರ ಇತರ ಭೂಅಭಿವೃದ್ಧಿ ಸಂಸ್ಥೆ ನೋಂದಣಿಯಾಗಿದ್ದು, ನಂತರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ ಸಹಕಾರ ಸಂಘಗಳ ಸವಣೂರು ಸಹಾಯಕ ನಿಬಂಧಕರು ಮೂಲಕ ಟೆನೆಂಟ್‌ ಕೋಆಪ ಫಾರ್ಮಿಂಗ್ ಸೊಸೈಟಿ ಹಾಗೂ ಮಾರುತಿಪುರ ಗ್ರಾಮದ ನವಜೀವನ ಕಲೆಕ್ಟಿವ್‌ ಕೋ-ಆಪ್ ಫಾರ್ಮಿಂಗ್ ಸೊಸೈಟಿ ಹೆಸರಿಗೆ ನೋಂದಣಿಯಾಗಿತ್ತು.

ಅಂದಿನಿಂದ ಇಂದಿನ ವರೆಗೂ ರೈತರ ಪಹಣಿಯಲ್ಲಿ ಭೂ ಉಳುಮೆ ಮಾಡುವ ರೈತರ ಹೆಸರು ಸೇರ್ಪಡೆಯಾಗದೆ ಹಿಂದಿನ ಸಹಕಾರಿ ಸಂಘಗಳ ಹೆಸರಿನಲ್ಲಿ ಮುಂದುವರಿದೆ. ರೈತರು ಸರ್ಕಾರದ ಸಾಲ ಸೌಲಭ್ಯ, ಬೆಳೆಸಾಲ, ಬೆಳೆಹಾನಿ, ಬೆಳೆವಿಮೆ ಸೇರಿದಂತೆ ಇತರ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಸ್ಯೆ ಅನುಭವಿಸುವಂಥ ಪರಿಸ್ಥಿತಿ ಎದುರಾಗಿದೆ.

ರೈತರ ಸಮಸ್ಯೆ ಹಾಗೂ ತೊಂದರೆಗಳನ್ನು ಯಾವೊಬ್ಬ ಅಧಿಕಾರಿಯಾಗಲಿ, ಮಂತ್ರಿಯಾಗಲಿ, ಶಾಸಕರಾಗಲಿ, ಲೋಕಸಭೆ ಸದಸ್ಯರಾಗಲಿ ಇದುವರೆಗೂ ಪರಿಹರಿಸಿಲ್ಲ. ಚುನಾವಣೆಯಲ್ಲಿ ಮಾತ್ರ ನಮ್ಮನ್ನು ಮತಬ್ಯಾಂಕ್‌ಗಳನ್ನಾಗಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 99 ವರ್ಷಗಳ ಹಿಂದಿನಿಂದ ಉಳುಮೆ ಮಾಡಿಕೊಂಡು ಬಂದ ರೈತರಿಗೆ ಕಾನೂನುಬದ್ಧವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕ್ರಮಕೈಗೊಂಡು ಪಟ್ಟಾ ನೀಡಿ ಜಮೀನು ಸಾಗುವಳಿಗೆ ಅನುಕೂಲ ಕಲ್ಪಿಸಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಕೈಗೊಂಡು ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದಾರೆ.

ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ ಬಾರ್ಕಿ, ತಾಲೂಕು ಘಟಕ ಅಧ್ಯಕ್ಷ ನೀಲಪ್ಪ ಹರಿಜನ, ತಿಮ್ಮಣ್ಣ ಸವಣೂರ, ಟಿ.ಆರ್. ಕಲಿವಾಳ, ಹುಲಗಪ್ಪ ಅಲ್ಲಿಪುರ, ಬಸವಣ್ಣೆಪ್ಪ ಬುಡರಕಟ್ಟಿ, ಮಲ್ಲೇಶ ವಡ್ಡರ, ಸೋಮಶೇಖರ ಸಾಲಿ, ಮಾರುತಿ ದುಂಡಸಿ, ಬಸವರಾಜ ಕಲಿವಾಳ, ಶರಣಪ್ಪ ಬುಡರಕಟ್ಟಿ, ಅರ್ಜುನ ಪೂಜಾರ, ಸೋಮವ್ವ ಬಂಡಿವಡ್ಡರ, ಉಮೃವ್ವ ಕಣವಿಹೊಸೂರ, ಶಂಕ್ರವ್ವ ಬಡಿಗೇರ ಇದ್ದರು.

Share this article