ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಕನ್ನಡ ಓದಲು, ಬರೆಯಲು ಬರೊಲ್ಲ

KannadaprabhaNewsNetwork | Published : Dec 20, 2024 12:47 AM

ಸಾರಾಂಶ

ಕೇವಲ 10ನೇ ತರಗತಿಯಲ್ಲಿ ಮಾತ್ರ ಅಲ್ಲ, 9 ಮತ್ತು 8ನೇ ತರಗತಿಯಲ್ಲಿಯೂ ಓದಲು, ಬರೆಯಲು ಬಾರದ ವಿದ್ಯಾರ್ಥಿಗಳು ಇದ್ದಾರೆ.

9ನೇ ತರಗತಿಯಲ್ಲೂ 5287 ವಿದ್ಯಾರ್ಥಿಗಳಿಗೆ ಓದಲು, 7641 ವಿದ್ಯಾರ್ಥಿಗಳಿಗೆ ಬರೆಯಲು ಬಾರದು

ಜಿಲ್ಲೆಯಲ್ಲಿ ನಡೆಸಿದ ಆಂತರಿಕ ಪರೀಕ್ಷೆಯಲ್ಲಿ ಗೊತ್ತಾಗಿರುವ ಆಘಾತಕಾರಿ ಅಂಶಗಳು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇವಲ 10ನೇ ತರಗತಿಯಲ್ಲಿ ಮಾತ್ರ ಅಲ್ಲ, 9 ಮತ್ತು 8ನೇ ತರಗತಿಯಲ್ಲಿಯೂ ಓದಲು, ಬರೆಯಲು ಬಾರದ ವಿದ್ಯಾರ್ಥಿಗಳು ಇದ್ದಾರೆ!

ಇದು ಊಹಾಪೋಹ ಅಥವಾ ಅಂದಾಜು ಅಲ್ಲ. ಪ್ರೌಢಶಾಲೆಯ ಶಿಕ್ಷಕರ ಮೂಲಕ ಮಾಡಿಸಿರುವ ಪರೀಕ್ಷೆಯ ವಾಸ್ತವಿಕ ಲೆಕ್ಕಾಚಾರ.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮುಂದಾದ ಶಿಕ್ಷಣ ಇಲಾಖೆ ಕೊಪ್ಪಳ ಜಿಲ್ಲೆಯಲ್ಲಿ ಹೈಸ್ಕೂಲಿನಲ್ಲಿ ಇರುವ ಮಕ್ಕಳ ಸ್ಥಿತಿಗತಿಯನ್ನು ಅರಿಯಲು ಮಾಡಿದ ಲೆಕ್ಕಾಚಾರದಿಂದ ಇದೆಲ್ಲವೂ ಬೆಳಕಿಗೆ ಬಂದಿದೆ.

ಹತ್ತನೇ ತರಗತಿಯಲ್ಲಿ ಏಳು ಸಾವಿರ ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ ಎನ್ನುವ ಕನ್ನಡಪ್ರಭ ವರದಿ ಈಗ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ನಡುವೆ ಸದನದಲ್ಲಿ ಪ್ರಸ್ತಾಪವಾಗಿದ್ದರಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವರದಿಯನ್ನು ತರಿಸಿಕೊಂಡು ಉತ್ತರಿಸುವುದಾಗಿ ಹೇಳಿದ್ದಾರೆ. ಹೀಗಾಗಿ, ಸಚಿವರು ಕೊಪ್ಪಳ ಜಿಲ್ಲೆಯ ಡಿಡಿಪಿಐ ಅವರಿಂದ ವರದಿ ಕೇಳಿದ್ದಾರೆ.

ಈಗ ಹೈಸ್ಕೂಲ್‌ನಲ್ಲಿ ನಡೆಸಿದ ಪರೀಕ್ಷೆಯ ಲೆಕ್ಕಾಚಾರದ ವರದಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಇದರಲ್ಲಿ ಪ್ರತಿ ಶಾಲಾವಾರು ಮಾಹಿತಿ ಸಹ ಇದ್ದು, ಯಾವ ಶಾಲೆಯಲ್ಲಿ ಯಾವ ಮಗುವಿಗೆ ಕನ್ನಡ ಓದಲು, ಬರೆಯಲು ಬರುವುದು ಮತ್ತು ಬರದೆ ಇರುವುದು, ಗಣಿತ ಕನಿಷ್ಠ ಸಂಕಲನ, ವ್ಯವಕಲನ ಮಾಡುವ ಜ್ಞಾನದ ಕುರಿತು ಹಾಗೂ ಇಂಗ್ಲಿಷ್ ವಿಷಯದ ಕುರಿತು ಲೆಕ್ಕಾಚಾರ ಮಾಡಲಾಗಿದೆ.

ಇದರಲ್ಲಿ ಅಘಾತಕಾರಿ ಅಂಶಗಳು ಪತ್ತೆಯಾದ ಬಳಿಕವೇ ಪ್ರಾಥಮಿಕ ಹಂತದಲ್ಲಿಯೇ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಮಕ್ಕಳಿಗೆ ದೊರೆತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ಈಗ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೋಟಿಸ್‌ ನೀಡಲಾಗಿದೆ.ಲೆಕ್ಕಾಚಾರ ಇಲ್ಲಿದೆ:

ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಬರೋಬ್ಬರಿ 18,220 ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಕನ್ನಡ ಮಾಧ್ಯಮದಲ್ಲಿ 10955 ವಿದ್ಯಾರ್ಥಿಗಳು ಇದ್ದರೆ 5287 ವಿದ್ಯಾರ್ಥಿಗಳಿಗೆ ಓದಲು ಬರುತ್ತಿಲ್ಲ. ಕನ್ನಡವನ್ನು 9223 ವಿದ್ಯಾರ್ಥಿಗಳಿಗೆ ಬರೆಯಲು ಬರುತ್ತಿದ್ದರೆ 7641 ವಿದ್ಯಾರ್ಥಿಗಳಿಗೆ ಬರೆಯಲು ಬರುತ್ತಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿಯೂ 8593 ವಿದ್ಯಾರ್ಥಿಗಳು ಓದುತ್ತಿದ್ದರೆ 7489 ವಿದ್ಯಾರ್ಥಿಗಳಿಗೆ ಬರೆಯಲು ಬರುತ್ತಿಲ್ಲ. ಇನ್ನು ಗಣಿತ ವಿಷಯದಲ್ಲಿಯೂ ವ್ಯವಕಲನ ಮತ್ತು ಸಂಕಲನ ಮಾಡಲು ಬಾರದ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ.8ನೇ ತರಗತಿಯಲ್ಲಿ:

ಪ್ರಸಕ್ತ ವರ್ಷ ಕೊಪ್ಪಳ ಜಿಲ್ಲೆಯಲ್ಲಿ 8ನೇ ತರಗತಿಯಲ್ಲಿ 14772 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದರಲ್ಲಿ 4151 ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರುವುದಿಲ್ಲ, 5777 ವಿದ್ಯಾರ್ಥಿಗಳಿಗೆ ಬರೆಯಲು ಬರುತ್ತಿಲ್ಲ. ಇಂಗ್ಲಿಷ್ ವಿಷಯದಲ್ಲಿ 6713 ವಿದ್ಯಾರ್ಥಿಗಳಿಗೆ ಓದಲು, 6773 ವಿದ್ಯಾರ್ಥಿಗಳಿಗೆ ಬರೆಯಲು ಬರುತ್ತಿಲ್ಲ.

ರಾಜ್ಯಾದ್ಯಂತ ಅಧ್ಯಯನ ಅಗತ್ಯ:

ಇದು, ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ. ಇಲ್ಲಿ ಅಧ್ಯಯನ ಮಾಡಿದ್ದರಿಂದ ಇದು ಬೆಳಕಿಗೆ ಬಂದಿದೆ. ಅದೇ ರೀತಿ ರಾಜ್ಯಾದ್ಯಂತ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನ ಮಾಡುವ ಅಗತ್ಯವಿದೆ ಎನ್ನುವ ಕೂಗು ಬಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಡಿಡಿಪಿಐ ಅವರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಇದೇ ಮಾದರಿ ಅನುಸರಿಸುವಂತೆಯೂ ಒತ್ತಾಯ ಕೇಳಿ ಬಂದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಪ್ರಮಾಣ ಹೆಚ್ಚಳ ಮಾಡುವಂತೆ ಒತ್ತಡ ಹಾಕುವ ಬದಲು ವಾಸ್ತವ ಸಂಗತಿಯನ್ನು ಸರ್ಕಾರ ಅರಿಯಬೇಕಾಗಿದೆ. ಬುನಾದಿ ಸಾಕ್ಷರತೆಯೇ ಇಲ್ಲದೆ ಇರುವ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರದ ನಿಲುವು ಏನು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Share this article