ಕನ್ನಡಪ್ರಭ ವಾರ್ತೆ ತಿಪಟೂರು
ನೊಣವಿನಕೆರೆ ಹೋಬಳಿಯ 50ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ರೈತರ ಬದುಕಿಗೆ ಆಸರೆಯಾಗಿರುವ ನೊಣವಿನಕೆರೆ ಕೆರೆಯ ನೀರನ್ನು ಕುಡಿಯುವ ನೀರಿಗಾಗಿ ತಿಪಟೂರು ನಗರಕ್ಕೆ ತೆಗೆದುಕೊಂಡು ಹೋಗಲು ಚಿಂತನೆ ನಡೆಸಲಾಗುತ್ತಿದೆ. ಆದರೆ ರಕ್ತ ಹರಿಸಿದರೂ ಸರಿಯೇ ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ನಾವು ತರಲು ಬಿಡುವುದಿಲ್ಲ ಎಂದು ನೊಣವಿನಕೆರೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಎಸ್.ವಿ. ಸ್ವಾಮಿ ತಾಲೂಕು ಆಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದರು. ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಣವಿನಕೆರೆ ಕೆರೆಗೆ ಹಲವಾರು ಶತಮಾನಗಳ ಇತಿಹಾಸವಿದ್ದು ಅಂದಿನಿಂದಲೂ ಕೆರೆಯ ನೀರು ರೈತರ ಜೀವನಾಡಿಯಾಗಿದೆ. ನೊಣವಿನಕೆರೆ ಕೆರೆ ಆಶ್ರಯದಲ್ಲಿ ತೆಂಗು, ಅಡಿಗೆ ಮತ್ತು ಪ್ರಧಾನ ಬೆಳೆ ಭತ್ತ ಸೇರಿದಂತೆ ಹಲವು ಬೆಳೆಗಳನ್ನು ರೈತರು ನೆಚ್ಚಿಕೊಂಡಿದ್ದಾರೆ. 1600 ಎಕರೆ ಅಚ್ಚುಕಟ್ಟು, 900 ಎಕರೆ ಭಾಗಾಯ್ತು ಜಮೀನನ್ನು ಸಾಗುವಳಿ ಮಾಡಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಕೆರೆಯಿಂದ ವಾರ್ಷಿಕ 90 ಸಾವಿರ ಮೆಟ್ರಿಕ್ ಟನ್ ಭತ್ತ ಮತ್ತು ಮೇವು ಬೆಳೆಯಲಾಗುತ್ತದೆ. ಲಕ್ಷಾಂತರ ಕೃಷಿ ಕಾರ್ಮಿಕರಿಗೆ ಕೆಲಸ ಕೊಟ್ಟಿದೆ. ಬರಗಾಲದಲ್ಲೂ ಕೆರೆ ನೀರಿನ ಆಶ್ರಯದಲ್ಲಿ ಹಳ್ಳಿಗಳು ಬದುಕುತ್ತಿವೆ. ಇತ್ತೀಚಿನ ದಿನಗಳಲ್ಲಿ ನೊಣವಿನಕೆರೆ ಕೆರೆಗೆ ಹೂಳು ತುಂಬಿರುವ ಕಾರಣ ನೀರಿನ ಸಂಗ್ರಹಣಾ ಸಾಮರ್ಥ್ಯ ಇಳಿದಿದ್ದು ರೈತರು ಬೆಳೆಯುವ ಬೆಳೆಗೆ ನೀರು ಸಾಕಾಗದೆ ಪರದಾಡುವ ಪರಿಸ್ಥಿತಿ ಬಂದಿದೆ. ಇದರ ನಡುವೆ ನಗರೀಕರಣವೇ ಅನಿವಾರ್ಯ ಎಂಬಂತೆ ನೊಣವಿನಕೆರೆ ಕೆರೆಯಿಂದ ತಿಪಟೂರಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿರುವುದು ರೈತ ವಿರೋಧಿಯಾಗಿದೆ. ಕೃಷಿಗಾಗಿಯೇ ಕಾಯ್ದಿರಿಸಿದ ಕೆರೆಯ ನೀರನ್ನು ನಗರಕ್ಕೆ ಬಳಸುವುದರಿಂದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತದೆ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತದೆ. ಇಲ್ಲಿ ಯಾರು ಸರ್ಕಾರಿ ನೌಕರರಿಲ್ಲ ಕೃಷಿಯನ್ನೇ ನಂಬಿದ್ದು ರಾಗಿ, ಭತ್ತ ಇತರೆ ಹಣ್ಣು, ತರಕಾರಿಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ತಿಪಟೂರು ನಗರಕ್ಕೆ ಕುಡಿಯುವ ನೀರಿಗೆ ಪರ್ಯಾಯ ಯೋಜನೆಗಳಿದ್ದರೂ ಜನಪ್ರತಿನಿಧಿಗಳು ಮಾತ್ರ ನೊಣವಿನಕೆರೆ ಕೆರೆಯ ನೀರನ್ನು ತರುತ್ತೇವೆಂದು ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿರುವುದು ರೈತರ ಬದುಕನ್ನು ಹಾಳು ಮಾಡುವ ಉದ್ದೇಶಹೊಂದಿದೆ. ಕೂಡಲೆ ಈ ಯೋಜನೆಯನ್ನು ಕೈಬಿಟ್ಟರೆ ಒಳ್ಳೆಯದು ಇಲ್ಲವಾದಲ್ಲಿ ರೈತರು ಹೋರಾಟದ ಮೂಲಕ ಎಚ್ಚರಿಕೆ ನೀಡಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾ. ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ ತಿಪಟೂರು ನಗರಕ್ಕೆ ನೀರು ಒದಗಿಸಲು ಪರ್ಯಾಯ ಮಾರ್ಗಗಳಿವೆ. ಅಚ್ಚುಕಟ್ಟು ಪ್ರದೇಶ ಹೊಂದಿಲ್ಲದ ಹೊಗವನಘಟ್ಟ, ಗುರುಗದಹಳ್ಳಿ ಕೆರೆಗಳನ್ನು ನೀರು ಸರಬರಾಜು ಯೋಜನೆಗೆ ಬಳಸಿಕೊಳ್ಳಬಹುದು. ಪರ್ಯಾಯ ಮಾರ್ಗಗಳಿದ್ದರೂ ಕೋಟ್ಯಾಂತರ ರೂ ವೆಚ್ಚ ಮಾಡಿ ನೊಣವಿನಕೆರೆ ಕೆರೆಯಿಂದ ನೀರು ತೆಗೆದುಕೊಂಡು ಹೋಗಲು ತೀರ್ಮಾನಿಸಿರುವುದು ಖಂಡನೀಯ ಎಂದರು. ರೈತ ಮುಖಂಡ ಆಲ್ಬೂರು ಗಂಗಾಧರ್ ಮಾತನಾಡಿ, ನೊಣವಿನಕೆರೆ ಕೆರೆಯನ್ನು ವೀಕ್ಷಣೆ ಮಾಡಿ ಜಿಲ್ಲಾಧಿಕಾರಿಗಳು ಹೋಗಿದ್ದಾರೆ. ಇಲ್ಲಿನ ಶಾಸಕರು ಸಹ ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿರುವ ಬಗ್ಗೆ ನಮಗೆ ಮಾಹಿತಿ ಇದೆ. ನೊಣವಿನಕೆರೆ ಕೆರೆಯ ನೀರನ್ನು ತಿಪಟೂರು ನಗರಕ್ಕೆ ತೆಗೆದುಕೊಂಡು ಹೋಗುವುದರಿಂದ ಇಲ್ಲಿನ ರೈತರು ಬೆಳೆಯುವ ಭತ್ತ, ತೆಂಗು, ಅಡಿಕೆ ತೋಟ ಸೇರಿದಂತೆ ಜನ-ಜಾನುವಾರುಗಳಿಗೂ ಕುಡಿಯುವ ನೀರು ಮತ್ತು ಮೇವಿಗೆ ಅಭಾವ ಎದುರಾಗುತ್ತದೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಕೈ ಬಿಟ್ಟು ಪ್ರತ್ಯೇಕ ಯೋಜನೆಯನ್ನು ರೂಪಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಾಕ್ಸ್ :ಕಳೆದ 2017ರಲ್ಲಿ ಇದೇ ನೊಣವಿನಕೆರೆ ಕೆರೆಯ ನೀರನ್ನು ತಿಪಟೂರು ನಗರಕ್ಕೆ ಕುಡಿಯುವ ನೀರಿಗೆ ಬಳಸಿಕೊಳ್ಳುತ್ತೇವೆಂದು ಯೋಜನೆ ರೂಪಿಸಲಾಗಿತ್ತು. ಆದರೆ ಈ ಭಾಗದ ರೈತರು ಹೋರಾಟ ಮಾಡಿದ ಪರಿಣಾಮ ಯೋಜನೆ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಕುಡಿಯುವ ನೀರಿಗೆ ನೊಣವಿನಕೆರೆಯನ್ನು ಅಶ್ರಯಿಸಿದರೆ ಈ ಭಾಗದ ಹಳ್ಳಿಯ ರೈತರು ದಯಾಮರಣ ಕೋರಿ ಅರ್ಜಿ ಸಲ್ಲಿಸುತ್ತೇವೆಂದು ರೈತರ ಮುಖಂಡರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಯಚಂದ್ರಶರ್ಮ, ವೇದಮೂರ್ತಿ, ಶ್ರೀನಿವಾಸ್, ವಿಕಾಸ್, ದೇವರಾಜು ಮತ್ತಿತರರಿದ್ದರು.