ಮೂಗಿಗೆ ಬಟ್ಟೆ ಕಟ್ಕೊಂಡೇ ಪಾಠ ಹೇಳ್ಬೇಕು, ಮಕ್ಳು ಕೇಳ್ಬೇಕು..!

KannadaprabhaNewsNetwork | Published : Apr 11, 2025 12:31 AM

ಸಾರಾಂಶ

Even if you cut off the cloth on your nose, you should teach a lesson, and the child should listen..!

-ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ದುರ್ನಾತದ ಎಫೆಕ್ಟ್‌ । ಕೆಮಿಕಲ್‌ ದುರ್ನಾತ ಸಹಿಸಿಕೊಂಡೇ ಮಕ್ಕಳ ಕಲಿಕೆ, ಶಿಕ್ಷಕರ ಪಾಠ

-ಶಾಲಾ ಮಕ್ಕಳ ಕಾಡುತ್ತಿರುವ ತಲೆ ಸುತ್ತುವಿಕೆ, ಚರ್ಮ ಸಂಬಂಧಿ ಕಾಯಿಲೆ !

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಇಲ್ಲಿನ ಶಾಲೆಯ ಶಿಕ್ಷಕರು ನಿತ್ಯ ಪಾಠ ಮಾಡ್ಬೇಕು ಅಂದ್ರೆ, ಕೊಠಡಿಗಳ ಬಾಗಿಲು ಮುಚ್ಕೊಂಡು, ಬಾಯಿ-ಮೂಗಿಗೆ ಬಟ್ಟೆ ಕಟ್ಕೊಂಡು ಪಾಠ ಮಾಡ್ಬೇಕು..! ಹಾಗೆಯೇ, ಮಕ್ಕಳು ಕೂಡ ಬಾಯಿ-ಮೂಗಿಗೆ ಕರ್ಚೀಫ್‌ ಕಟ್ಕೊಂಡೇ ಪಾಠ ಕೇಳ್ಬೇಕು.

ಹೌದು, ಯಾದಗಿರಿ ತಾಲೂಕಿನ ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶ ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ ದುರ್ನಾತ ಹೊಸದೇನಲ್ಲ. ಕೆಮಿಕಲ್‌ ಫ್ಯಾಕ್ಟರಿಗಳು-ತ್ಯಾಜ್ಯದಿಂದಾಗಿ ಸಹಜ ಉಸಿರಾಡಲೂ ಕಷ್ಟವಾಗುವಂತಹ ದುಸ್ಥಿತಿ ಶೆಟ್ಟಿಹಳ್ಳಿ ಗ್ರಾಮಸ್ಥರದ್ದು.

ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಚಿಕ್ಕ ಚಿಕ್ಕಮಕ್ಕಳ ಪರಿಸ್ಥಿತಿಯಂತೂ ಹೇಳತೀರದು. ಸುಮಾರು 65-70ರಷ್ಟು ಮಕ್ಕಳಿರುವ ಈ ಸರ್ಕಾರಿ ಶಾಲೆಯಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮೂಲದ ಶಿಕ್ಷಕರೊಬ್ಬರು ಕಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರು ಪಾಠ ಮಾಡುವಾಗ ತರಗತಿಯ ಬಾಗಿಲು-ಕಿಟಕಿಗಳನ್ನು ಭದ್ರವಾಗಿ ಮುಚ್ಚಿ, ಮೂಗು-ಬಾಯಿಗೆ ಬಟ್ಟೆ ಕಟ್ಟಿಕೊಂಡು ಪಾಠ ಮಾಡುತ್ತಾರೆ. ಮಕ್ಕಳೂ ಅಷ್ಟೇ, ಬಾಯಿ-ಮೂಗಿಗೆ ಕರ್ಚೀಫ್‌ ಕಟ್ಟಿಕೊಂಡು ಪಾಠ ಆಲಿಸುತ್ತಾರೆ. ಇಲ್ಲವಾದಲ್ಲಿ, ತಲೆಸುತ್ತುವಿಕೆ, ವಾಂತಿ ಸಹಜವಂತೆ. ಬಾಗಿಲು-ಕಿಟಕಿಗಳ ಮುಚ್ಚಿದರೂ, ಬಾಯಿ-ಮೂಗಿಗೆ ಬಟ್ಟೆ ಕಟ್ಟಿಕೊಂಡರೂ ಕೆಮಿಕಲ್‌ ವಾಸನೆ ತಮಗೆಲ್ಲ ತಪ್ಪಿದ್ದಲ್ಲ ಎಂದೆನ್ನುವ ಶಿಕ್ಷಕರು, ಇಲ್ಲಿನ ಕಲುಷಿತ ವಾತಾವರಣದಲ್ಲಿ ಹೀಗೆಯೇ ಮುಂದುವರೆದರೆ ರೋಗಗಳಿಗೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ ಅಂತಾರೆ.

ಇನ್ನು, ತಲೆ ಸುತ್ತುವಿಕೆ ವಾಂತಿಯಷ್ಟೇ ಅಲ್ಲದೆ, ಅನೇಕ ಶಾಲಾ ಮಕ್ಕಳಿಗೆ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ತ್ಯಾಜ್ಯ ಮಿಶ್ರಿತ ನೀರಿನ ಉಪಯೋಗ ಹಾಗೂ ಇಲ್ಲಿನ ಹವಾಮಾನದಿಂದ ಚರ್ಮರೋಗ ಕಾಡುತ್ತಿರುವ ಶಂಕೆ ಉಂಟಾಗಿದೆ. ಆರೋಗ್ಯ ತಪಾಸಣೆ ಮಾತಿಲ್ಲ, ಮಾಡಿದ್ದರೂ, ವರದಿ ಏನು ಬಂತು ? ಮಕ್ಕಳಿಗೆ ಚಿಕಿತ್ಸೆ ಯಾವ ರೀತಿ ನೀಡಬೇಕು ಅನ್ನೋದರ ಬಗ್ಗೆಯೂ ಯಾರೂ ಹೇಳೋಲ್ಲ.

ಮೈ ತುಂಬಾ ತುರಿಕೆ, ಕೈ, ಬೆನ್ನು, ಕುತ್ತಿಗೆ, ಕಾಲು, ತೊಡೆ ಹೀಗೆ ದೇಹದ ವಿವಿಧ ಭಾಗಗಳಲ್ಲಿ ಚರ್ಮದ ಮೇಲಿನ ಕೆಂಪು ಆಕಾರದ ಗುಳ್ಳೆಗಳು ಜೀವ ಹಿಂಡುತ್ತಿವೆ. ಮೈತುರಿಕೆಯಿಂದಾಗಿ ಶಾಲೇಲಿ ಕೂಡಲೂ ಆಗುವುದಿಲ್ಲ, ಮನೆಯಲ್ಲಿ ಇರಲೂ ಆಗುದಿಲ್ಲ ಎಂದೆನ್ನುವ ಬಾಲಕ ಶಂಕರ (ಹೆಸರು ಬದಲಾಯಿಸಲಾಗಿದೆ), ಇನ್ನೂ ಅನೇಕರಿಗೆ ಹೀಗೆಯೇ ಆಗಿದೆ. ಆದ್ರೆ ಎಲ್ಲರೂ ಇದೇನು ಕಾಮನ್‌ ಅನ್ನೋ ಹಾಗೆ ಇರ್ತೀವಿ ಅಂತಾನೆ.

ತರಗತೀಲಿ ಪಾಠ ಕೇಳುವಾಗ ಕೆಟ್ಟ ವಾಸನೆಯಿಂದ ಚಕ್ಕರ್‌ (ತಲೆ ಸುತ್ತುವುದು), ವಾಂತಿ ಬಂದ ಹಾಗೆ ಆಗುವುದು, ಕಣ್ಣು ಮಂಜು ಮಂಜಾಗುತ್ತಿದೆ. ಏನೂ ಮಾಡಲಿಕ್ಕಾಗುತ್ತಿಲ್ಲ. ಬಾಗಿಲು ಕಿಟಕಿಗಳ ಮುಚ್ಚಿ ಪಾಠ ಕೇಳುತ್ತಿದ್ದರೂ ವಾಸನೆ ತಡೆಯೋಕಾಗಲ್ಲ. ಸಹಿಸಿಕೊಂಡ ನಮಗೆ ಇದೀಗ ರೂಢಿಯಾದಂತಾಗಿದೆ ಅಂತಾಳೆ ಬಾಲಕಿ ಲಕ್ಷ್ಮೀ (ಹೆಸರು ಬದಲಾಯಿಸಲಾಗಿದೆ).

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಲವು ಕೆಮಿಕಲ್‌ ಕಂಪನಿಗಳಿಂದ ಹೊರಹೊಮ್ಮುವ ಕಲುಷಿತ ಗಾಳಿ ಹಗೂ ತ್ಯಾಜ್ಯ ಅಲ್ಲಿನ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ತಡೆಗಟ್ಟಬೇಕಾದ ಸಂಬಂಧಿತರು ಎಲ್ಲವೂ ಸರಿಯಿದೆ ಎನ್ನುವ ಷರಾ ಬರೆದು ವಾಸ್ತವಾಂಶ ಮರೆ ಮಾಚುತ್ತಿದ್ದಾರೆ ಎಂಬ ಆರೋಪಗಳು ಪ್ರತಿಧ್ವನಿಸುತ್ತಿವೆ.

----

10ವೈಡಿಆರ್‌1 : ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ನೋಟ.

10ವೈಡಿಆರ್‌2 : ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಹೊರನೋಟ.

10ವೈಡಿಆರ್‌3 : ಬಾಲಕನ ಚರ್ಮದ ಮೇಲೆ ಕೆಂಪುಗುಳ್ಳೆಗಳು.

10ವೈಡಿಆರ್‌4 : ಶಾಲೆಯ ಶಿಕ್ಷಕರು.

Share this article