ಬಿರುಬಿಸಿಲಿಗೆ ಬಳಲಿದ ಜನರಿಗೂ ಸಿಗದ ಜೀವಜಲ!

KannadaprabhaNewsNetwork | Published : Mar 2, 2024 1:50 AM

ಸಾರಾಂಶ

ಕೂಡ್ಲಿಗಿ ತಾಲೂಕಿನ 17 ಹಳ್ಳಿಗಳಲ್ಲಿ ರೈತರ ಪಂಪ್‌ಸೆಟ್‌ಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಇದೀಗ ತಾನೆ ಬೇಸಿಗೆ ಪ್ರಾರಂಭವಾಗಿದೆ. ಈಗಲೇ ಕುಡಿಯುವ ನೀರಿಗೆ ಜನತೆ ಬಾಯಿ ಬಿಡುವ ಪರಿಸ್ಥಿತಿ ಬಂದಿದೆ. ಕೆರೆಕಟ್ಟೆಗಳಂತೂ ನೀರಿಲ್ಲದೇ ಬಿಕೋ ಎನ್ನುತ್ತಿದ್ದು, ಎಲ್ಲೆಲ್ಲೂ ಬಿಸಿಲಿನ ಝಳದ ಛಾಯೆ ಆವರಿಸಿದೆ. ಪಕ್ಷಿಗಳಿಗೆ ಕುಡಿಯಲು ಸಹ ಕೆರೆಗಳಲ್ಲಿ ನೀರಿಲ್ಲ. ಇನ್ನು ಜನತೆ 2-3 ತಿಂಗಳು ಕಳೆಯುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಬರೀ ಸಭೆ, ಚರ್ಚೆಗಳಲ್ಲಿ ತೊಡಗಿದೆಯೇ ವಿನಾ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗಂಭೀರವಾಗಿ ಪ್ರಯತ್ನ ಮಾಡದಿರುವುದು ಜನತೆಗೆ ಮತ್ತಷ್ಟು ನೀರಿನ ಅಭಾವ ಹೆಚ್ಚುವಂತೆ ಮಾಡಿದೆ. ಬರಡು ನಾಡಿನಲ್ಲಿ ಮಳೆ ಬರುವುದೇ ಅಪರೂಪ. ಇಂತದ್ದರಲ್ಲಿ ಕಳೆದ ವರ್ಷ ಪೂರ್ತಿ ಮಳೆ ಕೈಕಟ್ಟಿದ್ದರಿಂದ ಒಂದು ಕಡೆ ಬೆಳೆ ಇಲ್ಲದೇ ಕೆಲಸವಿಲ್ಲದೇ ರೈತರು ಕೈ ಕೈ ಹಿಚುಕಿಕೊಳ್ಳುತ್ತಿರುವಾಗಲೇ ಕುಡಿಯುವ ನೀರಿಗೂ ಬರ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲದೇ ತಾಲೂಕಿನ 17 ಹಳ್ಳಿಗಳಲ್ಲಿ ರೈತರ ಪಂಪ್‌ಸೆಟ್‌ಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.ತಾಲೂಕಿನ ಗುಡೇಕೋಟೆ, ಹುಲಿಕೆರೆ, ಕೂಡ್ಲಿಗಿ ಸೇರಿ ತಾಲೂಕಿನ ಎಲ್ಲ ಕೆರೆ, ಕಟ್ಟೆಗಳು ನೀರಿಲ್ಲದೆ ಒಣಗಿವೆ. ಒಂದು ಸಾವಿರ ಅಡಿಯಷ್ಟು ಆಳಕ್ಕೆ ಬೋರ್‌ವೆಲ್ ಕೊರೆಸಿದರೂ ಹನಿ ನೀರು ಸಿಗದಂತಾಗಿದ್ದು, ಜಲಕ್ಷಾಮದ ಭೀತಿಗೆ ಕಾರಣವಾಗಿದೆ. ಫೆಬ್ರವರಿ ಆರಂಭದಿಂದಲೂ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದು, ಖಾಲಿ ಕೊಡಗಳನ್ನು ಹಿಡಿದ ಮಹಿಳೆಯರು, ಮಕ್ಕಳು, ವೃದ್ಧರು ನೀರು ತರುವುದಕ್ಕಾಗಿ ನಿತ್ಯ ರಾತ್ರಿಯೆಲ್ಲ ಎಚ್ಚರವಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಬಿರುಬಿಸಿಲಲ್ಲೂ ನೀರಿಗಾಗಿ ಪರದಾಡುವ ಸ್ಥಿತಿ ಒದಗಿದೆ.ತಾಲೂಕಿನ 25 ಗ್ರಾಪಂ ವ್ಯಾಪ್ತಿಯಲ್ಲಿ 162 ಹಳ್ಳಿಗಳಿವೆ. ಒಟ್ಟು 469 ಬೋರ್‌ವೆಲ್‌ಗಳಿವೆ. ಆ ಪೈಕಿ 354ರಲ್ಲಿ ಅಲ್ಪಸ್ವಲ್ಪ ನೀರು ಸಿಗುತ್ತಿದೆ. ಇನ್ನುಳಿದ 142 ಬೋರ್‌ವೆಲ್‌ಗಳಲ್ಲಿ ಜೀವಜಲ ಪೂರ್ಣ ಬತ್ತಿದೆ. ಕಳೆದ ಒಂದು ತಿಂಗಳಲ್ಲಿ ಪೂಜಾರಹಳ್ಳಿ ಗ್ರಾಮ ಪಂಚಾಯಿತಿಯ ಕಾತ್ರಿಕೆಹಟ್ಟಿಯಲ್ಲಿ ಒಟ್ಟು 8 ಬೋರ್‌ವೆಲ್ ಕೊರೆಸಿದರೂ ನೀರು ಲಭ್ಯವಾಗಿಲ್ಲ. ಗುಡೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಸ್ಥಿತಿ ಇದೆ. ತಾಲೂಕಿನ ಆಲೂರು, ಬಡೇಲಡುಕು, ಕಕ್ಕುಪ್ಪಿ, ಹುಡೇಂ, ಪೂಜಾರಹಳ್ಳಿ, ಮೊರಬ, ಹಾರಕಬಾವಿ, ಚೌಡಾಪುರ ಸೇರಿ ಈ ಗ್ರಾಮ ಪಂಚಾಯಿತಿಯ 20 ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆಯಾಗಿದೆ. ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಹಳ್ಳಿಗಳಲ್ಲಿ ರೈತರ ಜಮೀನಿನಿಂದ ಬೋರ್‌ವೆಲ್ ಬಾಡಿಗೆ ಪಡೆದು ಕುಡಿಯುವ ನೀರು ಸರಬರಾಜು ಮಾಡುವಂಥ ಹರಸಾಹಸಕ್ಕೆ ಗ್ರಾಮಾಡಳಿತಗಳು ಮುಂದಾಗಿವೆ. ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 3-4 ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ, ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ. ಕೆಲ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ ಹಾಗೂ ಅಂಗನವಾಡಿಗಳಲ್ಲೂ ಕುಡಿಯುವ ನೀರಿನ ಬರ ಬಂದಿದೆ. ಮೂರು ಬಾರಿ ಟಾಸ್ಕ್‌ಫೋರ್ಸ್‌ ಸಭೆತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಕಳೆದ ನ. 17, ಜ. 3 ಮತ್ತು ಫೆ. 17ರಂದು 3 ಬಾರಿ ಟಾಸ್ಕ್‌ಫೋರ್ಸ್‌ ಸಭೆಗಳನ್ನು ನಡೆಸಿವೆ. ಯಾವುದೇ ಕಾರಣಕ್ಕೂ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಜೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ನೀಡಿದ್ದಾರೆ. ಅಂತರ್ಜಲ ಕುಸಿತ: ತಾಲೂಕಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಮುಂಜಾಗ್ರತೆ ಕ್ರಮ ಕೈಗೊಂಡಿದ್ದು, ಈ ಬಾರಿ ಅಂತರ್ಜಲ ಮಟ್ಟ ತೀವ್ರ ಆಳಕ್ಕೆ ಹೋಗಿರುವುದರಿಂದ ಕೆಲವು ಭಾಗಗಳಲ್ಲಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ರೈತರ ಖಾಸಗಿ ಬೋರ್‌ವೆಲ್ ಗಳನ್ನು ಪಡೆದು ಜನತೆಗೆ ಕುಡಿಯುವ ನೀರು ನೀಡಲಾಗುತ್ತಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವ: ತಾಲೂಕಿನ ಪಟ್ಟಣ ಸೇರಿ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿದ್ದು, ತಹಸೀಲ್ದಾರ್ ಪಿಡಿ ಖಾತೆಯಲ್ಲಿ ₹೪೭ ಲಕ್ಷ ಇದೆ. ಹೆಚ್ಚುವರಿ ಅನುದಾನದ ಅವಶ್ಯವಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ರಾಜು ಪಿರಂಗಿ ತಿಳಿಸಿದರು.ನೀರು ಸಿಗುತ್ತಿಲ್ಲ: ನಮ್ಮೂರಿನಲ್ಲಿ ಕುಡಿಯುವ ನೀರು ಸಿಗದ ಪರಿಸ್ಥಿತಿ ಬಂದಿದೆ. ಫೆಬ್ರವರಿ ತಿಂಗಳಲ್ಲಿಯೇ ಹೀಗಾದರೆ ಇನ್ನೂ ಎರಡ್ಮೂರು ತಿಂಗಳು ನಾವು ಜೀವನ ಮಾಡೋದು ಕಷ್ಟ ಆಗ್ತಿದೆ. ಅಧಿಕಾರಿಗಳು ನಮ್ಮ ಊರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ನಾವು ನಮ್ಮ ಮನೆಯವರು ಕೆಲಸ ಬಿಟ್ಟು ಕುಡಿಯುವ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಆಲೂರು ಗ್ರಾಮದ ನಿವಾಸಿ ಶರಣಪ್ಪ ತಿಳಿಸಿದರು.

Share this article