ಎಲ್ಲಾ ಧರ್ಮಗಳ ಆಚರಣೆ ಬೇರೆಯಾದರೂ ತತ್ವ ಒಂದೇ: ಶ್ರೀ

KannadaprabhaNewsNetwork |  
Published : Mar 14, 2024, 02:05 AM IST
ನರಸಿಂಹರಾಜಪುರ ತಾಲೂಕಿನ ಕಳ್ಳಿಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಹರಿಹರಪುರ ಮಠದ  ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತೀ ಮಹಾ ಸ್ವಾಮೀಜಿಗಳು ಆಶೀರ್ವಾಚನ ನೀಡಿದರು.ಈ ಸಂದರ್ಭದಲ್ಲಿ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾ ಸ್ವಾಮೀಜಿಗಳು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕಳ್ಳಿಕೊಪ್ಪದಲ್ಲಿ ಶ್ರೀ ವೀರಾಂಜನೇಯಸ್ವಾಮಿ ನೂತನ ದೇವಸ್ಥಾನ, ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ದೇವನೊಬ್ಬನೇ ಆದರೆ, ರೂಪ, ನಾಮ ಹಲವು ವಿಧವಾಗಿದೆ, ಎಲ್ಲಾ ಧರ್ಮ, ಸಂಪ್ರದಾಯ, ಆಚರಣೆ ಬೇರೆ, ಬೇರೆಯಾದರೂ ತತ್ವ ಒಂದೇ ಆಗಿದೆ ಎಂದು ಹರಿಹರಪುರ ಮಠದ ಶ್ರೀ ಶಾರದಾ ಲಕ್ಷ್ಮಿನರಸಿಂಹ ಪೀಠಾಧೀಶ್ವರ ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತೀ ಮಹಾ ಸ್ವಾಮೀಜಿ ತಿಳಿಸಿದರು.

ಬುಧವಾರ ಕಳ್ಳಿಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ವೀರಾಂಜನೇಯಸ್ವಾಮಿಗೆ ಪೂಜೆ, ಕುಂಭಾಭಿಷೇಕ ನೆರವೇರಿಸಿದ ನಂತರ ನಡೆದ ಧಾರ್ಮಿಕ ಸಭೆ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು.

ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ ಋಗ್ವೇದವು ಐತಿಹಾಸಿಕ ಸಾಹಿತ್ಯವಾಗಿದೆ. ಎಲ್ಲಾ ಧರ್ಮ, ಸಂಪ್ರದಾಯ, ಆಚರಣೆ ಬೇರೆ, ಬೇರೆಯಾದರೂ ತತ್ವ ಒಂದೇ ಆಗಿದೆ. ಬೇರೆ, ಬೇರೆ ದೇವರ ಹೆಸರಿನಲ್ಲಿ ಪೂಜೆ ಮಾಡಿದರೂ ದೇವನೊಬ್ಬನೇ ಆಗಿದ್ದಾನೆ. ದುಷ್ಟರ ಸಂಹಾರಕ್ಕಾಗಿ ದೇವರು ಮೂರ್ತಿ ರೂಪದಲ್ಲಿ ಕಾಣುತ್ತಾರೆ. ಲೋಕ ಕಲ್ಯಾಣಕ್ಕಾಗಿ ವಿಗ್ರಹ ರೂಪದಲ್ಲಿ ನಾವು ಆರಾಧನೆ ಮಾಡುತ್ತೇವೆ. ಯಾರಲ್ಲಿ ಭಕ್ತಿ, ಶ್ರದ್ಧೆ ಇರುತ್ತದೆಯೋ ಅಲ್ಲಿ ದೇವರು ನೆಲೆಸುತ್ತಾನೆ. ಪ್ರತಿ ಮಾನವರ ಆತ್ಮದಲ್ಲಿ ದೇವರು ನೆಲೆಸಿದ್ದಾನೆ ಎಂದರು.

ಜಗತ್ತಿನ ಹಲವು ಕಡೆ ಧರ್ಮದ ಹೆಸರಿನಲ್ಲಿ ಉಗ್ರವಾದಿಗಳು ರಕ್ತಪಾತ, ಹಿಂಸೆ ನಡೆಸುತ್ತಾರೆ, ಇದು ಸರಿಯಲ್ಲ. ದೇವರು ಎಲ್ಲಾ ಮಾನವರನ್ನು ಸಮಾನಾಗಿ ಕಾಣುತ್ತಾನೆ. ಆದ್ಯಾತ್ಮಿಕ ಎಂಬುದು ಸುಮ್ಮನೆ ಒಲಿಯುವುದಿಲ್ಲ. ಆತ್ಮ ಸಾಕ್ಷಿಯಂತೆ ನಾವು ನಡೆದುಕೊಳ್ಳಬೇಕು. ಆಂಜನೇಯಸ್ವಾಮಿ ಬಲವಂತ, ವಿನಯವಂತನಾಗಿದ್ದಾನೆ ಎಂದರು.

ಸಭೆಯ ಸಾನ್ನಿದ್ಯ ವಹಿಸಿದ್ದ ಸಿಂಹನಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಕಳ್ಳಿಕೊಪ್ಪದಲ್ಲಿ ನೂತನವಾಗಿ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣವಾಗಿದ್ದು, ಗ್ರಾಮಸ್ಥರು ಕಳೆದ 1 ತಿಂಗಳಿಂದ ಮನೆ ಹಬ್ಬದ ಕಾರ್ಯದಂತೆ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಮಾಡಿದ್ದಾರೆ. ಜೈನ ಧರ್ಮದಲ್ಲೂ ಆಂಜನೇಯಸ್ವಾಮಿ ಪೂಜಿಸುತ್ತೇವೆ. ಆಂಜನೇಯನು ಶ್ರೀರಾಮನಿಗೆ ನಿಷ್ಠನಾಗಿ ಶ್ರೀ ರಾಮನ ನೆರಳಾಗಿ ಭಕ್ತಿಯ ಸಮರ್ಪಣೆ ಮಾಡಿದ್ದನು. ಸೀತಾರಾಮನ ಕಲ್ಯಾಣದಲ್ಲೂ ಆಂಜನೇಯಸ್ವಾಮಿಗೆ ಭಗವಂತನ ಸ್ಥಾನ ನೀಡಿದ್ದೇವೆ. ದುಷ್ಟ ಶಕ್ತಿಗಳು ಆಂಜನೇಯಸ್ವಾಮಿ ಹತ್ತಿರ ಸುಳಿಯುವುದಿಲ್ಲ. ವಾಲ್ಮೀಕಿ ರಾಮಾಯಾಣದಲ್ಲೂ ಆಂಜನೇಯನ ವರ್ಣನೆ ಚೆನ್ನಾಗಿ ಮಾಡಿದ್ದಾರೆ. ದೇವಸ್ಥಾನಗಳಲ್ಲಿ ಭಕ್ತಿಗೆ ಮಾತ್ರ ಪ್ರಾಧಾನ್ಯತೆ ನೀಡಬೇಕು. ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನವನ್ನು ಸಮಿತಿ ಮೂಲಕ ಚೆನ್ನಾಗಿ ಕಟ್ಟಿದ್ದಾರೆ. ಮುಂದೆ ಸಾವಿರಾರು ವರ್ಷಗಳ ಕಾಲ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನವು ಮುನ್ನೆಡೆಯಲಿದ್ದು ಎಲ್ಲರ ಮನಸ್ಸು ಒಂದಾಗಲಿ. ಬಸ್ತಿಮಠದ ಸಮಂತ ಗುರುಗಳ ಆಶೀರ್ವಾಚನವು ಸದಾ ಇರುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಮಾತನಾಡಿ, ಕಳ್ಳಿಕೊಪ್ಪದಲ್ಲಿ ನೂತನವಾಗಿ ಪ್ರತಿಷ್ಠೆಯಾಗುತ್ತಿರುವ ಸಂದರ್ಭದಲ್ಲಿ ಗ್ರಾಮದಲ್ಲಿ ಸಂಭ್ರದ ವಾತಾವರಣ ಉಂಟಾಗಿದೆ. ಹರಿಹರಪುರ ಮಠದ ಶ್ರೀ ಗಳು ಹಾಗೂ ಬಸ್ತಿಮಠ ಶ್ರೀಗಳು ಆಗಮಿಸಿ ಆಶೀರ್ವಚನ ಮಾಡುತ್ತಿರುವುದು ಶ್ರೀ ಶಾರದೆ ದೇವಿ ಹಾಗೂ ಜ್ವಾಲಾಮಾಲಿನಿ ದೇವಿ ಬಂದ ಅನುಭವ ಆಗುತ್ತಿದೆ. ಕಳ್ಳಿಕೊಪ್ಪದಲ್ಲಿ ಕೆಲವು ವರ್ಷಗಳಿಂದ ತಿಂಗಳಿಗೆ ಒಬ್ಬರಂತೆ ಮರಣ ಹೊಂದುತ್ತಿದ್ದರು. ಇದು ಸರಿ ಹೋಗಬೇಕಾದರೆ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥರು ತೀರ್ಮಾನಿಸಿ ದೇವಸ್ಥಾನ ಕಟ್ಟಲು ಪ್ರಾರಂಭಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ದೇವಸ್ಥಾನಕ್ಕೆ ₹20 ಲಕ್ಷ ಮಂಜೂರು ಮಾಡಿಸಿಕೊಟ್ಟಿದ್ದೇನೆ. ಈ ದೇವಸ್ಥಾನದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಒಟ್ಟಾಗಿ ಶ್ರಮ ವಹಿಸಿ ಸುಂದರವಾದ ದೇವಸ್ಥಾನ ನಿರ್ಮಿಸಿದ್ದಾರೆ. ಹರಿಹರಪುರ ಸ್ವಾಮೀಜಿ ಬಸವಣ್ಣನವರ ತತ್ವಗಳನ್ನು ಪಾಲಿಸುತ್ತಿದ್ದಾರೆ. ಬಸ್ತಿಮಠದ ಈಗಿನ ಶ್ರೀಗಳು ಬಸ್ತಿಮಠವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.

ಸಭೆ ಅಧ್ಯಕ್ಷತೆ ಕಳ್ಳಿಕೊಪ್ಪ ಶ್ರೀ ವೀರಾಂಜನೇಯ ದೇವಸ್ಥಾನದ ಸಮಿತಿ ಅಧ್ಯಕ್ಷ ಜಿ.ಸುಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಟಿ.ಡಿ.ರಾಜೇಗೌಡ ಅವರ ಪತ್ನಿ ಪುಷ್ಪ ರಾಜೇಗೌಡ, ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್, ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯ ಎಂ.ಟಿ.ಪ್ರವೀಣ್ ಕುಮಾರ್‌ ಇದ್ದರು. ಇದೇ ವೇಳೆ ಪ್ರಮುಖ ದಾನಿಗಳನ್ನು ಸನ್ಮಾನಿಸಲಾಯಿತು. ಅಭಿನವ ಗಿರಿರಾಜ್‌ ಸ್ವಾಗತಿಸಿ, ಶಶಿಕಲಾ ಹಾಗೂ ಆಶಾ ಕಾರ್ಯಕ್ರಮ ನಿರೂಪಿಸಿ, ಶಿವಕುಮಾರ್ ವಂದಿಸಿದರು.

ಇದಕ್ಕೂ ಮೊದಲು ಕರ್ಕಿಯ ರಮಾನಂದಭಟ್ ನೇತ್ರತ್ವದಲ್ಲಿ ಋತ್ವಿಜರು ಬೆಳಗ್ಗೆ ನಾಗದೇವರ ಪ್ರತಿಷ್ಠೆ, ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ ಪೂಜೆ, ಪ್ರತಿಷ್ಠಾ ಹೋಮ, ನವಕ ಪ್ರಧಾನ, ಬ್ರಹ್ಮ ಕುಂಭ ಸ್ಥಾಪನೆ ಪೂಜೆ, ಸ್ವಾಮಿ ನಾಗ ಮತ್ತು ಶ್ರೀ ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ ನೆರವೇರಿಸಿದರು.

ಹರಿಹರಪುರ ಮಠದಲ್ಲಿ ಇದೇ ಏ.19ರಿಂದ 23ರ ವರೆಗೆ ಬ್ರಹ್ಮೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ನಿತ್ಯ 5 ದಿನಗಳ ಕಾಲ ಬೆಳಗ್ಗೆ 9.30ಗಂಟೆಯಿಂದ 10.30ಗಂಟೆವರೆಗೆ 1008 ಮಾತೆಯರಿಂದ ಕುಂಕುಮಾರ್ಚನೆ ನಡೆಯಲಿದೆ. ನಂತರ ಧಾರ್ಮಿಕ ಸಭೆ ನಡೆಯಲಿದೆ. ಎಲ್ಲಾ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗಹಿಸಬೇಕು ಎಂದು ಹರಿಹರಪುರಮಠದ ಶ್ರೀ ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು