ಬೆಂಗಳೂರು : ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನೇರಳೆ ಮಾರ್ಗದಲ್ಲಿ ಪೀಕ್ ಅವರ್‌ನಲ್ಲಿ ಹೆಚ್ಚುವರಿ 15 ರೈಲುಗಳ ಕಾರ್ಯಾಚರಣೆ ಆರಂಭವಾಗಿದ್ದು, ಇವು 5 ನಿಮಿಷದ ಬದಲಾಗಿ ಪ್ರತಿ 3.5 ನಿಮಿಷಕ್ಕೆ ಸಂಚರಿಸಲಿವೆ.
ಈ ಮಾರ್ಗದಲ್ಲಿ ಪ್ರಸ್ತುತ 9 ರೈಲುಗಳು ಶಾರ್ಟ್‌ಲೂಪ್ ಆಗಿ ಕಾರ್ಯಾಚರಣೆ ಮಾಡುತ್ತಿದ್ದವು. ಶನಿವಾರದಿಂದ ಈ ರೈಲುಗಳನ್ನು 15ಕ್ಕೆ ಹೆಚ್ಚಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು ಅಗ್ರಹಾರದ (ಐಟಿಪಿಎಲ್) ವರೆಗೆ, ನಾಲ್ಕು ರೈಲು ವೈಟ್ ಫೀಲ್ಡ್ ಮತ್ತು 1 ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಸಂಚರಿಸಲಿದೆ.
ರೈಲಿನ ವೇಳಾಪಟ್ಟಿ:
ಮೆಜಸ್ಟಿಕ್‌ನಿಂದ ಬೆಳಗ್ಗೆ 8.48, 8.58, 9.08, 9.18, 9.29, 9.39, 9.50, 10, 10.11, 10.21, 10.39, 10.50, 11, 11.22 ವೈಟ್‌ಫೀಲ್ಡ್ ಕಡೆಗೆ ಹೊರಡುತ್ತವೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ 3.3 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 10.25 ಗಂಟೆವರೆಗೆ ನಿಯಮಿತವಾಗಿ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದೆ.
ಪ್ರಯಾಣಿಕರ ಬೇಡಿಕೆ ಅನುಸಾರ, ಪ್ರಸ್ತುತ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ, 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) / ವೈಟ್‌ಫೀಲ್ಡ್ ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಸಿಗಲಿದೆ.
ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಕಡೆಗೆ ಸಂಜೆ 4:40 ರ ಬದಲಿಗೆ 4:20ಕ್ಕೆ ರೈಲುಗಳು ಕಾರ್ಯಾಚರಣೆ ಮಾಡಲಿದ್ದು, ಪ್ರತಿ 5 ನಿಮಿಷಗಳ ಅಂತರದಲ್ಲಿ ಇವು ಸಂಚರಿಸಲಿವೆ. ಹಸಿರು ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರಲಾರದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.