ಬಿ.ಎಚ್.ಕೈಮರದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಲಹೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿ ಅಗತ್ಯವಿರುವ ಗೊಬ್ಬರಗಳನ್ನು ಮಾತ್ರ ಗಿಡಗಳಿಗೆ ನೀಡಬೇಕು ಎಂದು ಶಿವಮೊಗ್ಗದ ತೋಟಗಾರಿಕೆ ಇಲಾಖೆ ಜೈವಿಕ ಕೇಂದ್ರದ ಎಲೆ ವಿಶ್ಲೇಷಣೆ ಪರೀಕ್ಷಾ ಪ್ರಯೋಗಾಲಯದ ಸಹಾಯಕ ನಿರ್ದೇಶಕ ಜೆ.ಎಲ್.ರಮೇಶ್ ಸಲಹೆ ನೀಡಿದರು.
ಮಂಗಳವಾರ ಬಿ.ಎಚ್.ಕೈಮರದ ಶಕ್ತಿ ಗಣಪತಿ ಸುಬ್ರಮಣ್ಯ ದೇವಸ್ಥಾನದಲ್ಲಿ ಸಮೃದ್ಧಿ ಕೃಷಿ ಸ್ವಸಹಾಯ ಸಂಘದವರು ಏರ್ಪಡಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಮಣ್ಣು ಪರೀಕ್ಷೆ, ಎಲೆಗಳ ಪರೀಕ್ಷೆ ಕುರಿತು ಮಾಹಿತಿ ನೀಡಿದರು. ಹಿಂದೆ ರೈತರು ಮನೆಯಲ್ಲಿ ಹಸು ಸಾಕಿ ಕೊಟ್ಟಿಗೆ ಗೊಬ್ಬರ ಮಾಡುತ್ತಿದ್ದರು. ಪ್ರಸ್ತುತ ಜಾನುವಾರುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಕೊಟ್ಟಿಗೆ ಗೊಬ್ಬರದಲ್ಲಿ ಎನ್.ಪಿ.ಕೆ. ಸಮ ಪ್ರಮಾಣದಲ್ಲಿ ಸಿಕ್ಕುತ್ತಿತ್ತು. ಈಗ ಕೇವಲ ರಸ ಗೊಬ್ಬರ ಮಾತ್ರ ನೀಡುತ್ತಿರುವುದರಿಂದ ಭೂಮಿಗೆ ಇವು ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದು ತಿಳಿಯದೆ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣ ಗೊಬ್ಬರ ನೀಡುತ್ತಿದ್ದಾರೆ. ಇದರಿಂದ ಭೂಮಿಗೆ ಹಾನಿಯಾಗುತ್ತಿದೆ. ಎಲ್ಲಾ ಬೆಳೆಗಳಿಗೂ ಸಾಮಾನ್ಯವಾಗಿ 16 ಪೋಷಕಾಶ ಅಗತ್ಯ. ಅದರಲ್ಲಿ ಎನ್.ಪಿ.ಕೆ ಮುಖ್ಯವಾಗಿದೆ. ಉಳಿದ 13 ಪೋಶಕಾಂಶಗಳನ್ನು ನೀಡಬೇಕಾದರೆ ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯವಿರುವ ಪೋಶಕಾಂಶ ನೀಡಬೇಕು ಎಂದು ಸಲಹೆ ನೀಡಿದರು.ಅತಿಯಾದ ರಾಸಾಯನಿಕ ಗೊಬ್ಬರದಿಂದ ಭೂಮಿ ಹಾಳಾಗುತ್ತಿದೆ. ಆದ್ದರಿಂದ ರೈತರು ಜೈವಿಕ ಗೊಬ್ಬರಗಳನ್ನು ಹೆಚ್ಚು ನೀಡಿ ಸಾವಯವ ಕೃಷಿ ಮಾಡಬೇಕು. ಜೈವಿಕ ಗೊಬ್ಬರ ರೋಗ, ಕೀಟಗಳನ್ನು ಹತೋಟಿಯಲ್ಲಿಡುತ್ತದೆ. ಜೊತೆಗೆ ಪೋಷಕಾಂಶ ಸಹ ನೀಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಅಮೃತ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಮಡಬೂರು ಕೃಷ್ಣಪ್ಪಗೌಡ ಮಾತನಾಡಿ, ರೈತರು ಸಾವಯವ ಕೃಷಿ ಮಾಡಬೇಕು. ದೇಸೀ ಹಸುಗಳಾದ ಮಲೆನಾಡು ಗಿಡ್ಡ ಜಾತಿಯ ಹಸುವನ್ನು ಸಾಕಬೇಕು. ಈ ಹಸುಗಳು ಕಾಡಿನಲ್ಲಿ ಗಿಡ, ಸೊಪ್ಪುಗಳನ್ನು ತಿನ್ನುವುದರಿಂದ ಇದರ ಸಗಣಿ, ಮೂತ್ರದಲ್ಲಿ ಔಷಧಿ ಗುಣಗಳಿವೆ. ಇದರ ಸಗಣಿ ಹಾಕಿ ಕಾಂಪೋಸ್ಟ್ ಮಾಡಿದರೆ ತೋಟಗಳು ಅಭಿವೃದ್ಧಿ ಹೊಂದುತ್ತದೆ ಎಂದರು.ಸಭೆ ಅಧ್ಯಕ್ಷತೆಯನ್ನು ಸಮೃದ್ಧಿ ಕೃಷಿ ಸ್ವಸಹಾಯ ಸಂಘದ ಅಧ್ಯಕ್ಷ ಎಂ.ವಿ.ರಾಜೇಂದ್ರ ಕುಮಾರ್ ಮಾತನಾಡಿ, 2008 ರಲ್ಲಿ ಸಮೃದ್ಧಿ ಕೃಷಿ ಸ್ವ ಸಹಾಯ ಸಂಘ ಹುಟ್ಟು ಹಾಕಲಾಯಿತು. ಆಹಾರ ಬೆಳೆ ಬೆಳೆಯಲು ಉತ್ತೇಜನ ನೀಡುವುದು ಹಾಗೂ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು ನಮ್ಮ ಸಂಘದ ಉದ್ದೇಶ. ಆದರೆ, ಕಾಡು ಪ್ರಾಣಿಗಳ ಹಾವಳಿ, ಕೃಷಿ ಕಾರ್ಮಿಕರ ಸಮಸ್ಯೆಗಳಿಂದ ಇತ್ತೀಚೆಗೆ ಬತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸ್ವಸಹಾಯ ಸಂಘದಿಂದ 10 ಎಕ್ರೆ ಬೀಳು ಭೂಮಿಯನ್ನು ಲೀಸಿಗೆ ಪಡೆದು ಅದರಲ್ಲಿ ಆಹಾರ ಬೆಳೆ ಬೆಳೆಯುವ ಉದ್ದೇಶ ಹೊಂದಿದ್ದೇವೆ ಎಂದರು. ಸಮೃದ್ಧಿ ಕೃಷಿ ಸ್ವಸಹಾಯ ಸಂಘದ ಕಾರ್ಯದರ್ಶಿ ಎಸ್.ಶ್ರೀನಾಥ್ ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಸ್ವಸಹಾಯ ಸಂಘದ ಸದಸ್ಯರು ಹಾಗೂ ಸುತ್ತು ಮುತ್ತಲಿನ ಗ್ರಾಮದ ರೈತರು ಆಗಮಿಸಿದ್ದರು.