ಕನ್ನಡಪ್ರಭ ವಾರ್ತೆ ತಿಪಟೂರು
ಸಾಮಾಜಿಕ ಪಿಡುಗಾದ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ವಿ. ದೀಪಾ ತಿಳಿಸಿದರು. ನಗರದ ಕೆ.ಎಲ್.ಎ. ಕಾನೂನು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಲ ಕಾರ್ಮಿಕ ನಿರ್ಮೂಲನಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು., ಸಂವಿಧಾನವು ನಮಗೆ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದರ ಜೊತೆಗೆ, ಮೂಲಭೂತ ಕರ್ತವ್ಯಗಳನ್ನೂ ಸಹ ಪಾಲಿಸಬೇಕು. ಸಾಮಾಜಿಕ ಬದ್ಧತೆ ಹಾಗೂ ಸಮಾಜಕ್ಕೆ ನಮ್ಮೆಲ್ಲರ ಕೊಡುಗೆಗಳ ಬಗ್ಗೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುವಾಗ ಅಡ್ಡಿ ಆತಂಕಗಳು ಸಾಮಾನ್ಯವಾಗಿ ಬರುತ್ತವೆ. ಯಾವುದಕ್ಕೂ ಎದೆಗುಂದದೆ, ಯಾವುದೇ ಫಲಾಪೇಕ್ಷೆ ಇಲ್ಲದೆ ನಮ್ಮ ಸಾಮಾಜಿಕ ಕರ್ತವ್ಯಗಳನ್ನು ಪಾಲಿಸಬೇಕು ಎಂದರು. ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಂ.ಸಿ.ನಟರಾಜು ಮಾತನಾಡಿ, ಶಿಕ್ಷಣದ ಕೊರತೆ ಹಾಗೂ ಬಡತನ ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಬಾಲಕಾರ್ಮಿಕರು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಬಾಲ ಕಾರ್ಮಿಕ ನಿರ್ಮೂಲನೆಗೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು, ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕಾಗಿದೆ. ವಲಸೆ ಕಾರ್ಮಿಕರ ಬಗ್ಗೆ ಕಟ್ಟುನಿಟ್ಟಿನ ಕಾನೂನನ್ನು ರೂಪಿಸಬೇಕಾಗಿದೆ. ಇದರಿಂದ ಕಳ್ಳತನ, ದರೋಡೆ, ಅತ್ಯಾಚಾರ, ಮಾನವ ಕಳ್ಳ ಸಾಗಾಣಿಕೆ ಇನ್ನಿತರ ಸಮಾಜಘಾತಕ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು. ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರ ಬಗ್ಗೆ ತಿಳಿಸಿ, ಬಾಲಕಾರ್ಮಿಕರನ್ನು ಕೆಲಸ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದರು. ಕಾರ್ಮಿಕ ನಿರೀಕ್ಷಕ ಡಿ.ಎಂ. ವೆಂಕಟೇಶ್ ಬಾಬು, ಕಾನೂನು ಕಾಲೇಜಿನ ಅಧ್ಯಕ್ಷ ಬಿ.ಎನ್. ನಾಗೇಂದ್ರ, ಕಾರ್ಯದರ್ಶಿ ಎಸ್. ಶಶಿಧರ್, ಟ್ರಸ್ಟಿಗಳಾದ ಶಿಬಿನ್, ಪ್ರಾಂಶುಪಾಲ ಪಿ.ಕೆ. ವನೀತಾ ಭಾಗವಹಿಸಿದ್ದರು.