ಹರಪನಹಳ್ಳಿ: ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಣುಕಾದೇವಿ ತಿಳಿಸಿದರು.
ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಸಂವಿಧಾನ ಜಾಗೃತಿ ಜಾಥಾದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಪಂಚದಲ್ಲಿಯೇ ಅದ್ಭುತ ದೇಶ ನಮ್ಮದು. ಇಲ್ಲಿ ನಾವೆಲ್ಲ ಸುಖ, ನೆಮ್ಮದಿಯಿಂದ ಜೀವನ ನಡೆಸುತ್ತೇವೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಶೋಷಣೆ, ಮೇಲು, ಕೀಳು ಎಂಬ ತಾರತಮ್ಯ ಒಳಗೊಂಡಿತ್ತು. ಸ್ವಾತಂತ್ರ್ಯ ಸಿಕ್ಕು, ಸಂವಿಧಾನ ಜಾರಿಗೆ ಬಂದ ಮೇಲೆ ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮದೆಯಾದ ಸಂವಿಧಾನ ರಚಿಸಿದ್ದಾರೆ ಎಂದರು.
ಸಂವಿಧಾನ ಜಾರಿಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳುವ ಮೂಲಕ ಮಹತ್ತರವಾದ ಹೆಜ್ಜೆ ಇಟ್ಟಿದೆ ಎಂದರು.ತಾಲೂಕು ಪಂಚಾಯಿತಿ ಇಒ ಕೆ.ಆರ್. ಪ್ರಕಾಶ್ ಮಾತನಾಡಿ, ಸಂವಿಧಾನ ಭಾರತದ ಮಹಾನ್ ಗ್ರಂಥವಾಗಿದ್ದು, ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳುವ ಮೂಲಕ ಅದರ ಆಶಯಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಟಿ. ಹೊನ್ನಮ್ಮ ಕರಿಯಪ್ಪ, ಉಪಾಧ್ಯಕ್ಷೆ ಭೋವಿ ದುರುಗಮ್ಮ, ಸದಸ್ಯರಾದ ಎಂ. ದ್ಯಾಮಪ್ಪ, ನಾಗೇಂದ್ರಪ್ಪ, ಕೆ. ನೀಲಮ್ಮ, ವೀರುಪಾಕ್ಷಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಆನಂದನಾಯ್ಕ, ನೀಲಗುಂದ ಸಿಆರ್‌ಪಿ ರವಿ, ಮುಖ್ಯ ಶಿಕ್ಷಕರಾದ ವೀರಭದ್ರಪ್ಪ, ಸಿದ್ದಪ್ಪ, ಬಸಪ್ಪ, ಉಸ್ಮಾನ್, ಸಿಡಿಪಿಒ ಮೇಲ್ವಿಚಾರಕಿ ಅಕ್ಕಮಹಾದೇವಿ, ಗ್ರಾಮ ಲೆಕ್ಕಾಧಿಕಾರಿ ರಾಜಪ್ಪ, ಇಟ್ಟಿಗುಡಿ ರಮೇಶ, ನಂದೀಶ, ಗೋಣೆಪ್ಪ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.