- ಏಕತ ದಿನದ ಅಂಗವಾಗಿ ಮ್ಯಾರಥಾನ್ ಓಟಕ್ಕೆ ಚಾಲನೆ
ನರಸಿಂಹರಾಜಪುರ: ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ್ ಹೇಳಿದರು.ಶುಕ್ರವಾರ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸರ್ಧಾರ್ ವಲ್ಲಬ ಬಾಯಿ ಪಟೇಲದ ಅವರ ಜನ್ಮ ದಿನದ ಅಂಗವಾಗಿ ನಡೆದ ಏಕತಾ ದಿನದ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಧಾರ್ ವಲ್ಲಭಭಾಯಿ ಪಟೇಲ್ ದೇಶವನ್ನು ಒಗ್ಗೂಡಿಸಲು ಶ್ರಮಿಸಿದ್ದರು. ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಿರಂಜನಗೌಡ ಮಾತನಾಡಿ, ಸರ್ಧಾರ್ ವಲ್ಲಭಬಾಯಿ ಪಟೇಲ್ ಅವರ 150 ನೇ ಜನ್ಮ ದಿನದ ಅಂಗವಾಗಿ ಸದ್ಭವನಾ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಗಿಡ ನೆಡುವ, ಶಾಲಾ, ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ದೇಶದ ಏಕೀಕರಣಕ್ಕೆ ಶ್ರಮಿಸಿದ ಸರ್ಧಾರ್ ವಲ್ಲಬಬಾಯಿ ಪಟೇಲ್ ಅವರು ಶ್ರಮಿಸಿದ್ದರು ಎಂದರು.ಪೊಲೀಸ್ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಮಾತನಾಡಿ, ಜಾತಿ,ಮತ, ಧರ್ಮ ಎಂಬ ಬೇಧಭಾವವನ್ನು ಬಿಟ್ಟು ಎಲ್ಲರೂ ಭಾರತೀಯರು ಎಂದು ಒಗ್ಗಟ್ಟಾಗಿ ಬದುಕ ಬೇಕು ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಸರ್ಧಾರ್ ವಲ್ಲಭಭಾಯಿ ಪಟೇಲ್ ಭಾರತದ ಏಕೀಕರಣ ಮಾಡುವಲ್ಲಿ ಕೊಡುಗೆ ನೀಡಿದ್ದಾರೆ. ದೇಶದ ಏಕತೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳ ಕೊಡುಗೆ ಮತ್ತು ಆಶಯವನ್ನು ಶಾಲಾ ಕಾಲೇಜು ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ದೇಶಭಕ್ತಿ ಬೆಳೆಸಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ ,ಜಾತಿ, ಮತ,ಪಂಥ ಬಿಟ್ಟು ಎಲ್ಲರೂ ಪ್ರೀತಿಯಿಂದ ಒಂದಾಗಿ ಬಾಳಬೇಕು ಎಂದರು.
ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಜ್ಯೋತಿ, ವಕೀಲ ಎಸ್.ಎಸ್.ಸಂತೋಷ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಜೇಸಿ ಸಂಸ್ಥೆಯ ಗಂಗಾಧರ್, ಮನು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.