ಪ್ರತಿಯೊಬ್ಬರು ಮಕ್ಕಳಿಗೆ ಪೋಲಿಯೋ ಹಾಕಿಸಿ: ಶಾಸಕ ಪುಟ್ಟರಂಗಶೆಟ್ಟಿ

KannadaprabhaNewsNetwork | Published : Mar 4, 2024 1:16 AM

ಸಾರಾಂಶ

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ’ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರಆಗತಾನೆ ಹುಟ್ಟಿದ ಮಗುವಿನಿಂದ ೫ ವರ್ಷದೊಳಗಿನ ಮಕ್ಕಳಿಗೆ ಪ್ರತಿಯೊಬ್ಬರು ಪೋಲಿಯೋ ಹನಿ ಹಾಕಿಸಿ ಮಕ್ಕಳನ್ನು ಮಾರಕವಾಗಿ ಕಾಡುವ ಪೋಲಿಯೋ ರೋಗದಿಂದ ರಕ್ಷಿಸುವಂತೆ ಶಾಸಕ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದ ಅವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ’ರಾಷ್ಟ್ರೀಯ ಪಲ್ಸ್ ಪೋಲಿಯೋ’ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಬಾಯಿಗೆ ಪೋಲಿಯೋ ಲಸಿಕೆ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪೋಲಿಯೋ ಪಿಡುಗು ೩೦ ವರ್ಷಗಳ ಹಿಂದೆ ಮಕ್ಕಳಿಗೆ ಮಾರಕವಾಗಿ ಪರಿಣಮಿಸಿತ್ತು. ಪೋಲಿಯೋ ವೈರಸ್‌ನಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರವು ೧೯೯೫ರಿಂದ ಪ್ರತಿವರ್ಷವೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಈ ಹಿಂದೆ ತಾಯಂದಿರು. ಪೋಷಕರು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಇಂಜರಿಯುತ್ತಿದ್ದರು. ಪ್ರಸ್ತುತ ಜನರು ಜಾಗೃತರಾಗಿದ್ದಾರೆ. ಪ್ರತಿಯೊಬ್ಬರು ತಪ್ಪದೆ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಅವರು ಸಲಹೆ ಮಾಡಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಅಂಗವಾಗಿ ಜಿಲ್ಲೆಯಾದ್ಯಂತ ೩ರಿಂದ ೪ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಪೋಲಿಯೋ ಹನಿ ಹಾಕುವ ಕಾರ್ಯಕ್ರಮದಲ್ಲಿ ಬೆಳಗ್ಗೆ ೮ರಿಂದ ಸಂಜೆ ೫ ಗಂಟೆಯವರೆಗೆ ಅಂಗನವಾಡಿ ಕೇಂದ್ರಗಳು, ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಪೋಲಿಯೋ ಹನಿ ಹಾಕಲಾಗುತ್ತದೆ. ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ೫ ವರ್ಷದೊಳಗಿನ ಯಾವ ಮಗುವು ಪೋಲಿಯೋ ಲಸಿಕೆ ಹನಿಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದರು.

ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ೨೦೧೪ರಿಂದ ಭಾರತದ ಯಾವುದೇ ಭಾಗದಲ್ಲಿ ಪೋಲಿಯೋ ಕಾಣಿಸಿಕೊಂಡಿಲ್ಲ. ನೆರೆ ದೇಶಗಳಲ್ಲಿ ಪೋಲಿಯೋ ಪ್ರಕರಣಗಳಿರುವುದರಿಂದ ಮುನ್ನೆಚ್ಚರಿಕೆಯಾಗಿ ಆಗತಾನೆ ಹುಟ್ಟಿದ ಮಗುವಿನಿಂದ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುತ್ತಿದೆ. ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಸಹ ಎಲ್ಲಾ ತಾಯಂದಿರು, ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸಿ ರೋಗದ ಸಂಪೂರ್ಣ ನಿರ್ಮೂಲನೆಗೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಪೋಲಿಯೋ ವೈರಸ್ ನೀರು ಮತ್ತು ಆಹಾರದ ಮೂಲಕ ದೇಹವನ್ನು ಸೇರಿ ಪ್ರತಿಯೊಂದು ನರಗಳಿಗೂ ವ್ಯಾಪಿಸಿ ಮಾಂಸಖಂಡಗಳು ಶಕ್ತಿ, ಸ್ವಾಧೀನ ಕಳೆದುಕೊಳ್ಳುವಂತೆ ಮಾಡಲಿದೆ. ಪೋಲಿಯೋ ಹನಿ ಹಾಕಿಸಲು ಉದಾಸೀನತೆ ಬೇಡ. ಮಕ್ಕಳನ್ನು ಪೋಲಿಯೋ ರೋಗದಿಂದ ರಕ್ಷಿಸಲು ಕಳೆದ ೩೦ ವರ್ಷಗಳಿಂದ ನಿರಂತರವಾಗಿ ಪೋಲಿಯೋ ಹನಿ ಹಾಕಲಾಗುತ್ತಿದ್ದು, ಜಿಲ್ಲೆಯಲ್ಲಿ ಈ ಬಾರಿ ೫ ವರ್ಷದೊಳಗಿನ ೬೫೮೩೫ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದರು. ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಮಂಜುನಾಥ್, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಪಲ್ಸ್ ಪೋಲಿಯೋ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಜಯರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದುಶ್ಯಂತ್, ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಉಮಾರಾಣಿ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಸರ್ಕಾರಿ ಶುಶ್ರೂಷಕ ಕಾಲೇಜಿನ ಪ್ರಾಂಶುಪಾಲ ಖುದ್ರತ್, ಜಿಲ್ಲಾ ಶುಶ್ರೂಷಕ ಅಧಿಕಾರಿ ಶಾಂತಮ್ಮ, ಲಯನ್ಸ್ ಸಂಸ್ಥೆಯ ಗಿರೀಶ್, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.----------3ಸಿಎಚ್ಎನ್‌12ಚಾಮರಾಜನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದ ಅವರಣದಲ್ಲಿ ’ರಾಷ್ಟ್ರೀಯ ಪಲ್ಸ್ ಪೋಲಿಯೋ’ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಬಾಯಿಗೆ ಪೋಲಿಯೋ ಲಸಿಕೆ ಹನಿ ಹಾಕುವ ಮೂಲಕ ಡೀಸಿ ಶಿಲ್ಪಾನಾಗ್‌ ಚಾಲನೆ ನೀಡಿದರು.

Share this article