ಕಾನೂನು ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ: ಸಿಡಿಪಿಒ ಮುನಿರಾಜು

KannadaprabhaNewsNetwork |  
Published : Dec 19, 2024, 12:33 AM IST
ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ನಡೆದ ಕಾನೂನು ಜಾಗೃತಿ ಶಿಬಿರದಲ್ಲಿ ಸಿಡಿಪಿ ಮುನಿರಾಜು ಮಾತನಾಡಿದರು. | Kannada Prabha

ಸಾರಾಂಶ

ಮಹಿಳೆಯರು ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಸಿಡಿಪಿಒ ಮುನಿರಾಜು ಹೇಳಿದರು. ಬಂಗಾರಪೇಟೆಯಲ್ಲಿ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ನೆರವು, ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಹಿಳೆಯರು ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಸಿಡಿಪಿಒ ಮುನಿರಾಜು ಹೇಳಿದರು.ತಾಲೂಕಿನ ಕಾರಹಳ್ಳಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ನೆರವು, ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಇರಬೇಕು ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಮೇಲೆ ದಿನ ನಿತ್ಯ ಕೌಟುಂಬಿಕ ದೌರ್ಜನ್ಯ, ಕಿರುಕುಳ ಸೇರಿದಂತೆ ಹಲವಾರು ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುತ್ತವೆ. ಇದರ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಸಮಯದಲ್ಲಿ ಆಗುವಂತಹ ಅಡೆತಡೆಗಳನ್ನು ಬಗೆಹರಿಸುವ ಸಲುವಾಗಿ ಸಂವಿಧಾನದಡಿಯಲ್ಲಿ ಇರುವ ಎಲ್ಲಾ ಕಾನೂನುಗಳ ಬಗ್ಗೆ ಮನವರಿಕೆ ಮಾಡಲಾಗುತ್ತದೆ ಎಂದರು.

ಮಹಿಳೆಯರಿಗೆ ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳದಿಂದ ಸಮಸ್ಯೆ ಉಂಟಾಗಬಹುದು. ಇದನ್ನು ಬಗೆಹರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೂರನ್ನು ದಾಖಲಿಸಲಿಕ್ಕೆ ಅವಕಾಶವಿದೆ. ಬಾಲ್ಯವಿವಾಹದ ಸಾಮಾಜಿಕ ಪಿಡುಗಿನ ಬಗ್ಗೆ ಶಾಲಾ ಕಾಲಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದರೂ ಸಹ ಇತ್ತೀಚೆಗೆ ಯಾರಿಗೂ ಕಾಣದಂತೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. 18 ವರ್ಷ ಮುಗಿಯುವುದಕ್ಕೆ ಮುಂಚೆಯೇ ಮದುವೆ ಮಾಡುವುದನ್ನು ನಿಯಂತ್ರಿಸಲು ಸಾರ್ವಜನಿಕರು ಜಾಗೃತರಾಗಬೇಕು. ಇದರ ಜೊತೆಗೆ ಯಾವುದೇ ಮಗು ಸಮಸ್ಯೆಗೆ ಒಳಗಾಗಿದ್ದರೆ ಆ ಮಗುವನ್ನು ರಕ್ಷಿಸಲು 1098 ಅಥವಾ 112 ಸಂಖ್ಯೆಗೆ ದಿನದ 24 ಗಂಟೆಗಳ ಅವಧಿಯಲ್ಲಿ ಕರೆ ಮಾಡಿ ಸಹಾಯವನ್ನು ಪಡೆಯಬಹುದು ಎಂದರು.ಕಡ್ಡಾಯ ಶಿಕ್ಷಣದ ಕಾಯಿದೆಯ ಪ್ರಕಾರ 1 ರಿಂದ 8ನೇ ತರಗತಿವರೆಗೂ ಮಗು ಕಡ್ಡಾಯವಾಗಿ ಓದಬೇಕು ಎಂಬ ನಿಯಮವಿದೆ. ಇದು ಎಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಂದು ಮಗು 14 ವರ್ಷದವರೆಗೂ ಓದಬೇಕೆ ಹೊರತು ದುಡಿಯಲು ಕಳುಹಿಸಬಾರದು. ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿ ಕಾಣಲು ಮತ್ತು ಪ್ರತಿಯೊಂದು ಮಗುವಿಗೂ ಉಚಿತ ಶಿಕ್ಷಣ ನೀಡಲಿಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಪಿಡಿಒ ವಾಣಿ, ವಕೀಲರ ಸಂಘದ ಅಧ್ಯಕ್ಷ ಎಸ್. ನಾರಾಯಣಪ್ಪ, ಉಪಾಧ್ಯಕ್ಷ ಬಿಎಂ. ಆನಂದ, ಕಾರ್ಯದರ್ಶಿ ವಿಜಯಕುಮಾರ್, ವಕೀಲ ರಮೇಶ್, ಸಂಗೀತಾ, ಸಿಬ್ಬಂದಿ ಸೋಮಶೇಖರ್, ಪಂಚಾಯಿತಿ ಕರವಸೂಲಿಗಾರ ನಾಗರಾಜ್ ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ