ಕನ್ನಡಪ್ರಭವಾರ್ತೆ ಬೆಂಗಳೂರು
ಟ್ಯಾಂಕರ್ ಮಾಫಿಯಾದಲ್ಲಿ ಬಿಬಿಎಂಪಿಯ ಮಾಜಿ ಸದಸ್ಯರು, ಶಾಸಕರ ಸಂಬಂಧಿ ಮತ್ತು ಶಾಸಕರ ಹಿಂದೆ ಮುಂದೆ ತಿರುಗುವವರೇ ಇದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪಿಸಿದ್ದಾರೆ,ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೆಲ್ಲವೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಕಂಡೂ ಕಾಣದಂತಿರುವುದು ಅನುಮಾನಕ್ಕೆ ಆಸ್ಪದವಾಗಿದೆ. ಮಾಫಿಯಾದಲ್ಲಿ ಶಿವಕುಮಾರ್ ಪಾತ್ರದ ಬಗ್ಗೆ ಶಂಕೆ ಮೂಡುತ್ತದೆ ಎಂದು ಆರೋಪಿಸಿದರು.
ಕಾವೇರಿ ನೀರಿಗೆ ಪರ್ಯಾಯವಾಗಿ ಬಿಡಬ್ಲ್ಯುಎಸ್‌ಎಸ್‌ಬಿ ಏನನ್ನೂ ಮಾಡಿಲ್ಲ. ಇಡೀ ಬೆಂಗಳೂರಿನಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ 108 ಬೋರ್‌ವೆಲ್‌ಗಳನ್ನು ಮಾತ್ರ ಹಾಕಿಸಿದೆ ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ. ಇದರರ್ಥ ಬಿಡಬ್ಲ್ಯುಎಸ್‌ಎಸ್‌ಬಿ ಬೆಂಗಳೂರಿಗೆ ಸಂಪೂರ್ಣವಾಗಿ ನೀರು ಸರಬರಾಜು ಮಾಡುವ ಕೆಲಸವನ್ನೇ ಮಾಡಿಲ್ಲ ಎಂದು ಕಿಡಿಕಾರಿದರು.ಕಾವೇರಿ ನೀರು ಬೆಂಗಳೂರಿನ ಎಲ್ಲಾ ಮನೆಗಳಿಗೂ ತಲುಪುತ್ತಿಲ್ಲ. ಬಿಬಿಎಂಪಿ ಕೂಡ 1,534 ಬೋರ್‌ವೆಲ್‌ಗಳನ್ನು ಕೊರೆಸಿದ್ದು, ಈ ಎರಡೂ ಸಂಸ್ಥೆಗಳು ಎಲ್ಲಾ ಮನೆಗಳಿಗೂ ನೀರು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಅನಧಿಕೃತ ಟ್ಯಾಂಕರ್ ಮಾಫಿಯಾದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಟ್ಯಾಂಕರ್ ನೀರು ಸರಬರಾಜು ಅನಧಿಕೃತವಾಗಿದ್ದು, ಇದಕ್ಕೆ ಕಾನೂನಿನಲ್ಲಿ ಅನುಮತಿಯೇ ಇಲ್ಲ. ಆದರೂ ಬೆಂಗಳೂರಿನಲ್ಲಿ ನೀರು ಸರಬರಾಜು ಮಾಫಿಯಾ ತೀವ್ರವಾಗಿದೆ. ಬೇಸಿಗೆ ಆರಂಭವಾಗುವ ಮುನ್ನವೇ ₹600 ಇರಬೇಕಿದ್ದ ಟ್ಯಾಂಕರ್ ನೀರಿನ ಬೆಲೆ ಮೂರು ಸಾವಿರ ರು.ವರೆಗೆ ಮುಟ್ಟಿದೆ ಎಂದರು.
ಕುಡಿಯುವ ನೀರಿದ್ದರೆ ಮಾತ್ರವೇ ಬ್ರಾಂಡ್ ಬೆಂಗಳೂರು ಮಾಡಲು ಸಾಧ್ಯ. ಸರ್ಕಾರ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಬೇಕು. ಉಚಿತವಾಗಿ ನೀರು ಕೊಡಲು ಸಾಧ್ಯವಾಗದಿದ್ದರೂ ಕಡಿಮೆ ಬೆಲೆಯಲ್ಲಿ ನೀರು ಕೊಡುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.ಬೆಂಗಳೂರು ನಗರಾಧ್ಯಕ್ಷ ಡಾ। ಸತೀಶ್, ನಗರದ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಉಪಸ್ಥಿತರಿದ್ದರು.ಸರ್ಕಾರವೇ ಒಂದು ಮೊಬೈಲ್ ಆಪ್ ಸಿದ್ದ ಮಾಡಿ ಟ್ಯಾಂಕರ್ ಬುಕ್ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ದೊಡ್ಡ ಜಗಳವೇ ನಡೆದರೂ ಅಚ್ಚರಿ ಇಲ್ಲ.
-ಮೋಹನ್ ದಾಸರಿ, ಆಪ್ ಸಂಘಟನಾ ಕಾರ್ಯದರ್ಶಿ.