ಸಮಾನತೆ ಸಾರುವ ಕನಕದಾಸರ ಕೀರ್ತನೆ

KannadaprabhaNewsNetwork | Published : Dec 1, 2023 12:45 AM

ಸಾರಾಂಶ

ಸಮಾನತೆ ಸಾರುವ ಕನಕದಾಸರ ಕೀರ್ತನೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕನಕದಾಸರು ದಾರ್ಶನಿಕ ಮಾತ್ರರಲ್ಲದೇ ಸಮಾಜ ಸುಧಾರಕರೂ ಆಗಿದ್ದರು. ಅವರ ಕೀರ್ತನೆಗಳಲ್ಲಿ ಸಮಾನತೆಯ ತತ್ವ ಅಡಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು. ಅವರು ನಗರದ ಶಿವಾನಂದ ಜೀನ್‌ನಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಹಮ್ಮಿಕೊಂಡ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕನದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಭಕ್ತಿ ಪರಂಪರೆ ಭಾರತ ಅಸ್ಮಿತೆಯ ಪ್ರತಿಕವಾಗಿದ್ದು, ಅನೇಕ ದಾರ್ಶನಿಕರು ಭಕ್ತಿ ಪರಂಪರೆಯ ಮೂಲಕ ಭಾರತದ ಏಕತೆಯನ್ನು ಗಟ್ಟಿಗೊಳಿಸಿದ್ದಾರೆ. ಅಂಥ ದಾಸಪರಂಪರೆಯಲ್ಲಿ ದಾಸಶ್ರೇಷ್ಠ ಕನಕದಾಸರು ಕೂಡ ಒಬ್ಬರು, ಅವರ ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕದ ಅನನ್ಯ ಅಂಶಗಳಾಗಿವೆ. ಸಂಗೀತ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ಕನಕದಾಸರು ನೀಡಿದ್ದಾರೆ. ಇಲ್ಲಿಯವರೆಗೆ ಕನಕದಾಸರ ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿದೆ. ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ. ಹರಿಭಕ್ತಿಸಾರ, ನರಸಿಂಹಸ್ತವ ಇವು ಅವರ ಐದು ಪ್ರಮುಖ ಕಾವ್ಯ ಕೃತಿಗಳಾಗಿವೆ ಎಂದರು. ಜ್ಞಾನಿಗಳು ಕೈಗೆತ್ತಿಕೊಳ್ಳುವ ಸಮಾಜ ಸುಧಾರಣೆಗೆ ಮೂಲ ಅವರ ಅಂತರಂಗದ ಬೆಳಕು. ಅದೇ ಅವರ ಶಕ್ತಿ. ಆಧ್ಯಾತ್ಮಿಕತೆಯೇ ಈ ಶಕ್ತಿಯ ಮೂಲಸತ್ತ್ವವಾಗಿದೆ. ವಚನಸಾಹಿತ್ಯ, ದಾಸಸಾಹಿತ್ಯ, ಜನಪದ ಸಾಹಿತ್ಯಗಳು ಕನ್ನಡ ಭಾಷೆಗೆ ಬಹುದೊಡ್ಡ ಶಕ್ತಿ ತುಂಬಿವೆ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾನತೆಯ ತತ್ವಸಾರಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಅವರ ಜೀವನದ ಆದರ್ಶ-ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಸಮಾರಂಭದಲ್ಲಿ ಬಿಜೆಪಿ ಮುಖಂಡ ಡಾ.ಎಂ.ಎಸ್.ದಡ್ಡೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೆಮಾದ್ರಿ, ನಗರಮಂಡಲ ಅಧ್ಯಕ್ಷ ಸದಾನಂದ ನಾರಾ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ಸರಸ್ವತಿ ಕುರಬರ, ಶೋಭಾರಾವ್, ಶಿವಲೀಲಾ ಪಟ್ಟಣಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ದ್ಯಾವಪ್ಪ ರಾಯಕುಂಪಿ, ಶಿವಾನಂದ ಟವಳಿ, ಗುಂಡೂರಾವ ಶಿಂಧೆ, ಬಸವರಾಜ ಅವರಾದಿ, ವೀರಣ್ಣ ಹಳೆಗೌಡರ, ಚಂದ್ರು ಸರೂರ, ಪರಮೇಶ್ವರ ಮಧೂರ, ವೆಂಕಟೇಶ ರಾವ್, ಪ್ರಕಾಶ ಹಂಡಿ, ಶಿವು ಜಾಲಗಾರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ ಸೇರಿ ಹಲವರು ಭಾಗವಹಿಸಿದ್ದರು.

Share this article