ಯಲ್ಲಾಪುರ: ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಮತ್ತು ಆಡಳಿತ ವ್ಯವಸ್ಥೆಯ ಹಸ್ತಕ್ಷೇಪ ಮಿತಿ ಮೀರಿದೆ. ಸರ್ಕಾರ ಯಾವುದೇ ತಿದ್ದುಪಡಿ ತರುವುದರಿಂದ ಮತ್ತಷ್ಟು ಸರಳೀಕರಣ ಆಗಬೇಕೇ ವಿನಃ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರಬಾರದು ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ದ್ವಿದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ''ದ್ವಿದಶಮಾನ ಯಾನ'' ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಯಾವುದೇ ಆರ್ಥಿಕ ಸಂಸ್ಥೆಗೆ ಆರ್ಥಿಕ ಶಿಸ್ತು ಇರಲೇಬೇಕು ಮತ್ತು ಧರ್ಮದ ಮಾರ್ಗದಲ್ಲಿ ಆರ್ಥಿಕ ಶುಚಿತ್ವದಡಿಯಲ್ಲಿ ನಡೆದುಕೊಂಡು ಹೋಗಬೇಕು. ಅಂದಾಗ ಮಾತ್ರ ಆರ್ಥಿಕ ಕ್ಷೇತ್ರ ಬಲಗೊಳ್ಳುತ್ತದೆ. ಆ ದೃಷ್ಟಿಯಿಂದ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಹೆಚ್ಚು ಗಟ್ಟಿಯಾಗಿದೆ ಎಂದು ಹೇಳಿದರು.ಭಾರತ ದೇಶ ಜಗತ್ತಿನ ೪ನೆಯ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಅವರು ತೆಗೆದುಕೊಂಡ ನೀತಿ ಕಾರಣ. ಅಲ್ಲದೇ ಅವರು ವಿಶ್ವನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ರಾಜ್ಯದಲ್ಲೇ ಉ.ಕ., ದ.ಕ., ಶಿವಮೊಗ್ಗ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಿ ನಿಂತಿದೆ. ಉಳಿದ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಅಸ್ತಿತ್ವವನ್ನೇ ಕಳೆದುಕೊಂಡಿದೆ. ನಾನು ಸಚಿವನಿದ್ದಾಗ ಹಾವೇರಿ ಜಿಲ್ಲೆಯ ಸಹಕಾರಿ ಕ್ಷೇತ್ರದ ದುಸ್ಥಿತಿಯ ಅರಿವಾಗಿದೆ. ಇದರಿಂದ ರೈತರು ಸ್ವಾವಲಂಬಿಗಳಾಗಲು ಸಾಧ್ಯವಾಗಿಲ್ಲ. ಸಹಕಾರಿ ಸಂಘ ಮತ್ತು ರೈತರು ಪರಸ್ಪರ ಕೂಡಿ ಸಹಕರಿಸಿಕೊಂಡಾಗ ಮಾತ್ರ ರೈತರು ಬದುಕುತ್ತಾರೆ. ಸಹಕಾರಿ ಸಂಸ್ಥೆ ಬೆಳೆಯುತ್ತದೆ. ಸೌಹಾರ್ದ ಸಹಕಾರಿಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಹಾಗಂತ ಸ್ವೇಚ್ಛಾಚಾರವಾಗಬಾರದು. ರಾಷ್ಟ್ರೀಕೃತ ಬ್ಯಾಂಕಗಳ ಹಾಗೇ ಜನರನ್ನು ಶೋಷಿಸುವ ವ್ಯವಸ್ಥೆ ಬರಬಾರದು ಎಂದರು.
ಶಿರಸಿಯ ಟಿ.ಎಸ್.ಎಸ್.ನ ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟೀಮನೆ ಮಾತನಾಡಿ, ಸಹಕಾರಿ ಕ್ಷೇತ್ರಗಳ ಮೇಲೆ ಸರ್ಕಾರ ಸವಾರಿ ಪ್ರಾರಂಭಿಸಿದರೆ, ಎಲ್ಲ ಸಹಕಾರಿಗಳು ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಬ್ಯಾಂಕುಗಳು ಜನರ ಹತ್ತಿರವಿದ್ದು ಸ್ಪಂದಿಸುವ ಜತೆಗೆ ಕಡಿಮೆ ಬಡ್ಡಿಯಲ್ಲಿ ಹೆಚ್ಚಿನ ಲಾಭ ಪಡೆಯುವುದಕ್ಕೆ ಸಾಧ್ಯ. ಸರ್ಕಾರ ಕಾನೂನಿಗೆ ತದ್ದುಪಡಿ ತರುತ್ತಿದೆ ಎಂದರು. ಸಹಕಾರಿ ರತ್ನ ಪುರಸ್ಕೃತ ಆರ್.ಎನ್. ಹೆಗಡೆ ಗೋರ್ಸಗದ್ದೆ ಸನ್ಮಾನ ಸ್ವೀಕರಿಸಿ, ಸಹಕಾರಿ ಸಂಘದಲ್ಲಿ ವ್ಯವಹಾರ ನಡೆಸುವವರು ಸಹಕಾರಿ ಸಂಘದ ಬೆಳವಣಿಗೆಯ ಪ್ರತಿ ಹಂತವನ್ನು ಗಮನಿಸುತ್ತಿರಬೇಕು. ಜನರ ನಂಬಿಕೆಯನ್ನು ಸಹಕಾರಿ ಸಂಸ್ಥೆಗಳು ಉಳಿಸಿಕೊಳ್ಳಬೇಕು ಎಂದರು. ಇನ್ನೊಬ್ಬ ಸಹಕಾರಿ ರತ್ನ ಪುರಸ್ಕೃತ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, ಸೌಹಾರ್ದ ಕ್ಷೇತ್ರದಲ್ಲಿ ಉತ್ತಮ ಸಾಧನೆ ನಡೆಯುತ್ತಿದೆ. ಆದರೆ, ಕೆಲವು ಸಂಘಗಳಲ್ಲಿ ಅವ್ಯವಹಾರಗಳು ನಡೆದ ಘಟನೆಯನ್ನು ಕಾಣುವ ಸ್ಥಿತಿ ಬಂದಿದೆ. ಸಹಕಾರಿ ಸಂಘದಲ್ಲಿ ಮಾತ್ರ ತಮ್ಮ ಗ್ರಾಹಕರ ಬಗೆಗೆ ಮಾನವೀಯತೆ ಇರಲು ಸಾಧ್ಯ ಎಂದರು. ಜಿ.ಎಸ್.ಟಿ. ಇಲಾಖೆಯ ಆಯುಕ್ತೆ ಸಹನಾ ಬಾಳ್ಕಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಚೇತ್ ಬಾಳ್ಕಲ್ ಸನ್ಮಾನ ಸ್ವೀಕರಿಸಿ, ಸಾಂದರ್ಭಿಕ ಮಾತನಾಡಿದರು. ಯು.ಕೆ. ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಉಪಸ್ಥಿತರಿದ್ದರು. ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ವನರಾಗ ಶರ್ಮ ಸಂಚಿಕೆಯ ಕುರಿತಾಗಿ ಮಾಹಿತಿ ನೀಡಿದರು. ಬ್ಯಾಂಕಿನ ಅಧ್ಯಕ್ಷ ಜಿ.ಎನ್. ಹೆಗಡೆ ಮತ್ತು ಮಡದಿ ಯಶೋದಾ ಹೆಗಡೆ ಹಾಗೂ ಅವರ ಕುಟುಂಬದವರನ್ನು ಆಡಳಿತ ಮಂಡಳಿ ಮತ್ತು ಸಹಕಾರಿ ಸಿಬ್ಬಂದಿ ಸನ್ಮಾನಿಸಿದರು.ಸುನೀತಾ ಭಟ್ಟ ಪ್ರಾರ್ಥಿಸಿದರು. ಸಹಕಾರಿಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಕಾರಿಯ ನಿರ್ದೇಶಕ ಬಳಗದ ಜಿ.ಕೆ. ಹೆಗಡೆ ಮತ್ತು ಕೆ.ಎಸ್. ಭಟ್ಟ ನಿರ್ವಹಿಸಿದರು. ಉಪಾಧ್ಯಕ್ಷ ಎಸ್.ಎಸ್. ಭಟ್ಟ ವಂದಿಸಿದರು.