ಉಡುಪಿ ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನಲ್ಲಿ ಬೈಬಲ್‌ಗಳ ಪ್ರದರ್ಶನ

KannadaprabhaNewsNetwork | Published : Feb 19, 2024 1:40 AM

ಸಾರಾಂಶ

ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಸಭಾಂಗಣದ ಮಧ್ಯಭಾಗದಲ್ಲಿ ಇರಿಸಿ ಹಾರಾರ್ಪಣೆಗೈದು ಪ್ರದರ್ಶನದ ಆವರಣವನ್ನು ಪವಿತ್ರ ಜಲ ಪ್ರೋಕ್ಷಣ ಮಾಡುವುದರ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿಗೆ ಸಮೀಪದ ತೊಟ್ಟಂನ ಸಂತ ಅನ್ನಮ್ಮ ದೇವಾಲಯದ ಇದ ಬೈಬಲ್ ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಸಾಧನ ಆಯೋಗ ಜಂಟಿ ಆಯೋಜಕತ್ವದಲ್ಲಿ ಬೈಬಲ್‌ಗಳ ಪ್ರದರ್ಶನ ಭಾನುವಾರ ಚರ್ಚಿನ ಸಭಾಂಗಣದಲ್ಲಿ ಜರುಗಿತು.

ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಸಭಾಂಗಣದ ಮಧ್ಯಭಾಗದಲ್ಲಿ ಇರಿಸಿ ಹಾರಾರ್ಪಣೆಗೈದು ಪ್ರದರ್ಶನದ ಆವರಣವನ್ನು ಪವಿತ್ರ ಜಲ ಪ್ರೋಕ್ಷಣ ಮಾಡುವುದರ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಮಾತನಾಡಿ, ಕ್ರೈಸ್ತ ಸಮುದಾಯದ ಆಧ್ಯಾತ್ಮಿಕ ಜೀವನಕ್ಕೆ ಇರುವ ಏಕೈಕ ಜಿಪಿಎಸ್ ಅಂದರೆ ಅದು ಪವಿತ್ರ ಬೈಬಲ್ ಗ್ರಂಥ. ಜೀವನದಲ್ಲಿ ಎಡವಿದಾಗ, ನೋವಿನ ಸಂದರ್ಭದಲ್ಲಿ ಮಗದೊಮ್ಮೆ ದೇವರ ಬಳಿ ಬರಲು ಸುಲಭದ ದಾರಿಯೇ ಬೈಬಲ್ ಗ್ರಂಥ. ಬೈಬಲ್ ಪ್ರದರ್ಶನದಲ್ಲಿ ಚರ್ಚಿನ ಮಕ್ಕಳು ಮತ್ತು ಹಿರಿಯರಿಗೆ ಮನೋರಂಜನೆಯ ಮೂಲಕ ಶಿಕ್ಷಣ ನೀಡುವು ಉದ್ದೇಶವಾಗಿದೆ. ನಮ್ಮ ಧರ್ಮದ ಪವಿತ್ರ ಗ್ರಂಥದ ಬಗ್ಗೆ ಜ್ಞಾನ ಪಡೆಯುವುದರೊಂದಿಗೆ ನಾವು ಇತರ ಧರ್ಮದ ಪವಿತ್ರ ಗ್ರಂಥಗಳನ್ನು ಕೂಡ ಒದುವ ಹವ್ಯಾಸ ಹೊಂದಿರಬೇಕು. ಆಗ ನಾವು ಇತರ ಧರ್ಮವನ್ನು ಗೌರವಿಸಲು ಸಹಕಾರಿಯಾಗಲಿದೆ. ಪ್ರತಿಯೊಂದು ಧರ್ಮದ ಪವಿತ್ರ ಗ್ರಂಥಗಳ ಸಾರಾಂಶ ದೇವರನ್ನು ಪ್ರೀತಿಸು ಮತ್ತು ನಿನ್ನ ನೆರೆ ಹೊರೆಯವರನ್ನು ಕೂಡ ಪ್ರೀತಿಸಿ ಎನ್ನುವುದಾಗಿದೆ ಎಂದರು.

ಚರ್ಚಿನ ತರಬೇತಿ ಗುರು ವಂ.ಸ್ಟೀಫನ್ ರೊಡ್ರಿಗಸ್ ಮಾತನಾಡಿ, ಈ ಪ್ರದರ್ಶನದಲ್ಲಿ ವಿವಿಧ ಭಾಷೆಗಳ ಮತ್ತು ದೇಶಗಳ ಸುಮಾರು 90 ಪವಿತ್ರ ಬೈಬಲ್ ಗ್ರಂಥಗಳನ್ನು ಇಡಲಾಗಿದೆ. ಇದಲ್ಲದೆ ಬೈಬಲ್ ನಲ್ಲಿರುವ ವಿವಿಧ ಕಥೆಗಳನ್ನು ಆಧರಿಸಿ ಅದರ ಮಾದರಿಗಳ ರಚನೆ ಮಾಡಲಾಗಿದ್ದು ಪೋಸ್ಟರ್ ಪ್ರದರ್ಶನ, ಕ್ವಿಜ್ ಕೂಡ ಆಯೋಜಿಸಲಾಗಿದೆ ಎಂದರು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ, ಕಾರ್ಯದರ್ಶಿ, 20 ಆಯೋಗಗಳ ಸಂಯೋಜಕರು, ಸ್ಥಳೀಯ ಕಾನ್ವೆಂಟ್ ನ ಧರ್ಮಭಗಿನಿಯರು, ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಸಾಧನ ಆಯೋಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article