ರಾಮನಗರ: ಉಪಮುಖ್ಯಮಂತ್ರಿಗಳು ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ನಿರಾಸೆ ತಂದಿದೆ.
ಕಳೆದ ಸಾಲಿನಲ್ಲಿ ಘೋಷಣೆಯಾದ ಹಾಗೂ ಪ್ರಗತಿಯಲ್ಲಿರುವ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಮರು ಪ್ರಸ್ತಾಪ ಮಾಡಲಾಗಿದೆ. ಕೆರೆ ತುಂಬಿಸುವ ಯೋಜನೆ ಬಿಟ್ಟರೆ ಜಿಲ್ಲೆಗೆ ವಿಶೇಷ ಯೋಜನೆಗಳಾಗಲಿ, ಅನುದಾನವಾಗಲಿ ಘೋಷಣೆಯಾಗಿಲ್ಲ. ಆದರೆ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ರೇಷ್ಮೆ ಮತ್ತು ಹೈನೋದ್ಯಮಕ್ಕೆ ಒಂದಷ್ಟು ನೆರವಾಗುವ ಯೋಜನೆಗಳ ಲಾಭ ಸಿಗಲಿದೆ.
ಪ್ರತಿ ಬಜೆಟ್ ನಲ್ಲಿ ಉಲ್ಲೇಖವಾಗುವಂತೆ ಈ ಬಾರಿಯೂ ಮೇಕೆದಾಟು ಜಲಾಶಯ ನಿರ್ಮಾಣ ಪ್ರಸ್ತಾಪವಾಗಿದೆ. ಈ ಯೋಜನೆ ಪೂರ್ವ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ ಸಕ್ಷಮ ಪ್ರಾಕಾರದ ಅನುಮತಿ ದೊರೆತ ನಂತರ ಅನುಷ್ಠಾನ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ, ಅನುದಾನ ಮೀಸಲಿಡದಿರುವುದನ್ನು ನೋಡಿದರೆ ಮೇಕೆದಾಟು ಯೋಜನೆ ಕೇವಲ ಘೋಷಣೆಗೆ ಸೀಮಿತವಾದಂತಿದೆ.ರಾಮನಗರಕ್ಕೆ ಮತ್ತು ಉಲ್ಲಾಳಕ್ಕೆ ಕರ್ನಾಟಕ ಕುಡಿಯುವ ನೀರು ಸರಬರಾಜು ಮಂಡಳಿಯಿಂದ 705 ಕೋಟ ವೆಚ್ಚದ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಆದರೆ, ರಾಮನಗರದಲ್ಲಿ ಈಗಾಗಲೇ 457 ಕೋಟಿ ವೆಚ್ಚದ ನೆಟ್ಕಲ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಲೋಕಾರ್ಪಣೆ ಹಂತಕ್ಕೆ ಬಂದಿದೆ. ಈಗ ನೂತನವಾಗಿ ಘೋಷಣೆಯಾಗಿರುವ ಯೋಜನೆ ಯಾವುದು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ.
ರೇಷ್ಮೆ ಬೆಳೆಗಾರರಿಗೆ ಶಕ್ತಿ ತುಂಬುವ ಪ್ರಯತ್ನ:
ಈಡೇರದ ಹತ್ತಾರು ನಿರೀಕ್ಷೆ:
ಮೇಕೆದಾಟು ಯೋಜನೆಗೆ ಅನುದಾನ ಮೀಸಲಿಡುವುದು, ಮೂಲ ಸೌಕರ್ಯಗಳಿಗೆ ವಿಶೇಷ ಅನುದಾನ, ಸ್ಥಳೀಯ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದು, ಬಿಡದಿ ಮತ್ತು ಹಾರೋಹಳ್ಳಿವರೆಗೆ ಮೆಟ್ರೋ ವಿಸ್ತರಣೆ, ನಿವೇಶನ, ವಸತಿ ಸೌಲಭ್ಯಗಳನ್ನು ಒದಗಿಸುವುದು, ಮಂಚನಬೆಲೆ, ಕಣ್ವ ಜಲಾಶಯಗಳ ಬಳಿ ಪ್ರವಾಸೋದ್ಯಮ ಅಭಿವೃದ್ಧಿ, ಬೊಂಬೆ ಉದ್ಯಮಕ್ಕೆ ಪ್ರೋತ್ಸಾಹ ಸೇರಿದಂತೆ ಹತ್ತಾರು ನಿರೀಕ್ಷೆಗಳು ಈ ಬಾರಿಯ ಬಜೆಟ್‌ನಲ್ಲಿ ಈಡೇರಿಲ್ಲ.
ಹಳೆ ಯೋಜನೆಗಳ ಮರು ಮುದ್ರಣ
ಕಳೆದ ಬಜೆಟ್ ನಲ್ಲಿಯೇ ಕನಕಪುರ ತಾಲೂಕಿನ ಗಳಗಾಪುರ ಏತನೀರಾವರಿ ಯೋಜನೆ, ಶ್ರೀರಂಗ ಕುಡಿಯುವ ನೀರಿನ ಯೋಜನೆ ಹಾಗೂ ದೊಡ್ಡಾಲಹಳ್ಳಿ ಹನಿನೀರಾವರಿ ಯೋಜನೆಗಳು ಘೋಷಣೆಯಾಗಿದ್ದವು. ಈ ಬಾರಿ ಆಯವ್ಯಯದಲ್ಲಿ ಮತ್ತೆ ಮರು ಮುದ್ರಣವಾಗಿದೆ.
ರಾಜ್ಯ ಬಜೆಟ್ - ರಾಮನಗರ ಜಿಲ್ಲೆಗೆ ಸಿಕ್ಕಿದ್ದೇನು ?
1.ರಾಮನಗರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ2.ಮೇಕೆದಾಟು ಯೋಜನೆ ಪೂರ್ವ ಸಿದ್ದತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೆ ಯೋಜನೆ ಅನುಷ್ಠಾನ.
3.ಮಾಗಡಿ ತಾಲೂಕು ಆಸ್ಪತ್ರೆಯ ನವೀಕರಣ. ಮಾಗಡಿ ಸೇರಿದಂತೆ 2 ಜಿಲ್ಲಾಸ್ಪತ್ರೆ ಮತ್ತು 7 ತಾಲೂಕು ಆಸ್ಪತ್ರೆಗಳಿಗೆ ಒಟ್ಟು 650 ಕೋಟಿ ರು.ಅನುದಾನ4.ರಾಮನಗರ ಮತ್ತು ಉಲ್ಲಾಳಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 705 ಕೋಟಿ ರು.
5.ರಾಮನಗರ ಮತ್ತು ಶಿಡ್ಲಘಟ್ಟದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗಳ ಮೊದಲನೆ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳಿಗೆ 250 ಕೋಟಿ ರು.ಮೀಸಲು. ರೇಷ್ಮೆಗೂಡುಗಳಿಗೆ ಸೂಕ್ತ ಬೆಲೆ ದೊರಕಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಸಾಧಿಸುವ ದೃಷ್ಟಿಯಿಂದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣಿಕರಣದ ಕಾರ್ಯಕ್ಕಾಗಿ ಅಸ್ಸೇಯರ್‌ಗಳ ನಿಯೋಜನೆ. ರೇಷ್ಮೆಬೆಳೆ ವಿಸ್ತರಿಸಲು ರೇಷ್ಮೆಗೂಡಿನ ಪೂರ್ವ ಮತ್ತು ನಂತರದ ಚಟುವಟಿಕೆಗಳನ್ನು ಪ್ರೋತ್ಸಹಿಸಲು ರೇಷ್ಮೆ ಅಭಿವೃದ್ದಿ ಯೋಜನೆಯಡಿಯಲ್ಲಿ 55 ಕೋಟಿ ಅನುದಾನ ಮೀಸಲು.6.ನೂತನವಾಗಿ ಘೋಷಣೆಯಾಗಿರುವ ಹಾರೋಹಳ್ಳಿ ತಾಲೂಕುನಲ್ಲಿ ಪ್ರಜಾಸೌಧ ನಿರ್ಮಾಣ.