ಕಾರಿನಡಿ ಸ್ಫೋಟ: ಪತ್ರಕರ್ತರು ಪಾರು

KannadaprabhaNewsNetwork | Published : Jul 3, 2024 12:24 AM

ಸಾರಾಂಶ

ಘಟನೆಯಿಂದ ವಾಹನ ಮತ್ತು ಅದರಲ್ಲಿದ್ದ ಪತ್ರಕರ್ತರಿಗೆ ಯಾವುದೇ ಹಾನಿಯಾಗಿಲ್ಲ. ಕೂಡಲೇ ಸ್ಥಳಕ್ಕೆ ಜೋಯಿಡಾ ಠಾಣೆಯ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.

ಜೋಯಿಡಾ: ತಾಲೂಕಿನ ಹುಡಸಾ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ ಬಳಿ ಪತ್ರಕರ್ತರು ತೆರಳುತ್ತಿದ್ದ ಕಾರಿನ ಕೆಳಗೆ ಮಂಗಳವಾರ ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್‌ ಘಟನೆಯಿಂದ ಯಾವುದೇ ಅವಘಡವಾಗಿಲ್ಲ.

ಜೋಯಿಡಾದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಪತ್ರಕರ್ತರಾದ ಸಂದೇಶ ದೇಸಾಯಿ ಹಾಗೂ ಹರೀಶ್ ಭಟ್ಟ, ಟಿ.ಕೆ. ದೇಸಾಯಿ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆಗ ಹುಡಸಾ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ ಬಳಿ ವಾಹನದ ಕೆಳಗೆ ಸಣ್ಣ ಪ್ರಮಾಣದಲ್ಲಿ ಸ್ಫೋಟಗೊಂಡಿದೆ. ಘಟನೆಯಿಂದ ವಾಹನ ಮತ್ತು ಅದರಲ್ಲಿದ್ದ ಪತ್ರಕರ್ತರಿಗೆ ಯಾವುದೇ ಹಾನಿಯಾಗಿಲ್ಲ. ಕೂಡಲೇ ಸ್ಥಳಕ್ಕೆ ಜೋಯಿಡಾ ಠಾಣೆಯ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.

ನಾಡಬಾಂಬ್‌ ಶಂಕೆ: ಈ ಭಾಗದಲ್ಲಿ ಪ್ರಾಣಿಬೇಟೆಗೆ ನಾಡಬಾಂಬ್ ಬಳಸುತ್ತಾರೆ ಎನ್ನಲಾಗುತ್ತಿದ್ದು, ಪ್ರಾಣಿಗಳ ಬೇಟೆಗಾಗಿ ಯಾರೋ ನಾಡಬಾಂಬ್ ತೆಗೆದುಕೊಂಡು ಹೋಗುವಾಗ ರಸ್ತೆಯಲ್ಲಿ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಇಡಲಾಗಿದೆಯೇ ಎಂಬುದು ತನಿಖೆಯ ನಂತರ ತಿಳಿದು ಬರಬೇಕಿದೆ‌. ಘಟನೆ ಕುರಿತು ಜೋಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಲೂಕಿನಲ್ಲಿ ನಾಡಬಾಂಬ್ ಬಳಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ನಾಡಬಾಂಬ್ ತಯಾರಿಸುವವರ ಮತ್ತು ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಅಮಾಯಕ ಪ್ರಾಣಿಗಳ ಮತ್ತು ಜನರ ಜೀವ ರಕ್ಷಣೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸೂಕ್ತ ತನಿಖೆ ನಡೆಸಿ: ಎಸ್ಪಿಯವರು ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಅದೇ ರೀತಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ತಿಳಿಸಿದರು.

Share this article