ಬೆಂಗಳೂರು : ನಗರದ ಜನನಿಬಿಡ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್‌ನಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕ ವಸ್ತು ಪತ್ತೆಯಾಗಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆಯಿತು.
ಖಾಸಗಿ ಬಸ್ ನಿಲ್ದಾಣದ ಶೌಚಾಲಯದ ಬಳಿ ಬ್ಯಾಗ್ ಅನ್ನು ಬಿಟ್ಟು ಅಪರಿಚಿತ ಹೋದ ಬಗ್ಗೆ ಪೊಲೀಸರಿಗೆ ಬಿಹಾರ ಮೂಲದ ಕಾರ್ಮಿಕ ದೀಪಕ್ ತಿಳಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತೆರಳಿ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಜಿಲೆಟಿನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಬಿಎಂಟಿಸಿ ಬಸ್ ನಿಲ್ದಾಣದ ಸುತ್ತಲ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ಆದರೆ ಬೆಳಗ್ಗೆ ಪರಿಶೀಲನೆ ವೇಳೆ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ. ಮಧ್ಯಾಹ್ನ 1.15 ಗಂಟೆಗೆ ಭದ್ರತಾ ಸಿಬ್ಬಂದಿ ಪ್ರಭಾವತಿ ಹಾಗೂ ರಾಜು ಅವರು, ಖಾಸಗಿ ಬಸ್‌ನಿಲ್ದಾಣದ ಶೌಚಾಲಯದ ಬಳಿ ಒಂದು ಚೀಲವನ್ನು ಬಿಟ್ಟು ಅಪರಿಚಿತ ಹೋಗಿದ್ದಾನೆ ಎಂದು ಹೇಳಿದ್ದರು. ಬಳಿಕ ಆ ಚೀಲವನ್ನು ತಂದು ಬಿಎಂಟಿಸಿ ಕಚೇರಿಗೆ ಸಿಬ್ಬಂದಿ ನೀಡಿದ್ದರು. ಆ ಚೀಲದಲ್ಲಿ ಸ್ಫೋಟಕ ವಸ್ತುಗಳಿರಬಹುದು ಎಂಬ ಶಂಕೆ ಮೂಡಿತು. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದೆವು. ಪೊಲೀಸರು ಬ್ಯಾಗ್ ಪರಿಶೀಲಿಸಿದಾಗ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕ ಮಲ್ಲಪ್ಪ.ಆರ್.ಕಟ್ಟಿಮನಿ ಹೇಳಿದ್ದಾರೆ.
ಕಲಾಸಿಪಾಳ್ಯ ಬಸ್ ನಿಲ್ದಾಣ ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು ಸಾರ್ವಜನಿಕರ ಪ್ರಾಣಕ್ಕೆ ಮತ್ತು ಆಸ್ತಿಗೆ ಹಾನಿಯನ್ನುಂಟು ಮಾಡುವ ದುರುದ್ದೇಶದಿಂದ ಸ್ಫೋಟಕ ವಸ್ತುಗಳನ್ನು ಇಟ್ಟು ಹೋಗಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಅದರನ್ವಯ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಡೆ ಸ್ಫೋಟಕ್ಕೆ ಬಳಸುವ ವಸ್ತುಗಳು: ಡಿಸಿಪಿ ಶಂಕೆ
ಕಲಾಸಿಪಾಳ್ಯದ ಬಸ್ ನಿಲ್ದಾಣದಲ್ಲಿ ಉದ್ದೇಶಪೂರ್ವಕವಾಗಿ ಸ್ಫೋಟಕ ವಸ್ತುಗಳು ಇಟ್ಟಿರುವ ಸಾಧ್ಯತೆಗಳಿಲ್ಲ. ಒಂದು ವೇಳೆ ಉದ್ದೇಶವಿದ್ದರೆ ಸ್ಫೋಟಕ ವಸ್ತುಗಳನ್ನು ಜೋಡಿಸಬೇಕಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಸ್ಫೋಟಕ ವಸ್ತುಗಳು ಬಿಡಿಬಿಡಿಯಾಗಿದ್ದವು. ಕಲ್ಲು ಕ್ವಾರಿಗಳಲ್ಲಿ ಬಂಡೆಗಳನ್ನು ಸಿಡಿಸಲು ಬಳಸುವ ಸ್ಫೋಟಕ ವಸ್ತುಗಳಂತೆ ಕಾಣುತ್ತಿವೆ. ಕಚ್ಚಾ ವಸ್ತುಗಳಂತೆ ತಂದು ಬಿಟ್ಟು ಹೋಗಿದ್ದಾರೆ. ಬಿಎಂಟಿಸಿ ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿ ಸಹ ಖಾಕಿ ಸಮವಸ್ತ್ರ ಧರಿಸುತ್ತಾರೆ. ಹೀಗಾಗಿ ಬಸ್ ನಿಲ್ದಾಣದಲ್ಲಿ ಆ ಸಿಬ್ಬಂದಿ ನೋಡಿ ಸ್ಫೋಟಕ ವಸ್ತುಗಳನ್ನು ಬ್ಯಾಗ್‌ನಲ್ಲಿ ತಂದ ಅಪರಿಚಿತ ವ್ಯಕ್ತಿಗೆ ಭಯವಾಗಿರಬಹುದು. ಆತನ ಪತ್ತೆಗೆ ತನಿಖೆ ನಡೆದಿದೆ ಎಂದು ಡಿಸಿಪಿ ತಿಳಿಸಿದ್ದಾರೆ.