ಕನ್ನಡಪ್ರಭ ವಾರ್ತೆ ಮಂಗಳೂರು
ಬಂದರು ಪ್ರದೇಶ ಮಂಗಳೂರಿನಿಂದ ವಿದೇಶಗಳಿಗೆ ವಾರ್ಷಿಕ 47 ಸಾವಿರ ಕೋಟಿ ರು. ಮೌಲ್ಯದ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ 44 ಸಾವಿರ ಕೋಟಿ ರು.ಗಳಷ್ಟು ಉತ್ಪನ್ನಗಳು ಎಂಆರ್‌ಪಿಎಲ್ ಪಾಲಿಗೆ ಸೇರಿದೆ. ಇನ್ನಷ್ಟು ಉತ್ಪನ್ನಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಮಂಗಳೂರಿನ ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಹೇಳಿದ್ದಾರೆ.ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ(ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ(ಕಾಸಿಯಾ) ಸಹಯೋಗದಲ್ಲಿ ‘ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು(ರ್‍ಯಾಂಪ್)’ ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್ಇಡಿ ಹಾಗೂ ರಫ್ತು ಕುರಿತು ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರಿನಿಂದ ವಿದೇಶಗಳಿಗೆ ಮೀನು, ಗೋಡಂಬಿ, ಸೆಂಟೆಡ್ ಕ್ಯಾಂಡಲ್, ಚಾಕಲೇಟ್, ಎಂಜಿನಿಯರಿಂಗ್ ಮಿಷನರಿ, ಕಾರ್ಡಲೈಟ್ ಉತ್ಪನ್ನಗಳು, ಅಡಕೆ ಹಾಳೆಗಳು ರಫ್ತುಗೊಳ್ಳುತ್ತಿವೆ ಎಂದರು.ಹೊಸ ರಫ್ತುದಾರರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಮಾರ್ಚ್ 24ರಿಂದ 29ರ ವರೆಗೆ ರಾಜ್ಯದಲ್ಲೇ ಎರಡೇ ದೊಡ್ಡ ರಫ್ತು ನಿರ್ವಹಣಾ ಅಭಿವೃದ್ಧಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಯೆಯ್ಯಾಡಿಯ ಸಣ್ಣ ಕೈಗಾರಿಕಾ ಸಂಘದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಪ್ರತ್ಯೇಕ ಪ್ರವೇಶ ಶುಲ್ಕವಿದ್ದು, ಎಂಎಸ್‌ಎಂಇ(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) ಫಲಾನುಭವಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ವಿಟಿಪಿಸಿ ಮಂಗಳೂರು ವಿಭಾಗದ ಉಪ ನಿರ್ದೇಶಕ ಮಂಜುನಾಥ ಹೆಗಡೆ ಮಾತನಾಡಿ, ವಿದೇಶಿ ರಫ್ತಿನಲ್ಲಿ ಕರ್ನಾಟಕ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಯಂತ್ರಗಳ ರಫ್ತಿನಲ್ಲಿ ನಾಲ್ಕನೇ ಸ್ಥಾನ ಇದೆ. ಮಂಗಳೂರಿನಿಂದ ಯುಎಇ, ನೆದರ್‌ಲ್ಯಾಂಡ್, ಮಲೇಶಿಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಆಸ್ಟ್ರೇಲಿಯಾ ದೇಶಗಳಿಗೆ ಉತ್ಪನ್ನಗಳು ರಫ್ತು ಆಗುತ್ತಿವೆ ಎಂದರು.ದೇಶದ ಏಳ್ಗೆಗೆ ಎಂಎಸ್‌ಎಂಇ ಕೊಡುಗೆ:
ಕಾರ್ಯಾಗಾರ ಉದ್ಘಾಟಿಸಿದ ಎಂಎಸ್‌ಎಂಇ ಸೌಲಭ್ಯ ಕಚೇರಿಯ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರೆಟಿಸ್ ಮಾತನಾಡಿ, ದೇಶದ ಜಿಡಿಪಿ ಮತ್ತು ರಫ್ತಿಗೆ ಎಂಎಸ್‌ಎಂಇಗಳ ಕೊಡುಗೆ ಮಹತ್ತರವಾದ್ದು. ಇಷ್ಟಾದರೂ ಇವು ಸಮಸ್ಯೆಗಳಿಂದ ಮುಕ್ತಗೊಂಡಿಲ್ಲ. ಕನಿಷ್ಠ ಬಂಡವಾಳ ತೊಡಗಿಸಿ ಗರಿಷ್ಠ ಉತ್ಪಾದನೆ ಮಾಡುತ್ತಿದ್ದಾರೆ. ಇಷ್ಟಾದರೂ ಇವರಿಗೆ ಮಾರುಕಟ್ಟೆ ಸಮಸ್ಯೆ ಹಾಗೂ ವೃತ್ತಿ ನೈಪುಣ್ಯದ ಕೊರತೆ ಕಾಡುತ್ತಿದೆ. ಸರ್ಕಾರಗಳ ನಿಯಮಗಳೂ ಪರಿಣಾಮವನ್ನು ಉಂಟು ಮಾಡುತ್ತಿವೆ ಎಂದರು.ಮಂಗಳೂರು ಕೆನರಾ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂಜಯ ಕುಮಾರ್ ಸಿಂಗ್ ಮಾತನಾಡಿ, ದೇಶದ ಶೇ.45 ಜಿಡಿಪಿ(ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್) ನಲ್ಲಿ ಎಂಎಸ್‌ಎಂಇ ಕೊಡುಗೆ ಇದೆ. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕ್‌ಗಳು ನೆರವು ನೀಡುತ್ತಿವೆ. ಎಂಎಸ್‌ಎಂಇಗಳಿಗೆ 4 ಸಾವಿರ ಕೋಟಿ ರು.ಗಳ ನೆರವನ್ನು ಬ್ಯಾಂಕ್‌ಗಳು ನೀಡಿವೆ. ಕೆನರಾ ಜಿಎಸ್‌ಟಿ ಸ್ಕೀಮ್‌ನಡಿ ಶೇ.25ರ ವರೆಗೆ ಜಿಎಸ್‌ಟಿ ಪಾವತಿದಾರರಿಗೂ ಹಣಕಾಸು ನೆರವು ಒದಗಿಸಲಾಗುವುದು. ವೈದ್ಯರಿಗೆ ಹಾಗೂ ಉದ್ದಿಮೆದಾರರಿಗೆ ಇದು ಜನಪ್ರಿಯ ಯೋಜನೆಯಾಗಿದೆ ಎಂದರು.
ಮಂಗಳೂರಿನ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶಾಲ್ ಎಲ್.ಸಾಲಿಯಾನ್, ಮಂಗಳೂರು ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಅರುಣ್ ಪಡಿಯಾರ್, ಕಾಸಿಯಾ ಉಪಾಧ್ಯಕ್ಷ ಗಣೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್.ಸಾಗರ್, ಜಂಟಿ ಕಾರ್ಯದರ್ಶಿ ಜೆ.ಎಸ್.ಬಾಬು, ಗ್ರಾಮೀಣ ಜಂಟಿ ಕಾರ್ಯದರ್ಶಿ ಸತೀಶ್, ಖಜಾಂಚಿ ಮಂಜುನಾಥ್ ಇದ್ದರು. ಕೈಗಾರಿಕಾ ವಸಾಹತು: ಮಂಗಳೂರು ಸೇರ್ಪಡೆಗೆ ಆಗ್ರಹಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರದ ನೀತಿಯಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬಹಳ ಕುಂಠಿತವಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿದ 12 ಕೈಗಾರಿಕಾ ವಸಾಹತುಗಳಲ್ಲಿ ಮಂಗಳೂರಿಗೆ ಯಾವುದೇ ಸ್ಥಾನ ನೀಡಿಲ್ಲ. ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ಮಂಗಳೂರು ಸೇರ್ಪಡೆ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಮಂಗಳೂರಲ್ಲಿ ಇಎಸ್‌ಐ ಡಿಸ್ಪೆನ್ಸರಿ ಸ್ಥಾಪನೆಗೆ ಶೆಡ್ ಮತ್ತು ಸ್ಥಳದ ಅವಕಾಶವನ್ನು ಒದಗಿಸಿಕೊಡಬೇಕು. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಮನಕ್ಕೆ ತರಲಾಗಿದ್ದು, ಅವರು ಈ ಬಗ್ಗೆ ಅಂಕಿ ಅಂಶ ಒದಗಿಸುವಂತೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಿದ್ದಾರೆ. ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ, ಗ್ರಾಚ್ಯುಟಿ ಬದಲಾವಣೆಯಿಂದ ಸಣ್ಣ ಕೈಗಾರಿಕೆ ನಡೆಸಲು ಕಷ್ಟವಾಗುತ್ತಿದೆ. ಮಧ್ಯಮ ಮತ್ತು ದೊಡ್ಡ ಕೈಗಾರಿಕೆ ಜೊತೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಯನ್ನು ಸೇರಿಸದೆ ಪ್ರತ್ಯೇಕವಾಗಿ ಪ್ರತ್ಯೇಕಿಸಬೇಕು. ದೆಹಲಿ ಬಳಿಕ ಕರ್ನಾಟಕ ಕೂಡ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟು ನೀಡಲು ಉದ್ದೇಶಿಸಿದೆ. ಇದು ಎಂಎಸ್‌ಎಂಇಗಳಿಗೆ ಹೊಡೆತ ನೀಡಲಿದೆ. ಕೊರೋನಾ ಬಳಿಕ ಕೈಗಾರಿಕೆಗಳು ಪೂರ್ತಿಯಾಗಿ ಚೇತರಿಸಿಲ್ಲ. ಹಾಗಾಗಿ ಎಮಎಸ್‌ಎಂಇಗಳಿಗೆ ಪ್ರತ್ಯೇಕ ನೀತಿ ರಚಿಸಿ, ಬಳಿಕ ಸರ್ಕಾರ ಸವಲತ್ತು ನೀಡಬೇಕು. ಉದ್ದಿಮೆಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಶೇ.20ರಷ್ಟು ಭೂಮಿಯನ್ನು ಕಾದಿರಿಸಬೇಕು. ರಾಜ್ಯದಲ್ಲಿ ಇ ಖಾತಾ ಮಾರ್ಪಾಟಿನಿಂದಾಗಿ ಎಂಎಸ್‌ಎಂಇಗಳಿಗೆ ತೊಂದರೆಯಾಗುತ್ತಿದೆ. ಲೇಔಟ್‌ಗಳಿಗೆ ಇ ಖಾತಾ ಅನಗತ್ಯ. ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳೂ ಎಂಎಸ್ಎಂಇಗಳಿಗೆ ಉಪದ್ರವ ನೀಡುತ್ತಿವೆ. ಈ ಎಲ್ಲ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಸ್ಪಂದಿಸಬೇಕು ಎಂದರು.