ಕಣ್ಮನ ಸೆಳೆಯುವ ಉಮೇಶ ಕತ್ತಿ ಕಂಚಿನ ಪ್ರತಿಮೆ

KannadaprabhaNewsNetwork | Published : Nov 28, 2024 12:36 AM

ಸಾರಾಂಶ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪ್ರತಿಪಾದಕ ದಿ.ಉಮೇಶ ಕತ್ತಿ ಅವರ ಬೃಹದಾಕಾರದ ಕಂಚಿನ ಪುತ್ಥಳಿ (ಮೂರ್ತಿ) ವರ್ಣರಂಜಿತ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪ್ರತಿಪಾದಕ ದಿ.ಉಮೇಶ ಕತ್ತಿ ಅವರ ಬೃಹದಾಕಾರದ ಕಂಚಿನ ಪುತ್ಥಳಿ (ಮೂರ್ತಿ) ವರ್ಣರಂಜಿತ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತಿದೆ.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ ಸಕ್ಕರೆ ಕಾರ್ಖಾನೆ ಆಡಳಿತ ಕಚೇರಿ ಮುಂಭಾಗದ ಆವರಣದಲ್ಲಿ ಸ್ಥಾಪಿಸಿರುವ, ವಿನ್ನಿಂಗ್ ಮಷಿನ್ ಎಂದೇ ಖ್ಯಾತರಾದ ದಿ.ಉಮೇಶ ಕತ್ತಿ ಪ್ರತಿಮೆ ಅವರ ಜೀವನ ಚರಿತ್ರೆ ಪ್ರತಿಬಿಂಬಿಸುವಂತಿದೆ. ರಾಜ್ಯದ ವಿಧಾನಸಭೆಯಲ್ಲಿಯೇ ಅತ್ಯಂತ ಹಿರಿಯ ಸದಸ್ಯ ಎಂಬ ಹಿರಿಮೆಗೆ ಪಾತ್ರವಾಗಿದ್ದ ದಿ.ಉಮೇಶ ಕತ್ತಿ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಮತ್ತು ಪ್ರಾದೇಶಿಕ ಅಸಮಾನತೆ ಎದುರಾದ ವೇಳೆ ಯಾವುದೇ ಮುಲಾಜಿಲ್ಲದೇ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದರು. ಹಾಗಾಗಿಯೇ ಉಮೇಶ ಕತ್ತಿ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಗುರುತಿಸಿದ್ದರು.ಈ ಭಾಗದ ಮರೆಯಾಲಾಗದ ಮಾಣಿಕ್ಯ ಎಂಬ ಹೆಗ್ಗಳಿಕೆಗೆ ಪಾತ್ರ ಎನಿಸಿದ್ದ ಉಮೇಶ ಕತ್ತಿ ಅವರ ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಮುಂಭಾಗದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅಂದಾಜು ₹25 ಲಕ್ಷ ವೆಚ್ಚ ಮಾಡಲಾಗಿದೆ. ನೆಲಮಟ್ಟದಿಂದ ಸುಮಾರು 11 ಅಡಿ ಎತ್ತರದ ಉಮೇಶ ಕತ್ತಿ ಅವರ ಪ್ರತಿಮೆ ಅವರ ಜೀವಂತಿಕೆಗೆ ಸಾಕ್ಷಿಯಂತಿದೆ.ಕೊಲ್ಲಾಪುರದ ಸಂಜಯ ಸಂಕಪಾಳ ಮತ್ತು ಅತೂಲ ಢಾಕೆ ಅವರು ಪ್ರತಿಮೆಯನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ್ದಾರೆ. ವರ್ಷಾ ಕಂಪನಿಯು ಈ ಪುತ್ಥಳಿಯ ಪ್ರದೇಶದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಚಿಮ್ಮುವ ಕಾರಂಜಿ, ಫೇವರ್ಸ್‌ ಅಳವಡಿಕೆ, ಹುಲ್ಲುಗಾವಲು, ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ದಿನಗಳಲ್ಲಿ ಪ್ರತಿಮೆ ಪ್ರದೇಶವನ್ನು ಅವರ ಸ್ಮಾರಕವನ್ನಾಗಿ ರೂಪಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ.ಕಿರಿಯ ವಯಸ್ಸಲ್ಲೇ ವಿಧಾನಸಭೆ ಪ್ರವೇಶಿಸಿದ ಅವರು, ತಾವು ಎದುರಿಸಿದ 9 ಚುನಾವಣೆಗಳ ಪೈಕಿ 8 ರಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು. ಹಲವು ಬಾರಿ ರಾಜ್ಯದ ವಿವಿಧ ಸಚಿವ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹುಕ್ಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ, ಯಶಸ್ವಿ ಪಥದೊಂದಿಗೆ ಹಲವು ಮಹತ್ವಾಕಾಂಕ್ಷಿ ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು.ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹಿಡಕಲ್ ಡ್ಯಾಮ್‌ನ ಉದ್ಯಾನಕಾಶಿ, ಕ್ಯಾರಗುಡ್ ಬಳಿ ವಿದ್ಯಾಕಾಶಿ, ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ, ಡಿಪ್ಲೋಮಾ ಕೃಷಿ ಕಾಲೇಜು ಸ್ಥಾಪನೆ, ವಿವಿಧ ಸರ್ಕಲ್‌ಗಳಿಗೆ ಹೊಸ ಸ್ವರೂಪ, ಪ್ರಾದೇಶಿಕ ಅರಣ್ಯ ವಲಯ ಕಚೇರಿ ಮಂಜೂರು ಅವರ ಬಹುನಿರೀಕ್ಷಿತ ಯೋಜನೆಗಳ ಪೈಕಿ ಪ್ರಮುಖ ಎನಿಸಿವೆ.ಇನ್ನು ಸಹಕಾರಿ ತತ್ವದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ, ಸಂಕೇಶ್ವರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ಬೆಲ್ಲದ ಬಾಗೇವಾಡಿ ವಿಶ್ವರಾಜ್ ಶುಗರ್ಸ್‌ ಲಿಮಿಟೆಡ್ ಹಾಗೂ ಹಿಡಕಲ್ ಡ್ಯಾಮ್ ಸಂಗಮ ಸಕ್ಕರೆ ಕಾರ್ಖಾನೆ ಮೂಲಕ ಸಾವಿರಾರು ರೈತರು ಮತ್ತು ಕಾರ್ಮಿಕರ ಆರ್ಥಿಕ ಏಳಿಗೆಗೆ ಕಾರಣರಾಗಿದ್ದರು.ಉಮೇಶ ಕತ್ತಿ ಜನಪರ ರಾಜಕಾರಣಿ: ಶಿವಾನಂದ ಶ್ರೀ

ಹುಕ್ಕೇರಿ:

ಕ್ಷೇತ್ರದ ಜನರೊಂದಿಗೆ ನಾಲ್ಕು ದಶಕಗಳ ಅವಿನಭಾವ ನಂಟು ಹೊಂದಿದ್ದ ದಿ.ಉಮೇಶ ಕತ್ತಿ ತಮ್ಮ ಸಾಧನೆಗಳಿಂದಲೇ ಜನಮಾನಸದ ಮನೆ-ಮನಗಳಲ್ಲಿ ನೆಲೆಯೂರಿದ್ದಾರೆ. ಜನಪರ ರಾಜಕಾರಣದಲ್ಲಿ ಅವರೊಬ್ಬರು ಮುಂಚೂಣಿಯಲ್ಲಿ ಗುರುತಿಸಲ್ಪಡುತ್ತಾರೆ ಎಂದು ವಿರಕ್ತಮಠದ ಶಿವಾನಂದ ಸ್ವಾಮೀಜಿ ನುಡಿದರು.ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ದಿ.ಉಮೇಶ ಕತ್ತಿ ಅವರ ಕಂಚಿನ ಪ್ರತಿಮೆ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಾದರಿ ಜನನಾಯಕ ಆಗಿದ್ದ ಉಮೇಶ ಕತ್ತಿ ಅಪರೂಪ, ಸರಳ ಸಜ್ಜನಿಕೆ ರಾಜಕಾರಣಿಯಾಗಿದ್ದರು. ಇದೀಗ ಅವರ ಮೂರ್ತಿ ಪ್ರತಿಷ್ಠಾಪಿಸಿ ಕೃತಜ್ಞತಾ ಭಾವ ಮೆರೆಯಲಾಗಿದೆ ಎಂದರು.ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಯುವ ಉದ್ಯಮಿಗಳಾದ ಪೃಥ್ವಿ ಕತ್ತಿ, ಪವನ ಕತ್ತಿ, ಶೀಲಾ ಉಮೇಶ ಕತ್ತಿ, ಜಯಶ್ರೀ ರಮೇಶ ಕತ್ತಿ, ಶೃತಿ ನಿಖಿಲ್ ಕತ್ತಿ, ಸ್ನೇಹಾ ನಿತೀನದೇವ, ಮುಖಂಡರಾದ ಸಿದ್ಧಲಿಂಗಯ್ಯ ಕಡಹಟ್ಟಿ, ಆರ್.ಟಿ.ಶಿರಾಳಕರ, ಅಪ್ಪಾಸಾಹೇಬ ಖೆಮಲಾಪುರೆ, ಬಸವರಾಜ ಬಂಬಲವಾಡಿ, ಅಶೋಕ ಬೆಲ್ಲದ, ಮುರುಗೇಶ ಕತ್ತಿ, ಪಿ.ಡಿ.ಚೌಗಲಾ, ವಿಎಸ್‌ಎಲ್ ಕಾರ್ಖಾನೆಯ ಮಲ್ಲಿಕಾರ್ಜುನ ಪೂಜೇರಿ, ಸಿದ್ದು ಬಾನಿ, ಮುಖೇಶಕುಮಾರ, ಎಸ್.ಎಸ್.ಕುಲಕರ್ಣಿ, ಎಸ್.ಬಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಸ್.ಎಸ್.ಹಿರೇಮಠ ನಿರೂಪಿಸಿ, ವಂದಿಸಿದರು.

Share this article