ಕನ್ನಡಪ್ರಭ ವಾರ್ತೆ ಬೆಳ್ತಂಗಡಿಕಳೆದ ಹದಿನೈದು ದಿನಗಳಿಂದೀಚೆಗೆ ತಾಲೂಕಿನಲ್ಲಿ ಎಡೆಬಿಡದೆ ಧಾರಾಕಾರ ಮಳೆಸುರಿಯುತ್ತಿದೆ. ಅದೇ ರೀತಿ ಈ ಭಾಗದಲ್ಲಿರುವ ಜಲಪಾತಗಳು ತನ್ನ ಕಳೆಯನ್ನು ಹೆಚ್ಚಿಸಿಕೊಂಡು ಭೋರ್ಗರೆಯುತ್ತಿವೆ. ಪಶ್ಚಿಮಘಟ್ಟದಲ್ಲಿನ ರಮಣೀಯ ಜಲಧಾರೆಗಳು ಪ್ರಸ್ತುತ ಹೇಗಿವೆ ಎಂಬುದರ ನೋಟ ಇಲ್ಲಿದೆ.
ಎಳನೀರು ಜಲಪಾತ: ದ.ಕ. ಜಿಲ್ಲೆಯ ಕೊನೆಯ ಭಾಗವಾದ ಮಲವಂತಿಗೆ, ಚಿಕ್ಕಮಗಳೂರು ಜಿಲ್ಲೆಯ ಸಂಸೆಗೆ ಸಮೀಪ ಇರುವುದೇ ಎಳನೀರು ಜಲಪಾತ. ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದಲ್ಲಿರುವ ಜಲಪಾತ ಸುಮಾರು 45 ಅಡಿ ಮೇಲಿನಿಂದ ಧುಮ್ಮಿಕ್ಕುತ್ತಿದೆ.ಬಂಡಾಜೆ ಜಲಪಾತ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅತ್ಯಾಕರ್ಷಕ ಜಲಪಾತಗಳಲ್ಲಿ ಒಂದು. ಸುಮಾರು 200 ಅಡಿ ಮೇಲಿನಿಂದ ಧುಮ್ಮಿಕ್ಕುವ ಈ ಜಲಪಾತವು ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.
ಬೊಳ್ಳೆ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೊಳ್ಳೆ ಜಲಪಾತದಲ್ಲಿ ನೀರು 50 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಅತ್ಯಂತ ಸುಂದರವಾದ ಜಲಪಾತವಿದು. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಈ ಜಲಪಾತ ಮಲವಂತಿಗೆ ಗ್ರಾಮದಲ್ಲಿದೆ. ನೇತ್ರಾವತಿ ನದಿಯನ್ನು ಸೇರುವ ಈ ಜಲಪಾತ ಪ್ರಸ್ತುತ ಭಾರಿ ಮಳೆಯಿಂದಾಗಿ ಮೈತುಂಬಿ ಧುಮ್ಮಿಕ್ಕುತ್ತಿದೆ.ಎರ್ಮಾಯಿ ಜಲಪಾತ: ಸುಮಾರು 100 ಅಡಿ ಮೇಲಿನಿಂದ ನೀರು ಧುಮ್ಮಿಕ್ಕುವ ಎರ್ಮಾಯಿ ಜಲಪಾತ ಪ್ರಸ್ತುತ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಇದು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ವ್ಯಾಪ್ತಿಯಲ್ಲಿದೆ. ಈ ಜಲಪಾತಗಳ ಮೇಲ್ಭಾಗದಲ್ಲಿ ಸುಮಾರು 8 ಸಣ್ಣ ಸಣ್ಣ ಜಲಪಾತಗಳಿಂದ ನೀರು ಹರಿಯುತ್ತವೆ. ಇದು ನೇತ್ರಾವತಿ ನದಿಯ ಜಲಮೂಲವಾಗಿದೆ. ಜಲಪಾತ ಧುಮ್ಮಿಕ್ಕುವ ಸ್ಥಳ ಆಳವಾಗಿದೆ. ಇಲ್ಲಿ ಇಳಿಯುವುದು ಅಪಾಯಕಾರಿ. ಕಡಮಗುಂಡಿ(ದಿಡುಪೆ) ಜಲಪಾತ: ಇದು ಜಾರುವ ಕಲ್ಲುಗಳಿರುವ ಸುಮಾರು 120 ಅಡಿಯಿಂದ ಧುಮ್ಮಿಕ್ಕುವ ಜಲಪಾತ. ಈ ಬಾರಿಯ ಉತ್ತಮ ಮಳೆಯಿಂದ ತನ್ನ ಆಕರ್ಷಣೆ ಹೆಚ್ಚಿಸಿಕೊಂಡಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ವ್ಯಾಪ್ತಿಯಲ್ಲಿದೆ. ನೇತ್ರಾವತಿ ನದಿಯ ಜಲಮೂಲವಾಗಿರುವ ಈ ಜಲಪಾತಕ್ಕೆ ಎಳನೀರು ಕಡೆಯಿಂದ ನೀರು ಹರಿದು ಬರುತ್ತದೆ.ಕುಕ್ಕುಜೆ ಫಾಲ್ಸ್: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿರುವ ಕುಕ್ಕುಜೆ ಜಲಪಾತದ ದೃಶ್ಯ ನಾರಾವಿಯಿಂದ ಕಾರ್ಕಳಕ್ಕೆ ಹಾದುಹೋಗುವಾಗ ನೋಡಲು ಸಿಗುತ್ತದೆ. ಮಳೆಗಾಲದಲ್ಲಿ ಬಹು ದೂರಕ್ಕೆ ಕುಕ್ಕುಜೆ ಹೊನಲಿನ ಶಬ್ದ ಕೇಳಿಸುತ್ತದೆ. ಕುದುರೆಮುಖ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿದೆ.