ಚನ್ನಪಟ್ಟಣ ಕ್ಷೇತ್ರ ಉಪ ಚುನಾವಣೆ : ದಳ ಅಲ್ಪಸಂಖ್ಯಾತರ, ಕೈ ಒಕ್ಕಲಿಗ ಮತಗಳ ಮೇಲೆ ಕಣ್ಣು

KannadaprabhaNewsNetwork | Updated : Nov 10 2024, 12:30 PM IST

ಸಾರಾಂಶ

ರಾಮನಗರ: ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ, ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಜೋರಾಗಿಯೇ ನಡೆದಿದೆ.

ರಾಮನಗರ: ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ, ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಜೋರಾಗಿಯೇ ನಡೆದಿದೆ.

ಒಕ್ಕಲಿಗರ ಬಾಹುಳ್ಯವುಳ್ಳ ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ. ಆದರೆ, ಯಾವುದೇ ರಾಜಕೀಯ ಪಕ್ಷ ಉಪಚುನಾವಣೆ ಗೆಲ್ಲಬೇಕಾದರೆ ಅಹಿಂದ ಮತಗಳ ಬೆಂಬಲವೂ ಬೇಕಾಗಿದೆ. ಈಗ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳು ಅಹಿಂದ ಅದರಲ್ಲೂ ಅಲ್ಪಸಂಖ್ಯಾತರ ಮತಗಳ ಮೇಲೆ ಹೆಚ್ಚು ಕಣ್ಣಿಟ್ಟಿದ್ದರೆ, ಕಾಂಗ್ರೆಸ್ ಪಕ್ಷ ಒಕ್ಕಲಿಗರ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಕಸರತ್ತು ನಡೆಸುತ್ತಿದೆ.

ತಮ್ಮ ಪರವಾಗಿರುವ ಜಾತಿಯ ಮತಗಳನ್ನು ಭದ್ರ ಪಡಿಸಿಕೊಂಡು ಉಳಿದ ಜಾತಿಗಳ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಮಾರ್ಗಗಳನ್ನು ಅನುಸರಿಸುತ್ತಿವೆ.

ಜಾತಿ ಲೆಕ್ಕಾಚಾರ ಹೇಗಿದೆ?:

ಚನ್ನಪಟ್ಟಣದಲ್ಲಿ ಒಟ್ಟು 2,32,375 ಮತದಾರರಿದ್ದಾರೆ. ಇನ್ನು1.5 ಲಕ್ಷದಷ್ಟು ಒಕ್ಕಲಿಗ ಸಮುದಾಯದ ಮತಗಳು ಇದೆ. ಶೇ. 48ರಷ್ಟು ಒಕ್ಕಲಿಗರ ಮತಗಳ ಪ್ರಾಬಲ್ಯ ಇದೆ. ಇನ್ನು 2ನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದಲ್ಲಿ 40 ಸಾವಿರ ಮತದಾರರು ಇದ್ದಾರೆ. ಮುಸ್ಲಿಂ ಸಮುದಾಯದ ಮತಗಳು 32 ಸಾವಿರ ಇವೆ. ತಿಗಳರು 10 ಸಾವಿರ, ಬೆಸ್ತರು 10 ಸಾವಿರ, ಬ್ರಾಹ್ಮಣರು 2 ಸಾವಿರ, ಲಿಂಗಾಯತ 3 ಸಾವಿರ, ಕುರುಬ ಸಮುದಾಯದಿಂದ 8 ಸಾವಿರ ಮತಗಳು ಇದೆ. ಇನ್ನು ಇತರೆ ಹಿಂದುಳಿದ ವರ್ಗ 22 ಸಾವಿರ ಮತಗಳು ಇವೆ.

ಒಕ್ಕಲಿಗರ ಮತಗಳು ಪ್ರಮುಖ ಅಭ್ಯರ್ಥಿಗಳ ನಡುವೆ ಹಂಚಿಕೆಯಾಗಬಹುದು. ಇಲ್ಲವೇ ಮಾಜಿ ಪ್ರಧಾನಿ ದೇವೇಗೌಡರ ಆಗಮನದಿಂದಾಗಿ ಆ ಮತಗಳಲ್ಲಿ ವ್ಯತ್ಯಾಸ ಆಗಲೂಬಹುದು. ಒಕ್ಕಲಿಗರನ್ನು ಹೊರತು ಪಡಿಸಿದರೆ 40 ಸಾವಿರದಷ್ಟು ದಲಿತ ಮತಗಳಿದ್ದು, ಈ ಸಮುದಾಯದ ಮತಗಳು ಮಹತ್ವದಾಗಿವೆ.

ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಎನಿಸಿರುವ ದಲಿತರ ಮತಗಳನ್ನು ಸೆಳೆಯಲು ಜೆಡಿಎಸ್ ರಣತಂತ್ರ ರೂಪಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಆ ಮತಗಳನ್ನು ಭದ್ರಗೊಳಿಸಲು ಪ್ರತಿತಂತ್ರ ಹೆಣೆಯುತ್ತಿದೆ. ಇನ್ನು 3ನೇ ಪ್ರಬಲ ಕೋಮು ಆಗಿರುವ ಮುಸ್ಲಿಂ ಮತ ಭದ್ರ ಪಡಿಸಿಕೊಳ್ಳುವುದು ಕಾಂಗ್ರೆಸ್ ನ ತಂತ್ರಗಾರಿಕೆಯ ಒಂದು ಭಾಗವಾಗಿದೆ.

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಜೆಡಿಎಸ್ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿರುವ ಕಾರಣ ಅಲ್ಪಸಂಖ್ಯಾತರ ಮತಗಳು ಕೈ ತಪ್ಪುವ ಭೀತಿ ಶುರುವಾಗಿದೆ. ಕಾಂಗ್ರೆಸ್ ನಿರಾತಂಕವಾಗಿದೆ. ಆದರೂ ಉಭಯ ಪಕ್ಷಗಳು ಮುಸ್ಲಿಂ ಸಮುದಾಯದ ಪ್ರಬಲ ನಾಯಕರನ್ನು ಪ್ರಚಾರಕ್ಕೆ ಕರೆತಂದು ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಅಹಿಂದ ಮತಗಳು ನಮ್ಮ ವೋಟ್ ಬ್ಯಾಂಕ್ ಎಂಬ ನಂಬಿಕೆ ಕಾಂಗ್ರೆಸ್ ಪಾಳಯದ್ದಾಗಿದ್ದರೆ, ಆ ಮತಗಳನ್ನು ಸೆಳೆದು ಗೆಲುವಿನ ಗೆರೆ ದಾಟಲು ಎನ್ ಡಿಎ ಪಾಳಯ ಕಾರ್ಯಾಚರಣೆಯಲ್ಲಿ ಮುಳುಗಿದೆ. ಹೀಗಾಗಿ ಚನ್ನಪಟ್ಟಣ ಕಣದಲ್ಲಿ ಮತ ರಾಜಕಾರಣ ಬಿರುಸುಗೊಂಡಿದೆ.

ಮಹಿಳಾ ಮತದಾರರ ನಿರ್ಣಾಯಕ ಪಾತ್ರ

ಜಾತಿ ಲೆಕ್ಕಾಚಾರದ ಜೊತೆಗೆ ಮಹಿಳಾ ಮತದಾರರು ಉಪಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,32,836 ಮತದಾರರಿದ್ದು, ಇದರಲ್ಲಿ ಪುರುಷರು - 1,12,271 ಮಹಿಳೆಯರು - 1,20,557 ಹಾಗೂ ಇತರೆ - 08 ಮತದಾರರು ಇದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ 8,286 ಹೆಚ್ಚು ಮತದಾರರು ಇದ್ದಾರೆ.

ಮಹಿಳೆಯರ ಮನ ಗೆಲ್ಲಲು ಹಲವು ತಂತ್ರ ರೂಪಿಸಲು ಮುಂದಾಗಿವೆ. ಮಹಿಳಾ ಸಂಘಗಳು, ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಮುಂಚೂಣಿಯಲ್ಲಿರುವ ಮಹಿಳಾ ಮುಖಂಡರನ್ನು ಭೇಟಿ ಮಾಡುತ್ತಿರುವ ರಾಜಕೀಯ ಪಕ್ಷಗಳ ನಾಯಕರು ಆ ಮೂಲಕ ಮಹಿಳೆಯರ ಮತಗಳನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ. 

Share this article