ಕನ್ನಡಪ್ರಭ ವಾರ್ತೆ ಆಲೂರು
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಕಣ್ಣುಗಳು ಮಂಜಾಗುವುದು ಸಹಜ ಎಂದು ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆ ಡಾ. ಸ್ಮಿತಾ ತಿಳಿಸಿದರು.ಪಟ್ಟಣದಲ್ಲಿರುವ ಆಲೂರು ಕ್ಲಿನಿಕ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಅಮ್ಮ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ, ಉಚಿತ ಕಣ್ಣು ತಪಾಸಣ ಮತ್ತು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಕಣ್ಣು ಮನುಷ್ಯನ ಜೀವನಕ್ಕೆ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ೪೦ ವಯಸ್ಸು ಕಳೆದ ನಂತರ ಕಣ್ಣು ದೃಷ್ಟಿಯಲ್ಲಿ ಮಂಕು ಕವಿಯುವುದು ಸಹಜ. ಇತ್ತೀಚೆಗೆ ಮನುಷ್ಯ ಆಧುನಿಕ ಶೈಲಿಯಲ್ಲಿ ತನ್ನ ಜೀವನ ಸಾಗಿಸುತ್ತಿರುವುದು, ಸಿದ್ಧ ಆಹಾರ, ರಸ್ತೆ ಬದಿ ತಯಾರಿಸುವ ಆಹಾರ ಬಳಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ ವೃದ್ಧಿಸುವುದರಿಂದ ಕಣ್ಣಿನ ದೃಷ್ಟಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪುಟ್ಟ ಮಕ್ಕಳು ಮೊಬೈಲ್ ಬಳಸುವುದರಿಂದ ಕಣ್ಣು ದೋಷಕ್ಕೀಡಾಗುತ್ತಿದ್ದಾರೆ. ಪೋಷಕರು ಸಾಧ್ಯವಾದಷ್ಟು ಮಕ್ಕಳು ಮೊಬೈಲ್ ಕಡಿಮೆ ಬಳಸುವಂತೆ ಜಾಗ್ರತೆ ವಹಿಸಬೇಕು ಎಂದರು.
ಡಾ. ಗಿರೀಶ್ ಬಸಪ್ಪ ಮಾತನಾಡಿ, ಕಣ್ಣು ದೃಷ್ಟಿಯಲ್ಲಿ ದೋಷ ಉಂಟಾಗಲು ಹಲವು ಕಾರಣಗಳಿವೆ. ಸರಿಯಾಗಿ ದೃಷ್ಟಿ ಕಾಣಿಸದಿದ್ದರೆ ಒತ್ತಡದಿಂದ ನೋಡಲು ಪ್ರಯತ್ನ ಮಾಡಬಾರದು. ದೀರ್ಘಕಾಲದವರೆಗೆ ಪರದೆಯನ್ನು ನೋಡುವುದು, ಮಂದ ಬೆಳಕಿನಲ್ಲಿ ಓದುವುದು ಅಥವಾ ಅತಿಯಾದ ಕೆಲಸವು ಕಣ್ಣಿನ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಒತ್ತಡ ಹೆಚ್ಚಾದರೆ ತಲೆನೋವಿನ ಜೊತೆಗೆ ದೃಷ್ಟಿ ಮಂದವಾಗುತ್ತದೆ. ಇದರಿಂದ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.ಶಿಬಿರದಲ್ಲಿ ಡಾ. ಕವಿತಾ ಗಿರೀಶ್, ದಾದಿಯರಾದ ಭವಾನಿ, ಪವಿತ್ರ, ತಾರಾಮಣಿ, ಪ್ರಿಯಾಂಕ, ಲಕ್ಷ್ಮಿ ಉಪಸ್ಥಿತರಿದ್ದರು.