ಮಾರ್ಗದರ್ಶಕರಾಗಿದ್ದ ಫ.ಗು.ಹಳಕಟ್ಟಿ

KannadaprabhaNewsNetwork | Published : Jul 4, 2024 1:05 AM

ಸಾರಾಂಶ

ಪ್ರತಿಯೊಬ್ಬ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸಹಕಾರಿ ಬ್ಯಾಂಕ್ ನಿರ್ಮಿಸುವುದಲ್ಲದೆ, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ನಾಡಿಗೆ ಮಾರ್ಗದರ್ಶಕರಾಗಿದ್ದವರು ಡಾ.ಫ.ಗು.ಹಳಕಟ್ಟಿ ಅವರು ಎಂದು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಇಜೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಯೊಬ್ಬ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸಹಕಾರಿ ಬ್ಯಾಂಕ್ ನಿರ್ಮಿಸುವುದಲ್ಲದೆ, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ನಾಡಿಗೆ ಮಾರ್ಗದರ್ಶಕರಾಗಿದ್ದವರು ಡಾ.ಫ.ಗು.ಹಳಕಟ್ಟಿ ಅವರು ಎಂದು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಇಜೇರಿ ಹೇಳಿದರು.

ನಗರದ ಶ್ರೀ ಸಿದ್ದೇಶ್ವರ ಕಲಾಭವನದಲ್ಲಿ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಬ್ಯಾಂಕಿನ ಸಂಸ್ಥಾಪಕ ವಚನಪಿತಾಮಹ ರಾವ್ ಬಹದ್ದೂರ್ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನೋತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಫ.ಗು.ಹಳಕಟ್ಟಿ ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇದೆ. ಹೀಗಾಗಿ ಬರುವ ದಿನಗಳಲ್ಲಿ ಹೊರ ಜಿಲ್ಲೆಗಳಲ್ಲಿಯೂ ನಮ್ಮ ಬ್ಯಾಂಕಿನ ಶಾಖೆಗಳು ಪ್ರಾರಂಭಿಸಲಾಗುವುದು ಎಂದರು.

ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗೀಶ್ವರ ಮಹಾ ಸ್ವಾಮೀಜಿ ಮಾತನಾಡಿ, ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ, ಸಾಮಾಜಿಕ, ಕೆರೆ ನಿರ್ಮಾಣ, ಮಹಿಳೆಯರಿಗಾಗಿ ಪ್ರಥಮ ಶಾಲೆಯ ಶಿಕ್ಷಣ ಪ್ರಾರಂಭಿಸಿರುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಡಾ.ಫ.ಗು.ಹಳಕಟ್ಟಿ ಅವರು ಮಾಡಿದ್ದಾರೆ. ಕಾಯಕವೇ ನನ್ನ ಗುರಿ ಎಂದು ಉಸಿರಿರುವವರೆಗೆ ವಚನಗಳ ಚಿಂತನೆಯನ್ನು ಮಾಡಿರುವ ಕಾರ್ಯ ಮಾಡಿದ ಕಾಯಕಯೋಗಿ ಡಾ.ಫ.ಗು.ಹಳಕಟ್ಟಿ ಎಂದರು.

ಸಹಕಾರಿ ಸಂಘಗಳ ಉಪನಿಬಂಧಕರಾದ ಎಸ್.ಕೆ.ಭಾಗ್ಯಶ್ರೀ ಮಾತನಾಡಿ, ಈ ನಾಡಿನಲ್ಲಿ ನಾವು ಜನ್ಮ ತಾಳಿರುವುದು ಪುಣ್ಯದ ಫಲ ಬಸವಣ್ಣನವರು ಹಾಗೂ ಅನೇಕ ಶರಣರ ನಾಡು ಇದಾಗಿದೆ. ಎಲ್ಲೇ ನಾವು ದೇಶದಲ್ಲಿ ಸಂಚರಿಸುವಾಗ ವಿಜಯಪುರದವರು ಎಂದರೆ ಅಭಿಮಾನದಿಂದ ಕಾಣುತ್ತಾರೆ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷೆ ಸೌಭಾಗ್ಯ ಭೋಗಶೆಟ್ಟಿ ಪರಿಚಯ ಹಾಗೂ ಸ್ವಾಗತ ನಡೆಸಿಕೊಟ್ಟರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಂಬುನಾಥ ಕಂಚಾಣಿ ವಂದಿಸಿದರು. ಬಿ.ಕೆ. ಪಾಟೀಲ್ ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ಸಾಕ್ಷಿ ಹಿರೇಮಠ ಸಂಗಡಿಗರು ಸಂಗೀತ ಸೇವೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ವಿ.ಸಿ. ನಾಗಠಾಣ, ಮೋಹನ ಕಟ್ಟಿಮನಿ, ಬ್ಯಾಂಕಿನ ಸದಸ್ಯರು, ಸಿಬ್ಬಂದಿಗಳು, ಗಣ್ಯ ವ್ಯಾಪಾರಸ್ಥರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಹಳಕಟ್ಟಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.

Share this article