ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಕೊಡುಗೆ ಅಪಾರ

KannadaprabhaNewsNetwork | Published : Jul 3, 2024 12:18 AM

ಸಾರಾಂಶ

ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ, ಯುವಜನರಿಗೆ ತಿಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನು ಸಾಹಿತ್ಯ ಪರಿಷತ್‌ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶಾಲಾ, ಕಾಲೇಜುಗಳಲ್ಲಿ ಆಚರಿಸಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರುವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ, ಯುವಜನರಿಗೆ ತಿಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನು ಸಾಹಿತ್ಯ ಪರಿಷತ್‌ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶಾಲಾ, ಕಾಲೇಜುಗಳಲ್ಲಿ ಆಚರಿಸಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ವಚನ ಪಿತಾಮಹ ಫಕೀರಪ್ಪ ಗುರುವಪ್ಪ ಹಳಕಟ್ಟಿ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡತನವನ್ನೇ ಬಂಡವಾಳ ಮಾಡಿಕೊಂಡು, ಹರಿದು ಹಂಚಿ ಹೋಗಿದ್ದ ವಚನದ ತಾಳೆಗರಿಗಳನ್ನು ಒಗ್ಗೂಡಿಸಿ, ಸಮಗ್ರ ವಚನ ಸಾಹಿತ್ಯವನ್ನು ಜನರಿಗೆ ನೀಡಿದ ಫ.ಗು.ಹಳಕಟ್ಟಿಯವರ ಪರಿಶ್ರಮ ಯುವಜನತೆಗೆ ತಿಳಿಯಬೇಕಿದೆ ಎಂದರು.

ವಕೀಲ, ಸಹಕಾರಿ ಧುರೀಣ, ಶಿಕ್ಷಣ ತಜ್ಞರಾಗಿ ಬಹುಮುಖ ಪ್ರತಿಭೆ ಹೊಂದಿದ್ದ ಫ.ಗು ಹಳಕಟ್ಟಿ ಅವರು, ವಚನ ಸಾಹಿತ್ಯದ ಸಂಗ್ರಹಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು. ಇದ್ದ ಮನೆಯನ್ನು ಮಾರಿ, ವಚನ ಶಾಸ್ತ್ರ ಸಾರ ಪುಸ್ತಕ ಮುದ್ರಿಸಲು ಮುದ್ರಣ ಯಂತ್ರವನ್ನು ಖರೀದಿಸಿದ್ದರು. ಜೀವಿತದ ಕೊನೆಯವರೆಗೂ ಬಡವರಾಗಿಯೇ ಬದುಕಿ, ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪ್ರಶಂಸಿದರು.ಕಸಾಪದಲ್ಲಿ ಮತದಾರರ ಪಟ್ಟಿ ಪರೀಕ್ಷರಣೆ ನಡೆಯುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿದ್ದ ಮೃತಪಟ್ಟವರ ಹೆಸರು ಕೈಬಿಡುವುದು ಮತ್ತು ಮತದಾರರ ವಿಳಾಸ ಬದಲಾಗಿದ್ದಲ್ಲಿ, ಹೊಸ ವಿಳಾಸವನ್ನು ನಮೂದಿಸುವ ಕೆಲಸ ನಡೆಯುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರು ತಮಗೆ ಗುರುತು, ಪರಿಚಯವಿದ್ದ ಸದಸ್ಯರು ಮರಣ ಹೊಂದಿದ್ದರೆ ಅದನ್ನು ಸಾಹಿತ್ಯ ಪರಿಷಿತ್‌ ಗಮನಕ್ಕೆ ತಂದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. ಈ ನಿಟ್ಟಿನಲ್ಲಿ ಸಾಹಿತ್ಯಪರಿಷತ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಸಂಶೋಧಕ ಡಾ.ನಂಜುಂಡಸ್ವಾಮಿ ಮಾತನಾಡಿ, ವಕೀಲರಾಗಿ ಕೆಲಸ ಮಾಡಿ ಸಾವಿರಾರು ರೂ ಗಳಿಸಬಹುದಾಗಿದ್ದ ಫ.ಗು.ಹಳಕಟ್ಟಿ ಅವರು, ವಕೀಲ ವೃತ್ತಿ ಬಿಟ್ಟು, ವಚನ ಸಾಹಿತ್ಯ ಸಂಗ್ರಹದಲ್ಲಿ ತೊಡಗಿದವರು. ಇವರು ತಮಲ್ಲಿ ಸಂಗ್ರಹವಾಗಿದ್ದ ಸುಮಾರು 958 ವಚನಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ, ಮೊದಲು ಮುದ್ರಣಕ್ಕೆ ವ್ಯವಸ್ಥೆ ಮಾಡಿದರು. 1923ರಲ್ಲಿ ಬೆಳಗಾವಿಯ ಮಹಾವೀರ ಪ್ರಿಂಟರ್ಸ್‌ನಲ್ಲಿ ವಚನಶಾಸ್ತ್ರ ಸಾರ ಎಂಬ ಪುಸ್ತಕವನ್ನು ಹೊರತಂದರು. ಇಂದಿಗೆ ನೂರು ವರ್ಷ ತುಂಬಿದೆ. ಹಾನಗಲ್‌ ಕುಮಾರಸ್ವಾಮಿಗಳ ಸಹಕಾರದಿಂದ ಈ ಪುಸ್ತಕ ಮುದ್ರಣಗೊಂಡು, ಹೊರಜಗತ್ತಿಗೆ ಹೆಚ್ಚಿನ ಮಟ್ಟದಲ್ಲಿ ವಚನಕಾರರ ಪರಿಚಯವಾಗಲು ಸಾಧ್ಯವಾಯಿತು. ಇವರು ಹೊರತರುತ್ತಿದ್ದ ಶಿವಾನುಭವ ಮಾಸ ಪತ್ರಿಕೆ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಸುಮಾರು ೬ ಸಂಪುಟಗಳಲ್ಲಿ ಮುದ್ರಿತವಾದ ವಚನ ಸಾಹಿತ್ಯ ಹಾಗೂ ಹರಿಹರನ ರಗಳೆ ಸಹ ಮುದ್ರಣಗೊಂಡಿದೆ. ತುಮಕೂರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಫ.ಗು.ಹಳಕಟ್ಟಿ ತಿಪಟೂರು ಮತ್ತು ಗೋಡೆಕೆರೆಯಲ್ಲಿ ಭಾಷಣ ಮಾಡಿದ ಉಲ್ಲೇಖಗಳಿವೆ. ಇವರ ಸೇವೆಯನ್ನು ಮೆಚ್ಚಿ ಮೈಸೂರು ಅರಸರು ಇವರಿಗೆ ಬಹದ್ದೂರು ಎಂಬ ಬಿರುದು ನೀಡಿದ್ದರು ಎಂದರು.ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗೋವಿಂದರಾಯ ಮಾತನಾಡಿ, ವಚನ ಸಾಹಿತ್ಯ ಸಂಗ್ರಹಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರು ಫ.ಗು.ಹಳಕಟ್ಟಿಯವರು. ಅವರ ಸೇವೆ ಮತ್ತು ತ್ಯಾಗ ಇಂದಿನ ಪೀಳಿಗೆಗೆ ಮಾದರಿ ಎಂದರು.ಶ್ರೀಮತಿ ಅಮೃತ ವೀರಭದ್ರಯ್ಯ,ಎಂ.ಜಿ.ಸಿದ್ದರಾಮಯ್ಯ, ಮಾತನಾಡಿದರು. ವೇದಿಕೆಯಲ್ಲಿ ಸಾಹಿತಿಗಳಾದ ಉಮಾಮಹೇಶ್, ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್,ಸುರೇಶಕುಮಾರ್,ಚಿಕ್ಕಬೆಳ್ಳಾವಿ ಶಿವಕುಮಾರ್,ರುದ್ರಮೂರ್ತಿ ಎಲೆರಾಮಪುರ,ನಟರಾಜು, ವಿಶ್ವೇಶ್ವರಯ್ಯ,ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share this article