ಸರ್ಕಾರಿ ಶಾಲೆಗಳಿಗೆ ಸೌಕರ್ಯ ಕಲ್ಪಿಸಿ: ಹನುಮಂತ ಚಲವಾದಿ

KannadaprabhaNewsNetwork | Published : Jun 4, 2024 12:30 AM

ಸಾರಾಂಶ

ರೋಣ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸದಿದ್ದರೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೋಣ ಬಿಇಒ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಹನುಮಂತ ಚಲವಾದಿ ಎಚ್ಚರಿಸಿದ್ದಾರೆ.

ರೋಣ: ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಹನುಮಂತ ಚಲವಾದಿ ಆಗ್ರಹಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೋಣ ನಗರದ ಎಂ.ಆರ್.ಬಿ.ಸಿ. ಶಾಲೆಯಲ್ಲಿ ಓದುವ ಮಕ್ಕಳ ಕೊಠಡಿ ಸಂಖ್ಯೆ ಕಡಿಮೆ ಇದ್ದು, ಒಂದೇ ಕೊಠಡಿಯಲ್ಲಿ 40ರಿಂದ 50 ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿ ಪಾಠ ಮಾಡುತ್ತಿದ್ದಾರೆ. ಅಲ್ಲದೇ ಒಂದನೇ ತರಗತಿ, ಎರಡನೇ ತರಗತಿ, ಮೂರನೇ ತರಗತಿ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಯಾವ ತರಗತಿಯ ಪಾಠ ಓದಬೇಕೆಂಬ ಗೊಂದಲ ಸೃಷ್ಟಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಆಸನದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಇರುವುದು ವಿಪರ್ಯಾಸ. ಇದರಂತೆ ತಾಲೂಕಿನಲ್ಲಿ ಅನೇಕ ಶಾಲೆಗಳ‌ ಪರಿಸ್ಥಿತಿ ಇದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಎಚ್ಚರಿಕೆ: ಈಗ ತಾನೇ ಶಾಲೆಗಳು ಪ್ರಾರಂಭವಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಪೂರಕ ವಾತಾವರಣವಿದೆಯೇ? ಎಂಬುದನ್ನು ಪರಿಶೀಲಿಸಬೇಕು. ಶಾಲೆಯ ಅಗತ್ಯತೆ ಕುರಿತು ಗಮನ ಹರಿಸಬೇಕು. ಗುಣಮಟ್ಟಣ ಶಿಕ್ಷಣದ ಜತೆಗೆ ಕೊಠಡಿಗಳಲ್ಲಿ ಶುದ್ಧ ಗಾಳಿ, ಬೆಳಕು, ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸ್ವಚ್ಛತೆ ಇದೆಯೋ ಇಲ್ಲವೋ ? ಎಂಬುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಿಸಬೇಕು. ತಾಲೂಕಿನಲ್ಲಿ ಅನೇಕ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯಿದ್ದು, ಅವುಗಳನ್ನು ಪರಿಹರಿಸುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಇಲ್ಲವಾದಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೋಣ ಬಿಇಒ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Share this article