ಕುಶಲಕರ್ಮಿಗಳಿಗೆ ಪಿ.ಎಂ.ವಿಶ್ವಕರ್ಮ ಯೋಜನೆಯ ಸೌಲಭ್ಯ ಕಲ್ಪಿಸಿ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ದಿನಕ್ಕೆ ₹ 500 ಸ್ಟೈಪಂಡ್ ನಂತೆ ಮೂಲ ಕೌಶಲ್ಯ ತರಬೇತಿ, ತರಬೇತಿಯ ನಂತರ ₹ 15,000 ಮೌಲ್ಯದ ಟೂಲ್ ಕಿಟ್, 18 ತಿಂಗಳ ಮರುಪಾವತಿ ಅವಧಿಯೊಂದಿಗೆ ಶೇ. 5 ಬಡ್ಡಿದರದಲ್ಲಿ ₹1 ಲಕ್ಷದವರೆಗೆ ಆಧಾರ ರಹಿತ ಸಾಲ, ಈ ಸಾಲದ ಮರುಪಾವತಿ ನಂತರ ಎರಡನೇ ಕಂತಿನಲ್ಲಿ 18 ತಿಂಗಳ ಮರುಪಾವತಿ ಅವಧಿಯೊಂದಿಗೆ ₹ 2 ಲಕ್ಷದವರೆಗೆ ಸಾಲ ದೊರೆಯಲಿದೆ.

ಕಾರವಾರ: ಜಿಲ್ಲೆಯಲ್ಲಿರುವ ಎಲ್ಲ ಕುಶಲಕರ್ಮಿಗಳನ್ನು ಗುರುತಿಸಿ ಅವರನ್ನು ಪಿ.ಎಂ.ವಿಶ್ವಕರ್ಮ ಯೋಜನೆಗೆ ನೋಂದಾಯಿಸಿ, ಎಲ್ಲ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಿ.ಎಂ.ವಿಶ್ವಕರ್ಮ ಯೋಜನೆಯ ನೋಂದಣಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿ.ಎಂ.ವಿಶ್ವಕರ್ಮ ಯೋಜನೆಗೆ ಜಿಲ್ಲೆಯಲ್ಲಿ ಇದುವರೆಗೆ 20,000 ಮಾತ್ರ ನೋಂದಣಿ ಆಗಿದ್ದು, ಜಿಲ್ಲೆಯಲ್ಲಿ ಇನ್ನೂ ಅತ್ಯಧಿಕ ಸಂಖ್ಯೆಯಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಕುಶಲಕರ್ಮಿಗಳಿದ್ದಾರೆ. ಗ್ರಾಮಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಅವರನ್ನು ಗುರುತಿಸಿ, ಯೋಜನೆಯ ಪ್ರಯೋಜನ ದೊರಕಿಸುವ ಮೂಲಕ ಅವರ ಕೌಶಲ್ಯ ಉನ್ನತೀಕರಣಗೊಳಿಸಿ,ಅವರಿಗೆ ಉತ್ತಮ ಅತ್ಯಾಧುನಿಕ ಉಪಕರಣಗಳ ಬೆಂಬಲ ಮತ್ತು ಸುಲಭ ರೀತಿಯಲ್ಲಿ ಬ್ಯಾಂಕ್‍ಗಳಿಂದ ಸಾಲ ದೊರೆಯುವಂತೆ ಮಾಡಬೇಕು ಎಂದರು.

ಈ ಯೋಜನೆಯ ವ್ಯಾಪ್ತಿಗೆ ಕಾರ್ಪೆಂಟರ್, ಬೋಟ್ ಮೇಕರ್, ಆರ್ಮರ್, ಕಮ್ಮಾರ, ಹ್ಯಾಮರ್ ಮತ್ತು ಟೂಲ್ ಕಿಟ್ ಮೇಕರ್, ಲಾಕ್ ಸ್ಮಿತ್, ಗೋಲ್ಡ್ ಸ್ಮಿತ್, ಶಿಲ್ಪಿ (ಮೂರ್ತಿಕರ್, ಕಲ್ಲು ಕೆತ್ತನೆ), ಕಲ್ಲು ಒಡೆಯುವವನು, ಚಮ್ಮಾರ/ ಶೂಸ್ಮಿತ್/ಪಾದರಕ್ಷೆ ಕುಶಲಕರ್ಮಿ, ಮೇಸನ್, ಬುಟ್ಟಿ/ಚಾಪೆ/ಬ್ರೂಮ್ ಮೇಕರ್/ಕಾಯಿರ್ ನೇಕಾರ, ಡಾಲ್ ಮತ್ತು ಟಾಯ್ ಮೇಕರ್ (ಸಾಂಪ್ರದಾಯಿಕ), ಬಾರ್ಬರ್, ಮಾಲೆ ತಯಾರಕ (ಮಾಲಕಾರ) ಧೋಬಿ, ಟೈಲರ್, ಫಿಶಿಂಗ್ ನೆಟ್ ಮೇಕರ್ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಒಳಪಡಲಿದ್ದು, ಪ್ರತೀ ಕುಟುಂಬದ ಒಬ್ಬ ವ್ಯಕ್ತಿಗೆ ಯೋಜನೆಯ ಸೌಲಭ್ಯ ದೊರೆಯಲಿದ್ದು, ಎಲ್ಲ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಕುಶಲಕರ್ಮಿ ಗುರುತಿಸಿ ಈ ಯೋಜನೆಗೆ ನೋಂದಣಿ ಮಾಡಬೇಕು ಎಂದು ಹೇಳಿದರು.

ಪಿ.ಎಂ. ವಿಶ್ವಕರ್ಮ ಯೋಜನೆಗೆ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಗಳಲ್ಲಿ ನೋಂದಣಿ ಮಾಡಬಹುದಾಗಿದ್ದು, ಜಿಲ್ಲೆಯಲ್ಲಿ 350 ಕ್ಕೂ ಸಾಮಾನ್ಯ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ನಿರ್ದಿಷ್ಟ ದಿನಾಂಕದಂದು ಯೋಜನೆಯ ನೋಂದಣಿಗೆ ಶಿಬಿರ ಏರ್ಪಡಿಸಿ, ಸಾಮಾನ್ಯ ಸೇವಾ ಕೇಂದ್ರಗಳ ಸಿಬ್ಬಂದಿ ಮೂಲಕ ಸ್ಥಳದಲ್ಲೇ ನೋಂದಣಿ ಮಾಡಿಸುವಂತೆ ಸೂಚಿಸಿದ ಅವರು, ನೋಂದಣಿ ಶಿಬಿರದ ಕುರಿತಂತೆ ಸ್ಥಳೀಯ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಮತ್ತು ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.

ಈ ಯೋಜನೆಗೆ ನೋಂದಣಿಯಾದ ಕುಶಲಕರ್ಮಿಗಳಿಗೆ ಡಿಜಿಟಲ್ ಐ.ಡಿ, ಪಿ.ಎಂ.ವಿಶ್ವಕರ್ಮ ಪ್ರಮಾಣಪತ್ರ ಮತ್ತು ಐ.ಡಿ. ಕಾರ್ಡ್ ನೀಡಲಾಗುತ್ತದೆ. ಅಲ್ಲದೇ ದಿನಕ್ಕೆ ₹ 500 ಸ್ಟೈಪಂಡ್ ನಂತೆ ಮೂಲ ಕೌಶಲ್ಯ ತರಬೇತಿ, ತರಬೇತಿಯ ನಂತರ ₹ 15,000 ಮೌಲ್ಯದ ಟೂಲ್ ಕಿಟ್, 18 ತಿಂಗಳ ಮರುಪಾವತಿ ಅವಧಿಯೊಂದಿಗೆ ಶೇ. 5 ಬಡ್ಡಿದರದಲ್ಲಿ ₹1 ಲಕ್ಷದವರೆಗೆ ಆಧಾರ ರಹಿತ ಸಾಲ, ಈ ಸಾಲದ ಮರುಪಾವತಿ ನಂತರ ಎರಡನೇ ಕಂತಿನಲ್ಲಿ 18 ತಿಂಗಳ ಮರುಪಾವತಿ ಅವಧಿಯೊಂದಿಗೆ ₹ 2 ಲಕ್ಷದವರೆಗೆ ಸಾಲ ದೊರೆಯಲಿದೆ. ಅಲ್ಲದೇ ಕುಶಲಕರ್ಮಿಗಳಿಗೆ ತಯಾರಿಕೆಯ ಉತ್ಪನ್ನಗಳ ಗುಣಮಟ್ಟದ ಪ್ರಮಾಣೀಕರಣ, ಬ್ರಾಂಡಿಂಗ್, ಇ ಕಾಮರ್ಸ್ ಮತ್ತು ಜೆಮ್ ಪ್ಲಾಟ್‍ಫಾರಂ ನಲ್ಲಿ ಆನ್ ಬೋರ್ಡಿಂಗ್ ಜಾಹೀರಾತು, ಪ್ರಚಾರ ಮತ್ತು ಇತರೆ ಚಟುವಟಿಕೆಗಳ ರೂಪದಲ್ಲಿ ಮಾರುಕಟ್ಟೆ ಬೆಂಬಲ ಹಾಗೂ ದೇಶೀಯ ಮತ್ತು ಜಾಗತಿಕ ಮೌಲ್ಯಕ್ಕೆ ತಮ್ಮ ಸಂಪರ್ಕ ವಿಸ್ತರಿಸಲು ಅನುವು ಮಾಡಿಕೊಡಲಾಗುವುದು ಎಂದರು.

ಕಾರ್ಮಿಕ ಇಲಾಖೆಯ ಮೂಲಕ ಕುಶಲ ಕಾರ್ಮಿಕರಿಗೆ, ಕ್ರೀಡಾ ಇಲಾಖೆಯ ಮೂಲಕ ಯುವ ಕುಶಲಕರ್ಮಿಗಳಿಗೆ, ಮೀನುಗಾರಿಕೆ ಇಲಾಖೆಯಿಂದ ಮೀನು ಬಲೆ ನೇಯುವವರಿಗೆ, ಕೈಗಾರಿಕಾ ಇಲಾಖೆ ವತಿಯಿಂದ ಸ್ವಯಂ ಉದ್ಯೋಗಿಗಳಿಗೆ ಹಾಗೂ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ನಿರ್ವಹಿಸುವ ಹಾಗೂ ತಮ್ಮ ವ್ಯಾಪ್ತಿಯಲ್ಲಿ ಬರುವ ಕುಶಲ ಕಾರ್ಮಿಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. ಬ್ಯಾಂಕ್‍ಗಳು ಪಿ.ಎಂ. ವಿಶ್ವಕರ್ಮ ಯೋಜನೆಯ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ ನಾಯ್ಕ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಟಿ.ನಾಯ್ಕ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ್ ಮೊದಲಾದವರು ಇದ್ದರು.

Share this article