ಕಾರ್ಖಾನೆ ಡಿಸಿಸಿ ಬ್ಯಾಂಕ್‌ ಪಾಲು: ಬಿಎಸ್‌ಎಸ್‌ಕೆ ಯುಗಾಂತ್ಯ?

KannadaprabhaNewsNetwork | Updated : Aug 03 2024, 12:31 AM IST

ಸಾರಾಂಶ

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿ ನಲುಗಿದ್ದು, ಸರ್ಕಾರದಿಂದ ಸಹಾಯ ಪಡೆದರೂ ಮೇಲೇಳದೆ ಕುಸಿದಿದ್ದೀಗ ತನ್ನ ಅಂತ್ಯ ಕಾಣಲಾರಂಭಿಸಿದೆ.

ಕನ್ನಡಪ್ರಭ ವಾರ್ತೆ ಬೀದರ್‌/ಹುಮನಾಬಾದ್‌

ಜಿಲ್ಲೆಯ ಅತ್ಯಂತ ಹಳೆಯ ಮತ್ತು ಸದೃಢ ಯಂತ್ರೋಪಕರಣಗಳನ್ನು ಹೊಂದಿದ್ದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿ ನಲುಗಿದ್ದು, ಸರ್ಕಾರದಿಂದ ಸಹಾಯ ಪಡೆದರೂ ಮೇಲೇಳದೆ ಕುಸಿದಿದ್ದೀಗ ತನ್ನ ಅಂತ್ಯ ಕಾಣಲಾರಂಭಿಸಿದ್ದು, ಸಾಲ ನೀಡಿದ್ದವರ ಮುಡಿಗೆ ಬಿದ್ದಿದ್ದು ಕೆಲವೇ ತಿಂಗಳಲ್ಲಿ ಕಾರ್ಖಾನೆ ನೆನಪು ಮಾತ್ರ ಎಂಬ ಸ್ಥಿತಿಗೆ ಬಂದಲ್ಲಿ ಅಚ್ಚರಿಯಿಲ್ಲ.

ಕಾರ್ಖಾನೆ, ಕಾರ್ಖಾನೆಯ ಇತರ ಕಟ್ಟಡಗಳು, ಯಂತ್ರೋಪಕರಣಗಳೂ ಸೇರಿದಂತೆ ಸುಮಾರು 143.33 ಎಕರೆ ಪ್ರದೇಶದ ಆಸ್ತಿಯನ್ನು ಸಾಲ ನೀಡಿದ್ದ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಹೆಸರಿಗೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಹಸೀಲ್ದಾರ್‌ ಅಂಜುಮ್‌ ತಬಸ್ಸುಮ್‌ ಅವರು ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಮಂಜುಳಾರಿಗೆ ಶುಕ್ರವಾರ ಹಸ್ತಾಂತರಿಸಿದರು.

ಜಿಲ್ಲೆಯ ರೈತರ ಜೀವನಾಡಿಯಾಗಿ 29 ಸಾವಿರ ಷೇರುದಾರರನ್ನು ಹೊಂದಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯು ₹186 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದು, ಕಳೆದ ಒಂದು ವರ್ಷದಿಂದ ಕಬ್ಬು ನುರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು ತನ್ನ ಒಟ್ಟಾರೆ 173.3 ಎಕರೆ ಪ್ರದೇಶದ ಪೈಕಿ ಡಿಸಿಸಿ ಬ್ಯಾಂಕ್‌ಗೆ ತನ್ನ ಹಳ್ಳಿಖೇಡ (ಬಿ) ವ್ಯಾಪ್ತಿ 13 ಹಾಗೂ ಅಮೀರಾಬಾದ್‌ ವ್ಯಾಪ್ತಿಯ 4 ಆಸ್ತಿಯ ಒಟ್ಟು 143.33 ಎಕರೆ ಬಿಟ್ಟುಕೊಟ್ಟಿದೆ.

ಕಾರ್ಖಾನೆಗೆ ₹126 ಕೋಟಿ ಸಾಲ ನೀಡಲಾಗಿತ್ತು, 2022ರ ನವೆಂಬರ್‌ನಲ್ಲಿಯೇ ಬಡ್ಡಿ ಸೇರಿ ಸಾಲದ ಮೊತ್ತ ₹186ಕೋಟಿಗೆ ಬಂದಿತ್ತು. ಕಾರ್ಖಾನೆ ಆಡಳಿತ ಮಂಡಳಿ ಸಾಲವನ್ನು ಮುಟ್ಟಿಸುವ ಭರವಸೆ ನೀಡಿದ್ದರ ಹಿನ್ನೆಲೆ ಆಸ್ತಿ ವಶಕ್ಕೆ ಪಡೆಯುವ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಸಾಲದ ಬಡ್ಡಿಯನ್ನೂ ಕಟ್ಟದಾಗದ ಕಾರ್ಖಾನೆಯಿಂದಾಗಿ ಬ್ಯಾಂಕ್‌ ಸ್ಥಿತಿ ಕೂಡ ಸಂಕಷ್ಟಕ್ಕೆ ಸಿಲುಕಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿಸಿ ಕಾರ್ಖಾನೆ ಆಸ್ತಿಯನ್ನು ಬ್ಯಾಂಕ್‌ ಹೆಸರಿಗೆ ಹಣಕಾಸು ಸ್ವತ್ತುಗಳ ಭದ್ರತೆ ಮತ್ತು ಪುನರ್‌ ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ ಕಾಯ್ದೆ 2002ರನ್ವಯ ಕಾನೂನಾತ್ಮಕವಾಗಿ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಮಂಜುಳಾ ಕನ್ನಡಪ್ರಭಕ್ಕೆ ಮಾತನಾಡಿ ತಿಳಿಸಿದ್ದಾರೆ.

ಇದೀಗ ಕೇವಲ 29 ಎಕರೆ ಮಾತ್ರ ಕಾರ್ಖಾನೆ ಆಸ್ತಿ ಉಳಿದಿದೆ. ಆದರೆ ಸಾಲ ಮಾತ್ರ ಅಫೆಕ್ಸ್‌ ಬ್ಯಾಂಕ್‌ ₹44 ಕೋಟಿ, ಎಸ್‌ಬಿಐ ಬ್ಯಾಂಕ್‌ ಕಲಬುರಗಿ ₹7.67 ಕೋಟಿ ಹೀಗೆ ಒಟ್ಟು ₹51.67 ಕೋಟಿ ಕಾರ್ಖಾನೆಯ ಮೇಲೆ ಇನ್ನೂ ಸಾಲ ಇದೆ. ಆದರೆ ಕಾರ್ಖಾನೆಯಲ್ಲಿ ಇರುವ ಮರ ಗಿಡಗಳು ಸೇರಿ ಇನ್ನಿತರ ಪ್ರಮುಖ ವಸ್ತುಗಳು ಮಾತ್ರ ಕಳೆದ ವರ್ಷ ಆಡಳಿತ ಮಂಡಳಿ ಮಾರಾಟ ಮಾಡಿಕೊಂಡಿತ್ತು. ಇದೀಗ ಕಾರ್ಖಾನೆ ಕಟ್ಟಡ, ಯಂತ್ರ ಸೇರಿದಂತೆ ಸ್ಥಳವೂ ಹಸ್ತಾಂತರಿಸಲಾಗಿದ್ದು ಕಾರ್ಖಾನೆ ಅಂತ್ಯ ಆರಂಭವಾದಂತಾಗಿದೆ.

ಕಾರ್ಖಾನೆಯ 173.33 ಎಕರೆ ಜಮೀನನ್ನು ಮಾರಾಟಕ್ಕಿಡಲಾಗುವದೋ, ಗುತ್ತಿಗೆಗೆ ನೀಡಲಾಗುವದೋ ಅಷ್ಟೇ ಅಲ್ಲ ಕಾರ್ಖಾನೆ ಯಂತ್ರ, ಕಟ್ಟಡವನ್ನೂ ಹರಾಜು ಹಾಕಬೇಕೋ ಎಂಬುವದನ್ನು ಬ್ಯಾಂಕ್ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಇನ್ನು ಹರಾಜಿನಲ್ಲಿ ಬ್ಯಾಂಕಿನ ಸಾಲಕ್ಕಿಂತ ಹೆಚ್ಚು ಹಣ ಬಂದಲ್ಲಿ ಉಳಿಕೆ ಹಣವನ್ನು ಕಾರ್ಖಾನೆ ಖಾತೆಗೆ ಜಮೆ ಮಾಡಲಾಗುವದು ಎಂದು ಸಿಇಒ ಮಂಜುಳಾ ತಿಳಿಸಿದರು.

ಇನ್ನು ಕಾರ್ಖಾನೆ ಸಾಲ ವಾಪಸ್ಸಾತಿ ಅಸಾಧ್ಯದ ಮಾತೇ ಆಗಿತ್ತು. ಹೀಗೊಂದು ವೇಳೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಖಾನೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಲ್ಲಿ ಅಥವಾ ಕಾರ್ಖಾನೆಗೆ ನ್ಯಾಯಾಲಯದ ಅಡೆತಡೆ ಬಂದಿದ್ದೆಯಾದಲ್ಲಿ ಭಾರಿ ಪ್ರಮಾಣದಲ್ಲಿ ಸಾಲ ನೀಡಿದ್ದ ಡಿಸಿಸಿ ಬ್ಯಾಂಕ್‌ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪುವದು ದೂರವೇನಿರಲಿಲ್ಲ. ಅದೇನಿದ್ದರೂ ಕಾರ್ಖಾನೆಯ ಯುಗಾಂತ್ಯದ ಬದಲು ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಕಾರ್ಖಾನೆಯನ್ನೇ ಲೀಸ್‌ ನೀಡುವ ಮೂಲಕ ತನ್ನ ಸಾಲದ ಹಣ ವಾಪಸ್‌ ಪಡೆದು ರೈತರ ಜೀವನಾಡಿಯಾಗಿರುವ ಕಾರ್ಖಾನೆಯನ್ನು ಉಳಿಸಬಹುದೇನೋ...

Share this article