ಕನ್ನಡಪ್ರಭ ವಾರ್ತೆ ಮಂಗಳೂರು
ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಟ್ರಯಲ್ ಪ್ರಕರಣದ ಶಂಕಿತ ಉಗ್ರರು ವಾರಾಣಸಿಯ ಮಹಿಳೆಯೊಬ್ಬರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್ ಖಾತೆ ಹೊಂದಿ ಅದರ ಮೂಲಕವೇ ವಹಿವಾಟು ನಡೆಸುತ್ತಿದ್ದರು ಎಂಬ ಸಂಗತಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಮಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಅವರು ಮಂಗಳೂರು ಕೇಂದ್ರೀಕರಿಸಿ ಬೆಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಓಡಾಟ ನಡೆಸುತ್ತಿದ್ದರು.
ಆದರೆ ಅವರು ಸ್ವಂತ ಬ್ಯಾಂಕ್ ಖಾತೆ ಹೊಂದಿರಲಿಲ್ಲ. ಬೇರೆಯವರ ಹೆಸರಿನಲ್ಲಿದ್ದ ಬೇನಾಮಿ ಬ್ಯಾಂಕ್ ಖಾತೆಯನ್ನು ಮಾಝ್ ಮುನೀರ್ ನಿರ್ವಹಿಸುತ್ತಿದ್ದ.
ಅದೇ ಹೆಸರಲ್ಲಿ ತನ್ನೆಲ್ಲ ಬ್ಯಾಂಕ್ ವಹಿವಾಟು ನಡೆಸುತ್ತಿದ್ದ. ತನಿಖೆ ಸಂದರ್ಭದಲ್ಲಿ ಈ ಖಾತೆ ಉತ್ತರ ಪ್ರದೇಶದ ವಾರಣಾಸಿಯ ಮಹಿಳೆಯ ಹೆಸರಿನಲ್ಲಿರುವುದು ಪತ್ತೆಯಾಗಿದೆ.
ವಿದೇಶದಲ್ಲಿದ್ದ ಉಗ್ರನ ಸೂಚನೆಯಂತೆ ಮಂಗಳೂರಿನಲ್ಲಿ ಮಾಝ್ ಮುನೀರ್ ವಾಸವಿದ್ದ ಮನೆಗೆ ಈ ಬ್ಯಾಂಕ್ ಖಾತೆಯ ರುಪೇ ಕಾರ್ಡ್, ಎಟಿಎಂ ಕಾರ್ಡ್, ಬ್ಯಾಂಕ್ ಪುಸ್ತಕ, ಸಿಮ್‌ನ್ನು ಕೊರಿಯರ್ ಮೂಲಕ ಕಳುಹಿಸಲಾಗಿತ್ತು.
ಈ ಡೆಬಿಟ್ ಕಾರ್ಡ್ ಹಾಗೂ ಸಿಮ್‌ಗಳನ್ನು ಮಾಝ್ ಮುನೀರ್ ಮಂಗಳೂರಿನ ಕೋರ್ಟ್ ಆವರಣದಲ್ಲಿ ಮೊಹಮ್ಮದ್ ಶಾರೀಕ್ ತಲುಪಿಸಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಕ್ರಿಪ್ಟೋ ಕರೆನ್ಸಿ ಬಳಕೆ: ಕರ್ನಾಟಕದಲ್ಲಿ ಐಸಿಸ್ ನೆಟ್‌ವರ್ಕ್ ಬಲಪಡಿಸಲು ವಿದೇಶದಿಂದ ಉಗ್ರರು ನೇರವಾಗಿ ಕ್ರಿಪ್ಪೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದರು.
ಅದನ್ನು ಬಳಸಿಕೊಂಡು ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಐಸಿಸ್ ನೆಟ್‌ವರ್ಕ್ ಹೊಂದಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದರು.
ಆರೋಪಿಗಳು ಕ್ರಿಸ್ಟೋ ವ್ಯವಹಾರಕ್ಕೆ ಬಳಸಿಕೊಂಡಿರುವ ಮಧ್ಯವರ್ತಿಗಳನ್ನು ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ.
ಮಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಪಾರ್ಟ್ ಟೈಮ್ ಆಗಿ ಡೆಲಿವರ್ ಬಾಯ್ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಮಾಝ್ ಮುನೀರ್ ಜತೆಗೆ ಕರ್ನಲ್ ಎಂಬ ಹೆಸರುಳ್ಳ ಉಗ್ರನೊಬ್ಬ ನೇರ ಸಂಪರ್ಕದಲ್ಲಿದ್ದ.
ಯುವಕರನ್ನು ಬ್ರೇನ್‌ವಾಶ್ ಮಾಡಿ ಉಗ್ರವಾದಿ ಸಂಘಟನೆಗೆ ಸೇರಿಸಿಕೊಳ್ಳಲು ಮಾಝ್‌ಗೆ ವಿದೇಶದಿಂದಲೇ ಕ್ರಿಪ್ಪೋ ಕರೆನ್ಸಿಯ ಮೂಲಕ 2.5 ಲ.ರು..ಗೂ ಅಧಿಕ ಹಣದ ನೆರವು ನೀಡಿದ್ದ ಎಂಬುದನ್ನು ದಾಖಲೆ ಸಹಿತ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ತಮ್ಮ ಸ್ನೇಹಿತರ ಹೆಸರಲ್ಲಿ ಕ್ರಿಪ್ಪೋ ವ್ಯಾಲೆಟ್ಸ್ ಮಾಡಿಕೊಂಡಿದ್ದರು.
ಆ ವಿಳಾಸವನ್ನು ವಿದೇಶದಲ್ಲಿದ್ದ ಉಗ್ರನಿಗೆ ನೀಡಿದ್ದು, ಆ ವ್ಯಾಲೆಟ್‌ಗಳಿಗೆ ಯುಎಸ್ ಡಾಲರ್, ಬಿಟ್ ಫಿನಾನ್ಸ್, ಎಕ್ಸ್ ಎಂಆರ್, ಜೆಎಎಸ್‌ಎಂವೈ, ಟಿಆರ್ ಎಕ್ಸ್ ಸೇರಿ ವಿವಿಧ ಮಾದರಿಯ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾಯಿಸಲಾಗಿತ್ತು.
ಅದನ್ನು ಪುನಃ ಭಾರತೀಯ ಕರೆನ್ಸಿಯಾಗಿ ಪರಿವರ್ತಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸುತ್ತಿದ್ದರು. ಶಿವಮೊಗ್ಗ ಬಾಂಬ್ ಟ್ರಯಲ್‌ನ ಪ್ರಮುಖ ಆರೋಪಿ ಸೈಯದ್ ಯಾಸಿನ್‌ಗೆ ಸೇರಿದ ಕ್ರಿಪ್ಟೋ ವ್ಯಾಲೆಟ್‌ಗೆ 1 ಲಕ್ಷ ರು.
ಗೂ ಅಧಿಕ ಮೌಲ್ಯದ ಹಣದ ನೆರವು ಬಂದಿತ್ತು. ಬೇರೆ ಬೇರೆ ವ್ಯಕ್ತಿಗಳ ವ್ಯಾಲೆಟ್‌ಗಳಿಗೆ ಬರುತ್ತಿದ್ದ ಕ್ರಿಪ್ಟೋ ಕರೆನ್ಸಿಯನ್ನು ಮಾಝ್ ಮತ್ತು ಶಾರೀಕ್ ಪಡೆದುಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ.
ಈ ಹಣದಿಂದಲೇ ಮಾಝ್ ಮತ್ತು ಮೊಹಮ್ಮದ್ ಶಾರೀಕ್ ಸುಧಾರಿತ ಸ್ಫೋಟಕ ತಯಾರಿಸಲು ಸಾಮಗ್ರಿಗಳನ್ನು ಖರೀದಿಸುತ್ತಿದ್ದರು.
ಅಲ್ಲದೆ ಇಂತಹ ಕೃತ್ಯಕ್ಕೆ ಬಳಸಿಕೊಳ್ಳುವುದಕ್ಕಾಗಿಯೇ ಮಂಗಳೂರಿನಲ್ಲಿ 48,500 ರು..ಗೆ ಆಕ್ಟಿವಾ ಹೊಂಡಾ ವಾಹನ ಖರೀದಿಸಿದ್ದರು. ಅಲ್ಲದೆ 27,998 ರು. ಮೌಲ್ಯದ ಮೊಬೈಲ್ ಮತ್ತು ಸಿಮ್ ಖರೀದಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.