ಅಡಕೆ ಉಪ ಉತ್ಪನ್ನಗಳ ದರ ಕುಸಿತ: ನಷ್ಟದ ಸುಳಿಯಲ್ಲಿ ಖೇಣಿದಾರ

KannadaprabhaNewsNetwork | Published : Mar 17, 2025 12:33 AM

ಸಾರಾಂಶ

ಅಡಕೆ ಉಪಉತ್ಪನ್ನಗಳ ಧಾರಣೆ ತೀವ್ರ ಕುಸಿತ ಖೇಣಿದಾರರನ್ನು ಕಂಗಾಲಾಗಿಸಿದೆ. ಕಳೆದ ಮೂರು ವರ್ಷಗಳಿಂದ ಖೇಣಿದಾರರು ಸಣ್ಣಪುಟ್ಟ ನಷ್ಟವನ್ನು ಅನುಭವಿಸಿದ್ದರು. ಆದರೆ, ಈ ವರ್ಷ ಭರಿಸಲಾಗದಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.

ಅರಹತೊಳಲು ಕೆ.ರಂಗನಾಥ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಅಡಕೆ ಉಪಉತ್ಪನ್ನಗಳ ಧಾರಣೆ ತೀವ್ರ ಕುಸಿತ ಖೇಣಿದಾರರನ್ನು ಕಂಗಾಲಾಗಿಸಿದೆ. ಕಳೆದ ಮೂರು ವರ್ಷಗಳಿಂದ ಖೇಣಿದಾರರು ಸಣ್ಣಪುಟ್ಟ ನಷ್ಟವನ್ನು ಅನುಭವಿಸಿದ್ದರು. ಆದರೆ, ಈ ವರ್ಷ ಭರಿಸಲಾಗದಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.

ಅಡಕೆಯ ಪ್ರಮುಖ ಉತ್ಪನ್ನ ರಾಶಿ ಅಡಕೆ ದರ ಸ್ಥಿರ 50 ಸಾವಿರಕ್ಕಿಂತ ಹೆಚ್ಚಿದ್ದು, ಸ್ಥಿರತೆಯನ್ನು ಉಳಿಸಿಕೊಂಡಿದೆ. ಆದರೆ ಉಪಉತ್ಪನ್ನಗಳಾದ ಗೊರಬಲು ಮತ್ತು ಸಿಪ್ಪೆಗೋಟು ದರ ಪಾತಾಳಕ್ಕೆ ಕುಸಿದಿದೆ. ಇದರಿಂದ ಖೇಣಿದಾರರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಿದ್ದಾರೆ.ಇದರಿಂದ ಹೆಚ್ಚೆತ್ತುಕೊಂಡಿರುವ ಎಲ್ಲಾ ಖೇಣಿದಾರರು "ಅಡಕೆ ಖೇಣಿದಾರರ ಸೌಹಾರ್ಧ ಸಹಕಾರ ಸಂಘ " ಎಂಬ ಸಂಘವನ್ನು ಸ್ಥಾಪಿಸಿಕೊಂಡು ಸಂಘಟನೆಗೆ ಮುಂದಾಗಿದ್ದಾರೆ. ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಸೇರಿದಂತೆ 10 ರಿಂದ 12 ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯ ಪ್ರತೀ ಹಳ್ಳಿಹಳ್ಳಿಗಳನ್ನು ಭೇಟಿ ಮಾಡಿ ಖೇಣಿದಾರರನ್ನು ಸಂಘಟಿಸುವ ಕಾರ್ಯ ಭರದಿಂದ ಸಾಗಿದೆ.

ಈ ಬಾರಿ ಖೇಣಿಯಲ್ಲಿ ನಷ್ಟವನ್ನು ಅನುಭವಿಸಿರುವ ಎಲ್ಲಾ ಖೇಣಿದಾರರು ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಸಂಘಟನೆಗೆ ಬಲ ಸಿಕ್ಕಂತಾಗುತ್ತಿದೆ. ದಿನದಿಂದ ದಿನಕ್ಕೆ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಂಘವು ಕೆಲವು ನಿರ್ಣಯಗಳ ಅಂಗೀಕಾರಕ್ಕೆ ಮುಂದಾಗುತ್ತಿದೆ.

ಸಂಘದ ನಿರ್ಣಯಗಳು. ಎಕರೆ ಅಡಕೆ ತೋಟಕ್ಕೆ 25 ಸಾವಿರ ರು. ಹಣವನ್ನು ಮಾತ್ರ ಮುಂಗಡ ನೀಡಬೇಕು, ಹಸಿ ಅಡಕೆಯನ್ನು ಹೊಸ ಅಡಕೆ ಧಾರಣೆಗೆ ಪಟ್ಟಿ ಮಾಡಬೇಕು, 75 ಕೆಜಿ ಹಸಿ ಅಡಕೆಗೆ 1 ಕೆಜಿ ಪೆಚ್ಚು ತೆಗಿಯಬೇಕು, ಸಾಗರ, ಶಿಕಾರಿಪುರ ಮತ್ತು ಹೊಸನಗರ ಭಾಗಗಳಲ್ಲಿ ಖೇಣಿ ಮಾಡುವವರು ಆಗಸ್ಟ್ 15ರ ನಂತರ ಕಟಾವು ಆರಂಭಿಸಬೇಕು, ಕಟಾವು ಆರಂಭವಾದಂದಿನಿಂದ ಪ್ರತೀ 30 ರಿಂದ 35 ದಿನಗಳಿಗೊಮ್ಮೆ ಕಟಾವು ಮಾಡಬೇಕು, ಒಂದು ಕ್ವಿಂಟಾಲ್ ಹಸಿ ಅಡಕೆಗೆ 10 ಕೆಜಿ ರಾಶಿ ಅಡಕೆ ನೀಡಬೇಕು, ತೋಟಗಳಲ್ಲಿ ನಾವು ಕಟಿಂಗ್ ಮಾಡಿರು ಅಡಕೆಯನ್ನು ಮಾತ್ರ ಎಕ್ಕಿ ತರಬೇಕು, ತಾನಾಗಿಯೇ ಉದುರಿರುವ, ಅಂಡುವಡಕ, ಗಿಳಿ ಕಡಿದ ಮತ್ತು ಮಿಳ್ಳೆ ಅಡಕೆಯನ್ನು ತರಬಾರದು, ಹಸಿ ಅಡಕೆಯನ್ನು ತೋಟದಲ್ಲಿ ಜರಡಿ ಹೊಡೆದು ಕಸವನ್ನು ಬೇರ್ಪಡಿಸಿಕೊಂಡು ತೂಕಮಾಡಿಕೊಳ್ಳಬೇಕು, ಒಣಗಿದ ರಾಶಿ ಅಡಕೆಯನ್ನು ಮಾರಾಟ ಮಾಡುವಾಗ ಒಂದು ಚೀಲಕ್ಕೆ 300 ಗ್ರಾಂ ಪೆಚ್ಚು ನೀಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲು ಮುಂದಾಗಿದೆ.

ಈ ಎಲ್ಲಾ ನಿರ್ಣಯಗಳನ್ನು ರೈತರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಖೇಣಿದಾರರು ಮಾತ್ರ ಈ ನಿರ್ಣಯಗಳಿಗೆ ಬದ್ಧರಾಗಿದ್ದರೆ. ಇದರಿಂದ ಮುಂದಿನ ದಿನಗಳಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಪಕ್ಕಾ ರಾಶಿ ಅಡಕೆಗೆ ಮಾತ್ರ ಒಳ್ಳೆಯ ಬೆಲೆ ಇದೆ. ಕಲಬೆರಕೆ, ಬಲಿತ ಬಿರುಸು ಅಡಕೆ ಏನಾದರೂ ರಾಶಿಯಲ್ಲಿ ಕಂಡುಬಂದರೆ ಇಡೀ ಲಾಟ್ ತಿರಸ್ಕೃತಗೊಳ್ಳುತ್ತಿದೆ. ಆದ್ದರಿಂದ ಮೇಲಿನ ಸಲಹೆಗಳನ್ನು ಚಾಚೂ ತಪ್ಪದೆ ಖೇಣಿದಾರರು ಅನುಸರಿಸಬೇಕು ಎಂಬುದು ಸಂಘಟಕರ ವಾದವಾಗಿದೆ.

ರೈತರ ಮತ್ತು ಖೇಣಿದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಡಕೆ ಬೆಳೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ ಅನಿವಾರ್ಯತೆಯಿಂದ ಸಂಘಟನೆಯನ್ನು ಸ್ಥಾಪಿಸಬೇಕಾಗಿದೆ. ಉತ್ತಮ ಗುಣಮಟ್ಟದ ಅಡಕೆಯ ಉತ್ಪಾದನೆಯಾಗಬೇಕಾದರೆ ಕೆಲವೊಂದು ವಿಚಾರದಲ್ಲಿ ರಾಜಿ ಮಾಡಿಕೊಳ್ಳಲೇಬೇಕು. ಸಂಘ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.

-ಕೆ.ವಿ.ಲೋಹಿತ್ ಕಣಿವೆಮನೆ, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಅಡಿಕೆ ಖೇಣಿದಾರರ ಸೌಹಾರ್ಧ ಸಹಕಾರ ಸಂಘ.

ಈ ಬಾರಿ ಅನೇಕ ಜನ ಖೇಣಿದಾರರು ತುಂಬಾ ನಷ್ಟ ಅನುಭವಿಸಿ ಮನೆಮಟ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಮುಂದಿನ ದಿಗಳಲ್ಲಿ ಉತ್ತಮ ಗುಣಮಟ್ಟದ ಅಡಕೆ ಇದ್ದರೆ ಮಾತ್ರ ಮಾರುಕಟ್ಟೆಯಲ್ಲಿ ಬೆಲೆ. ಆದ್ದರಿಂದ ಖೇಣಿದಾರರು ಪೈಪೋಟಿಯನ್ನು ಬಿಟ್ಟು ಉತ್ಕೃಷ್ಟ ಗುಣಮಟ್ಟದ ಅಡಕೆ ಉತ್ಪಾದನೆಗೆ ಮುಂದಾಗಬೇಕು.

- ಶ್ರೀನಿವಾಸ್ ಖೇಣಿದಾರ, ಮಾರಶೆಟ್ಟಿಹಳ್ಳಿ.

Share this article